ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನ ಗಡಿಗುಂಟ ಕಣ್ಣೀರ ಕೋಡಿ

ಗಡಿನಾಡವರು ಕಾದಿಹರು ಕುಮಾರ ಬರುವರೆಂದು
Last Updated 11 ನವೆಂಬರ್ 2018, 2:44 IST
ಅಕ್ಷರ ಗಾತ್ರ

ಬೆಂಗಳೂರು/ಹುಬ್ಬಳ್ಳಿ: ‘ಜ್ಯೋತಿಯ ಮಣಿ ದೀಪಗಳಲ್ಲಿ, ಕತ್ತಲು ಕಗ್ಗತ್ತಲು ಇಲ್ಲಿ; ಕೂಳನು ಹೆಮ್ಮೆಗೆ ಬಿಸುಡುವರಲ್ಲಿ, ಹೊಟ್ಟೆಗೆ ಇಲ್ಲದೇ ಕೊರಗುವರಿಲ್ಲಿ...’

ನಾಡಿನುದ್ದಕ್ಕೂ ಪರ ರಾಜ್ಯಗಳಗಡಿಗೆ ಚಾಚಿಕೊಂಡಿರುವ ನೂರಾರು ಹಳ್ಳಿಗಳು, ಕುಗ್ರಾಮಗಳ ಕನ್ನಡಿಗರು ತಮ್ಮ ಕೈಗೆಟುಕದ ಕನಿಷ್ಠ ನೆಮ್ಮದಿಯ ಬದುಕಿಗೆ ಮಹಾನಗರಗಳ ವೈಭವವನ್ನು ಹೋಲಿಸಿಕೊಂಡು ಈಗಲೂ ಹೇಳಬಹುದಾದ ಮಾತಿಗೆ ಕವಿ ಕುವೆಂಪು ಅವರ ಈ ಮೇಲಿನ ಸಾಲು ಉದಾಹರಣೆಯಂತಿದೆ.

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಹುಯಿಲಗೋಳ ನಾರಾಯಣರಾಯರು ಬಯಸಿ, ಬರೆದಿದ್ದರು. ಗಡಿ ರೇಖೆಗಳ ಆಚೀಚೆ ಹರಿದು ಹಂಚಿದ್ದ ಕನ್ನಡಿಗರನ್ನು ಒಂದುಗೂಡಿಸಲು ನಡೆದ ಏಕೀಕರಣ ಚಳವಳಿಯ ಫಲವಾಗಿ ಕನ್ನಡನಾಡೇನೋ ಉದಯವಾಯಿತು. ನಂತರದ 62 ಸುದೀರ್ಘ ವರ್ಷಗಳಲ್ಲಿಯೂ ಗಡಿನಾಡಿಗರ ಪಾಲಿಗೆ ವಸಂತ ಉದಯವಾಗಲೇ ಇಲ್ಲ.

ಅಭಿವೃದ್ಧಿಯೆಂಬುದು ಮಹಾನಗರ ಕೇಂದ್ರೀಕೃತವಾಗಿದ್ದು, ಹೆಚ್ಚೆಂದರೆ ತಾಲ್ಲೂಕು ಕೇಂದ್ರವನ್ನು ಮುಟ್ಟಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡು ಹೀಗೆ ನೆರೆ ರಾಜ್ಯಗಳ ಅಂಚಿನಲ್ಲಿರುವ ಗಡಿ ಗ್ರಾಮಗಳ ಗೋಳು ನಿರಂತರ ಕಣ್ಣೀರಧಾರೆ. ಇಲ್ಲಿ ಅಭಿವೃದ್ಧಿಯೆಂಬುದು ಕನ್ನಡಿಯೊಳಗಿನ ಗಂಟು. ಮೂಲಸೌಕರ್ಯ ಸುಧಾರಣೆಗೆ ಸರ್ಕಾರಗಳು ನೀಡಿದ್ದು ಭಿಕ್ಷೆಯ ಬಿಡಿಗಾಸು. ಪರಭಾಷಿಕರ ಮಧ್ಯೆ ಸೋದರತ್ವದ ಸಂಬಂಧ, ಪರ ರಾಜ್ಯದ ಜತೆ ವ್ಯಾವಹಾರಿಕ ನಂಟು ಕಟ್ಟಿಕೊಂಡು ಬಂದ ಗಡಿ ಜನರು ಕನ್ನಡ ನಾಡೊಳಗೆ ಇದ್ದೂ ಕನ್ನಡಿಗರಂತೆ ಸೌಲಭ್ಯ ಸಿಗದೇ ಸದಾ ಅನಾಥ ಪ್ರಜ್ಞೆಯ ಬೇಗುದಿಯಲ್ಲಿ ಬೆಂದು ನೊಂದವರು; ನೋಯುತ್ತಿರುವವರು.

ಇದು ಒಂದು ಗಡಿಯ ಕಥೆಯಲ್ಲ; 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಗೊತ್ತೋ ಗೊತ್ತಿಲ್ಲದೆಯೋ ಮೈಸೂರು ರಾಜ್ಯದ ಪರಿಧಿಯೊಳಗೆ ಬಂದವರ ನೋವಿನ ಕಥನಗಳ ಧಾರಾವಾಹಿ ಇದು. ಬೆಳಗಾವಿ ಸೇರಿದಂತೆ ಗಡಿ ಭಾಗದಲ್ಲಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿಗರು ಕ್ಯಾತೆ ತೆಗೆದರೋ ಆಗ ನಮ್ಮ ರಾಜಕಾರಣಿಗಳು ಅತ್ತ ದಿಟ್ಟಿ ಹಾಯಿಸಿದರು. ಚಿಕ್ಕಾಸು ಬಿಡುಗಡೆ ಮಾಡಿದ ಸರ್ಕಾರ, ಅಭಿವೃದ್ಧಿಯ ಕುರುಹುಗಳು ಗೋಚರಿಸುವಂತೆ ಮಾಡಿತು. ಮರಾಠಿಗರ ತಂಟೆಗೆ ಅದುರಿ, ‘ನಾಡಪ್ರೇಮ’ ಉಕ್ಕಿತೇ ವಿನಃ ಅಲ್ಲಿನ ಜನರ ಬಾಳು ಸುಂದರವಾಗಿಸುವ ಕನಸು ಆಳುವವರ ಮನಸ್ಸಿನಲ್ಲಿ ಅರಳಲೇ ಇಲ್ಲ.

ಈ ಭಾಗವನ್ನು ಬಿಟ್ಟರೆ ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವ ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಮಗ್ಗುಲಿನಲ್ಲಿ ಈತನಕ ಯಾವ ಅಭಿವೃದ್ಧಿಯೂ ಇಲ್ಲ. ಶಾಲೆಗಳ ಸುಧಾರಣೆ, ರಸ್ತೆ ನಿರ್ಮಾಣ, ಬಸ್ಸುಸೌಕರ್ಯ ಮುಂತಾದ ಯಾವುದಕ್ಕೂ ಸರ್ಕಾರ ಆಸಕ್ತಿ ತೋರಲಿಲ್ಲ. ಮರಾಠಿಗರ ಉಪಟಳಕ್ಕೆ ಬೆದರಿ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ, ಪ್ರತ್ಯೇಕತೆಯ ಕೂಗಿಗೆ ಅಂಜಿ ‘ಉತ್ತರ’ಕ್ಕೆ ನ್ಯಾಯ ಒದಗಿಸುವ ಒಣಮಾತುಗಳನ್ನು ಆಳುವವರು ಆಡುತ್ತಲೇ ಬಂದಿದ್ದಾರೆ. ಅವೆಂದೂ ಕಾರ್ಯರೂಪಕ್ಕೆ ಇಳಿದ ನಿದರ್ಶನವಿಲ್ಲ.

ಹಿಂದೆ ನಾಡು, ಸೀಮೆಯನ್ನು ಆಳಿದ ರಾಜರು ಮಾರುವೇಷದಲ್ಲಿ ತಮ್ಮ ರಾಜ್ಯದ ಗಡಿಗಳಿಗೆ ಹೋಗಿ ಅಲ್ಲಿನ ಜನರ ಜತೆ ಸಂವಹನ ನಡೆಸುತ್ತಿದ್ದರು. ನೆರೆ ನಾಡು–ಸೀಮೆಯ ರಾಜ ಗಡಿ ಭಾಗದ ಜನರನ್ನು ನೋವನ್ನು ಬಳಸಿಕೊಂಡು ತನ್ನ ಅಧಿಕಾರಕ್ಕೆ ಸಂಚಕಾರ ತರುತ್ತಾನೆ ಎಂಬ ಭಯದಿಂದ ಗಡಿಯಂಚಿನ ಜನರ ನೋವಿಗೆ ಕಿವಿಯಾಗುವ ಪರಿಪಾಟ ಇತ್ತು. ಈಗ ರಾಜ್ಯ ಅತಿಕ್ರಮಣದ ಭಯವಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿಯಾದವರಿಗೆ ಗಡಿಯಲ್ಲಿರುವವರು ‘ಅನಾಥ’ರ ಬವಣೆ ಹೇಗಿದೆ ಎಂದು ತಿಳಿದುಕೊಳ್ಳುವ ಅಸಲು ಕುತೂಹಲವಾದರೂ ಇರಬೇಕಿತ್ತು. ಕರ್ನಾಟಕವನ್ನು ಇಲ್ಲಿಯವರೆಗೆ ಆಳಿದ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಗಡಿಯತ್ತ ಮುಖ ಮಾಡಿಲ್ಲ. ಅಷ್ಟರಮಟ್ಟಿಗೆ ಗಡಿ ಗ್ರಾಮಗಳ ಜನರನ್ನು ಅಲಕ್ಷಿಸಿದ್ದನ್ನು ನೋಡಿದರೆ ನಮ್ಮನ್ನಾಳುವವರಿಗೆ ಕನಿಷ್ಠ ಉತ್ತರದಾಯಿತ್ವ ಇದೆಯೇ ಎಂಬ ಪ್ರಶ್ನೆ ಮೂಡದೇ ಇರದು.

ಈ ಭಾಗದ ಸಂಸದರು, ಶಾಸಕರೂ ಗಡಿ ಸಮಸ್ಯೆಯನ್ನು ತಮ್ಮ ರಾಜಕೀಯ ಏಳ್ಗೆಗೆ ಬಳಕೆ ಮಾಡಿಕೊಂಡಿದ್ದು ಬಿಟ್ಟರೆ ಗಡಿಯ ಕಡೆಗೆ ಇವರದ್ದು ಮೆಳ್ಳೆಗಣ್ಣಿನ ನೋಟ. ಜನರದ್ದು ಶಾಪಗ್ರಸ್ತ ಸ್ಥಿತಿ.

**

ಗಡಿನಾಡಿನ ಬಾಳು ಬರೀ ಗೋಳು

ಚಾಮರಾಜನಗರ ಜಿಲ್ಲೆಯ ಹನೂರಿನಿಂದ ಹಿಡಿದು ದೂರದ ಬೀದರ್‌ನ ಔರಾದ, ಭಾಲ್ಕಿಯವರೆಗೆ ಚಾಚಿಕೊಂಡಿರುವ ಗಡಿಗಳ ಹತ್ತಿರಕ್ಕೊಮ್ಮೆ ಹೋಗಿ ನೋಡಿ...

ಪ್ರಾಥಮಿಕ ಶಾಲೆಗಳಿದ್ದರೂ ಶಿಕ್ಷಕರಿಲ್ಲ; ಪ್ರೌಢಶಾಲೆಗಳಿಗೆ ನೆರೆ ರಾಜ್ಯದ ಶಾಲೆಯ ದಾರಿಗುಂಟ ಸಾಗಬೇಕು; ಅಪ್ಪಿತಪ್ಪಿ ಆರೋಗ್ಯ ಹದಗೆಟ್ಟರೆ ಇರುವ ಬೈಕಿನಲ್ಲಿ ಹಿಂದೊಬ್ಬರನ್ನು ಆಸರೆಗೆ ಕೂರಿಸಿಕೊಂಡು ಮಧ್ಯೆ ರೋಗಿಯ ಜೀವವನ್ನು ಹಿಡಿದುಕೊಂಡು ನೆರೆ ರಾಜ್ಯದ ಆಸ್ಪತ್ರೆಗೆ ದೌಡಾಯಿಸಬೇಕು; ಜೀವ ಉಳಿದರೆ ಉಳಿದೀತು ಹೋದರೆ ಹೋದೀತು ಎಂಬ ಆತಂಕವನ್ನು ಉಡಿಯಲ್ಲಿ ಕಟ್ಟಿಕೊಂಡೇ ಸಾಗಬೇಕು. ಇಂತಹ ದಯನೀಯ ಸ್ಥಿತಿಯನ್ನು ಕಾಣದೇ ಹೋದ ರಾಜಕಾರಣಿಗಳ ನಿರ್ಲಜ್ಜ ನಿರ್ಲಕ್ಷ್ಯಕ್ಕೆ ಏನೆನ್ನಬೇಕು?

ಕರ್ನಾಟಕವೇನೋ ಅಖಂಡವಾಯಿತು. ಆದರೆ ತುಂಡು ತುಂಡಾದ ಮನಸ್ಸುಗಳನ್ನು, ನಾವು ಕನ್ನಡಿಗರೇ ಅಲ್ಲವೇನೋ ನಮಗೆ ಏಕೆ ಈ ಹೀನಸ್ಥಿತಿ ಎಂಬ ಮನದಾಳದ ನೋವನ್ನು ಮರೆಸಿ, ಅವರ ಅಳಲಿಗೆ ಕಿವಿಯಾಗಬೇಕಾಗಿದೆ. ಕನ್ನಡ ರಾಜ್ಯೋತ್ಸವದ ತಿಂಗಳ ಈ ಶುಭ ಹೊತ್ತಿನಲ್ಲಿ ನಾಡನ್ನಾಳವವರು ಈ ದಿಕ್ಕಿನತ್ತ ಕಾರ್ಯಪ್ರವೃತ್ತರಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT