ಶರವೇಗದಲ್ಲಿ ಅಭಿಯಾನ

7
ಶಿರಸಿ– ಹಾವೇರಿ ರೈಲು ಮಾರ್ಗ ನಿರ್ಮಾಣಕ್ಕೆ ಹೆಚ್ಚುತ್ತಿರುವ ಒತ್ತಡ, ಆನ್‌ಲೈನ್‌ನಲ್ಲಿ ಸಹಿ ದಾಖಲಿಸುತ್ತಿರುವ ಸಾರ್ವಜನಿಕರು

ಶರವೇಗದಲ್ಲಿ ಅಭಿಯಾನ

Published:
Updated:
Prajavani

ಶಿರಸಿ: ಕೇಂದ್ರದ ಬಜೆಟ್‌ ಮಂಡನೆ ಹತ್ತಿರ ಬರುತ್ತಿದ್ದಂತೆ, ಹಾವೇರಿ– ಶಿರಸಿ ನಡುವೆ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕೆಂಬ ಕೂಗು ಬಲಗೊಳ್ಳುತ್ತಿದೆ. ಹಾವೇರಿ– ಶಿರಸಿ ರೈಲ್ವೆ ಹೋರಾಟ ಸಮಿತಿಯು ವಾರದ ಹಿಂದೆ ರಚಿಸಿರುವ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ 5000ಕ್ಕೂ ಅಧಿಕ ಜನರು ರೈಲ್ವೆ ಮಾರ್ಗ ಮಂಜೂರು ಗೊಳಿಸಬೇಕೆಂಬ ಹಕ್ಕೊತ್ತಾಯ ದಾಖಲಿಸಿದ್ದಾರೆ.

‘ಬೆಂಗಳೂರು- ಮುಂಬೈ ಬ್ರಾಡ್‌ಗೇಜ್‌ನ ಮುಖ್ಯ ಮಾರ್ಗಕ್ಕೆ ಶಿರಸಿ– ಹಾವೇರಿ ನಡುವೆ ಸಂಪರ್ಕ ಮಾರ್ಗ ನಿರ್ಮಾಣವಾದರೆ, ವಾಣಿಜ್ಯ ವಹಿವಾಟಿನ ಕೇಂದ್ರವಾಗಿರುವ ಶಿರಸಿಯ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಈ ಮಾರ್ಗದ ನಡುವೆ ಬರುವ ಹಾವೇರಿ ಜಿಲ್ಲೆಯ ಅಕ್ಕಿಆಲೂರು, ಹಾನಗಲ್, ಶಿವಮೊಗ್ಗ ಜಿಲ್ಲೆಯ ತಿಳುವಳ್ಳಿ, ಜಡೆ ಮೊದಲಾದ ಪ್ರದೇಶಗಳ ಜನರಿಗೆ ರೈಲ್ವೆ ಸಂಪರ್ಕ ಲಭ್ಯವಾಗುತ್ತದೆ’ ಎಂದು ಹಾವೇರಿ– ಶಿರಸಿ ರೈಲ್ವೆ ಹೋರಾಟ ಸಮಿತಿಯು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯೆಲ್ ಅವರಿಗೆ ಪತ್ರ ಬರೆದಿದ್ದಾರೆ.

‘ಜಗತ್ತಿನ ಯಾವುದೇ ಭಾಗದಲ್ಲಿರುವ ಶಿರಸಿ ಸುತ್ತಲಿನ ಜನರು ಸಹ ಸರ್ಕಾರದ ಮುಂದೆ ಒಕ್ಕೊರಲಿನ ಬೇಡಿಕೆಯಿಡಲು ಅನುಕೂಲವಾಗುವಂತೆ, change.org (https:/chng.it/G8dkNY72FM) ವೆಬ್‌ಸೈಟ್‌ನಲ್ಲಿ ಆಂದೋಲನ ಆರಂಭಿಸಲಾಗಿದೆ. ಕಳೆದ ಶುಕ್ರವಾರದಿಂದ ಇಲ್ಲಿಯವರೆಗೆ 5,130ಕ್ಕೂ ಅಧಿಕ ಜನರು, ಈ ರೈಲ್ವೆ ಮಾರ್ಗ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಅವರಲ್ಲಿ ಹಲವರು ಯಾಕಾಗಿ ಈ ಮಾರ್ಗ ಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಆನ್‌ಲೈನ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ಸಿಗುತ್ತಿದೆ’ ಎನ್ನುತ್ತಾರೆ ಹೋರಾಟ ಸಮಿತಿಯ ಸಂಚಾಲಕ ಡಾ. ಕೆ.ವಿ.ಶಿವರಾಮ.

‘ಈ ರೈಲ್ವೆ ಮಾರ್ಗ ನಿರ್ಮಾಣ ಸಂಬಂಧ 2015ರಲ್ಲೇ ಸಮೀಕ್ಷೆ ನಡೆದಿದೆ. 80 ಕಿ.ಮೀ ಉದ್ದದ ಮಾರ್ಗದಲ್ಲಿ ಬಹುತೇಕ ಬಯಲು ಪ್ರದೇಶ ಇರುವುದರಿಂದ ಅತ್ಯಂತ ಕಡಿಮೆ ಅರಣ್ಯ ನಾಶವಾಗುತ್ತದೆ. ಶಿರಸಿಯಿಂದ ಬಿಸಲಕೊಪ್ಪ ನಡುವಿನ 15 ಕಿ.ಮೀ ದೂರದಲ್ಲಿ ಅರಣ್ಯವಿದ್ದು, ಇಲ್ಲೂ ಸಹ ಹೆಚ್ಚು ಮರಗಳ ನಾಶವನ್ನು ತಪ್ಪಿಸಬಹುದು. ಎಲ್ಲಿಯೂ ಟನಲ್ ನಿರ್ಮಾಣ ಮಾಡುವ ಅಗತ್ಯವಿಲ್ಲ. ಒಂದು ಕಡೆ ಮಾತ್ರ ಸೇತುವೆ ನಿರ್ಮಿಸಬೇಕಾಗುತ್ತದೆ’ ಎಂದು ಅವರು
ಪ್ರತಿಕ್ರಿಯಿಸಿದರು.

ಈ ಮಾರ್ಗದ ಕೆಲವು ಪಂಚಾಯ್ತಿಗಳೂ ಬೆಂಬಲ ನೀಡಿವೆ. ಜನರ ಆನ್‌ಲೈನ್ ಬೇಡಿಕೆಗಳನ್ನು ಕೇಂದ್ರ ಸಚಿವರಿಗೆ ಇ–ಮೇಲ್ ಮಾಡಲಾಗುವುದು
-ಡಾ.ಕೆ.ವಿ. ಶಿವರಾಮ, ಹಾವೇರಿ– ಶಿರಸಿ ರೈಲ್ವೆ ಹೋರಾಟ ಸಮಿತಿ ಸಂಚಾಲಕ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !