ಶನಿವಾರ, ಮೇ 21, 2022
28 °C

ದಲಿತ ಕೇರಿಯಲ್ಲಿ ಸಾವು; ಮೇಲ್ಜಾತಿಯವರಿಂದ ಕಿರಾಣಿ ಅಂಗಡಿ, ಹೋಟೆಲ್ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದಲಿತ ಕೇರಿಯಲ್ಲಿ ವ್ಯಕ್ತಿಯೊಬ್ಬರು ನಿಧನರಾಗಿದ್ದಕ್ಕೆ ಮೇಲ್ಜಾತಿಯವರು ಕಿರಾಣಿ ಅಂಗಡಿ ಮತ್ತು ಹೋಟೆಲ್‌ಗಳನ್ನು ಬಂದ್‌ ಮಾಡಿ ‘ಅಸಹಕಾರ’ ತೋರಿಸಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲ್ಲೂಕು ಜಾಗಟಗಲ್‌ನಲ್ಲಿ ಗುರುವಾರ ನಡೆದಿದೆ.

ವಿವಿಧ ದಲಿತ ಸಂಘಟನೆಯವರು ಗಬ್ಬೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದರು. ಕೂಡಲೇ ಗ್ರಾಮ ಪಂಚಾಯಿತಿ ಪಿಡಿಒ, ಅಂಗಡಿಗಳ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿದರು. ಹೀಗಾಗಿ ಅದೇ ದಿನ ಸಂಜೆ ವ್ಯಾಪಾರ ನಡೆಸಿದರು. ಈ ಘಟನೆಗೆ ಸಂಬಂಧಿಸಿದ ಛಾಯಾಚಿತ್ರಗಳು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಗ್ರಾಮದಲ್ಲಿ ಪರಿಶಿಷ್ಟ ಪಂಗಡ (ಬೇಡ) ಜನರಿಗೆ ಸೇರಿದ ಎರಡು ಕಿರಾಣಿ, ಮೂರು ಹೋಟೆಲ್‌ಗಳಿವೆ. ಕುರುಬ ಸಮುದಾಯದ ಒಂದು ಕಿರಾಣಿ, ಎರಡು ಹೋಟೆಲ್‌ಗಳು, ಮಡಿವಾಳ ಸಮುದಾಯದ ಒಂದು ಕಿರಾಣಿ, ಒಂದು ಹೋಟೆಲ್‌ ಇದೆ.

ಜಾಡಲದಿನ್ನಿ ಪಿಡಿಒ ಬಸವರಾಜ ನೀಡಿದ ನೋಟಿಸ್‌ನಲ್ಲಿ ‘ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ಮೃತಪಟ್ಟ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಅಂಗಡಿ, ಹೋಟೆಲ್‌ ಮುಚ್ಚಿದ್ದು, ತಕ್ಷಣ ತೆರೆದು ವ್ಯಾಪಾರ ಆರಂಭಿಸಬೇಕು’ ಎಂದು ಉಲ್ಲೇಖಿಸಿದರು.

‘ಡಿಸೆಂಬರ್‌ನಲ್ಲಿ ಜಾತ್ರೆಯ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಇದರಿಂದಾಗಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಜನರ ಮಧ್ಯೆ ವೈಷಮ್ಯವಿದೆ. ತಿಂಗಳ ಹಿಂದೆ ಪರಿಶಿಷ್ಟ ಪಂಗಡದವರ ಓಣಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಮೊದಲಿನ ಪದ್ಧತಿ ಪ್ರಕಾರ ಗೋರಿ ತೋಡಲು ಕೇರಿಯಿಂದ ಯಾರೂ ಬರಲಿಲ್ಲ. ಈಗ ಅವರ ಓಣಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕಾಗಿ ಹೆಚ್ಚಿನ ಜನ ಸೇರುವುದರಿಂದ ವಿನಾಕಾರಣ ಮತ್ತೆ ಜಗಳ ಏರ್ಪಡಬಹುದು ಎಂಬ ಭೀತಿಯಿಂದ ಆ ಸಮಯದಲ್ಲಿ ಅಂಗಡಿ ಬಂದ್‌ ಮಾಡಿದ್ದೆವು. ಸಂಜೆ ಮತ್ತೆ ಅಂಗಡಿ ತೆರೆದಿದ್ದೆವು’ ಎಂದು ಕಿರಾಣಿ ಅಂಗಡಿ ಮಾಲೀಕ ರಾಚಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಅಸ್ಪೃಶ್ಯತೆ ಜೀವಂತ: ಸದನದಲ್ಲಿ ಚರ್ಚೆ
ಬೆಂಗಳೂರು: ರಾಜ್ಯದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂದು ವಿಧಾನಸಭೆಯಲ್ಲಿ ಹಲವು ಸದಸ್ಯರು ಧ್ವನಿ ಎತ್ತಿದರು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಕೊಳ್ಳೇಗಾಲದ ಬಿಎಸ್‌ಪಿಯ ಎನ್‌.ಮಹೇಶ್‌, ರಾಜ್ಯದಲ್ಲಿ ಶೇ 70 ರಷ್ಟು ಹಳ್ಳಿಗಳಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ ಎಂದರು. ಈ ವೇಳೆ ಕಂಪ್ಲಿಯ ಜೆ.ಎನ್‌.ಗಣೇಶ್‌, ‘ನಮ್ಮ ಕ್ಷೇತ್ರದಲ್ಲಿ ಕೆಲವು ಕಡೆಗಳಲ್ಲಿ ದಲಿತರಿಗೆ ಪ್ರತ್ಯೇಕ ಲೋಟ ಇಡುತ್ತಾರೆ’ ಎಂದು ಗಮನ ಸೆಳೆದರು.

ಜೆಡಿಎಸ್‌ನ ಡಾ.ಕೆ.ಅನ್ನದಾನಿ, ‘ನನ್ನ ಮಗ ಎಂಬಿಬಿಎಸ್‌ ಕಲಿಯುತ್ತಿದ್ದಾನೆ. ಮಗನ ಜಾತಿ ತಿಳಿದ ಕೂಡಲೇ ಆತ್ಮೀಯ ಗೆಳತಿಯೊಬ್ಬಳು ಮಾತನಾಡುವುದನ್ನೇ ಬಿಟ್ಟಳು. ಇಂತಹ ಸಮಾಜದಲ್ಲಿ ನಾವಿದ್ದೇವೆ’ ಎಂದರು. ಕಾಂಗ್ರೆಸ್‌ನ ಪ್ರಸಾದ್‌ ಅಬ್ಬಯ್ಯ, ಜೆಡಿಎಸ್‌ನ ಶ್ರೀನಿವಾಸ ಗೌಡ ಧ್ವನಿಗೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು