ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ: ನಿರ್ಮಾಣಕ್ಕಿರುವ ಆಸಕ್ತಿ ನಿರ್ವಹಣೆಗಿಲ್ಲ

ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ವಾಹನಗಳ ಸಂಚಾರ, ಕಳೆ ಬೆಳೆದು ಶಿಥಿಲಗೊಳ್ಳುವ ಆತಂಕ
Last Updated 15 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ಬಳಿ ಮೇಲ್ಸೇತುವೆಯೊಂದು ಸಮರ್ಪಕ ನಿರ್ವಹಣೆಯಿಲ್ಲದೇ ಕುಸಿದು ಐವರು ಸಾವಿಗೀಡಾದ ದುರ್ಘಟನೆ ನಗರದ ಮೇಲ್ಸೇತುವೆಗಳ ದೃಢತೆಯ ಬಗ್ಗೆಯೂ ಚಿತ್ತಹರಿಯುವಂತೆ ಮಾಡಿದೆ. ನಿರ್ವಹಣೆ ವಿಚಾರದಲ್ಲಿ ನಮ್ಮ ನಗರದ ಮೇಲ್ಸೇತುವೆಗಳ ಕಥೆಯೂ ಭಿನ್ನವೇನಲ್ಲ.

ನಗರದಲ್ಲಿ ಪ್ರತಿವರ್ಷವೂ ಮೇಲ್ಸೇತುವೆಗಳು, ಕೆಳಸೇತುವೆಗಳು ನಿರ್ಮಾಣಗೊಳ್ಳುತ್ತಲೇ ಇವೆ. ಇವುಗಳ ನಿರ್ಮಾಣದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯು ತೋರಿಸುವ ಆಸಕ್ತಿಯನ್ನು ಅವುಗಳ ನಿರ್ವಹಣೆ ವಿಚಾರದಲ್ಲಿ ತೋರಿಸುತ್ತಿಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಹಾಗೂ ವರ್ತುಲ ರಸ್ತೆಗಳಲ್ಲಿ ನಿರ್ಮಿಸಿರುವ 20ಕ್ಕೂ ಅಧಿಕ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನೂ ನಿರ್ವಹಣೆ ಮಾಡಲಾಗದೆ ಬಿಬಿಎಂಪಿಗೆ ಮೂರು ವರ್ಷಗಳ ಹಿಂದೆ ಹಸ್ತಾಂತರಿಸಿದೆ. ಅವುಗಳನ್ನೂ ನೋಡಿಕೊಳ್ಳುವ ಹೊಣೆ ಪಾಲಿಕೆಯ ಹೆಗಲೇರಿದೆ.

1999ರಲ್ಲಿ ಕೆ.ಆರ್.ಮಾರುಕಟ್ಟೆಯಿಂದ ಮೈಸೂರು ರಸ್ತೆ ಕಡೆಗೆ ₹ 97 ಕೋಟಿ ವೆಚ್ಚದಲ್ಲಿ 2.65 ಕಿ.ಮೀ ಉದ್ದದ ಸೇತುವೆ ನಿರ್ಮಿಸುವುದರ ಮೂಲಕ ಉದ್ಯಾನನಗರಿಯಲ್ಲೂ ಮೇಲ್ಸೇತುವೆಗಳ ಯುಗ ಆರಂಭವಾಯಿತು. ಬಳಿಕ ರಿಚ್ಮಂಡ್‌ ವೃತ್ತದ ಬಳಿ 2001ರಲ್ಲಿ ₹18 ಕೋಟಿ ವೆಚ್ಚದಲ್ಲಿ 1.32 ಕಿ.ಮೀ ಉದ್ದದ ಸೇತುವೆ ನಿರ್ಮಾಣಗೊಂಡಿತು. ಇವುಗಳೆಲ್ಲವನ್ನೂ ಮೀರಿಸುವಂತೆ 2003ರಲ್ಲಿ ಹೆಬ್ಬಾಳದಲ್ಲಿ ₹ 65 ಕೋಟಿ ವೆಚ್ಚದಲ್ಲಿ 5.35 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣಗೊಂಡಿತು. ಆ ನಂತರ ವರ್ಷದಿಂದ ವರ್ಷಕ್ಕೆ ಸೇತುವೆಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ.

ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಏಕಕಾಲಕ್ಕೆ ಗರಿಷ್ಠ 2,200 ಪಿಸಿಯುಗಳಷ್ಟು ವಾಹನಗಳನ್ನು ಹೊರುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಆದರೆ ಅಲ್ಲಿ ದಟ್ಟಣೆ ಅವಧಿಯಲ್ಲಿ 2,800 ಪಿಸಿಯುಗಳಿಗಿಂತಲೂ ಹೆಚ್ಚು ವಾಹನಗಳು ಸಾಗುತ್ತವೆ ಎನ್ನುತ್ತದೆ ನಗರಸಾರಿಗೆ ತಜ್ಞ ಎಂ.ಎನ್‌.ಶ್ರೀಹರಿ ನೇತೃತ್ವದಲ್ಲಿ ನಡೆದ ಅಧ್ಯಯನ.

ಮಹದೇವಪುರದ ಮೇಲ್ಸೇತುವೆಯಲ್ಲಿ ಬೆಳೆದ ಕಳೆ ಕೀಳುತ್ತಿರುವ ಪಾಲಿಕೆ ಸಿಬ್ಬಂದಿ
ಮಹದೇವಪುರದ ಮೇಲ್ಸೇತುವೆಯಲ್ಲಿ ಬೆಳೆದ ಕಳೆ ಕೀಳುತ್ತಿರುವ ಪಾಲಿಕೆ ಸಿಬ್ಬಂದಿ

ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ವಹಣೆ ಬೇರೆ, ಅವುಗಳ ರಚನೆಗೆ ಸಂಬಂಧಿಸಿದ ಪರಿಶೀಲನೆ ಬೇರೆ. ಯಾವುದೇ ಕಟ್ಟಡ ದೀರ್ಘ ಬಾಳಿಕೆ ಬರಬೇಕಾದರೆ ಅವುಗಳ ರಚನೆಗೆ ಸಂಬಂಧಿಸಿದ ಪರಿಶೀಲನೆಯನ್ನು ಕಾಲ ಕಾಲಕ್ಕೆ ನಡೆಸುವುದು ಕಡ್ಡಾಯ. ಆದರೆ ಈ ವಿಚಾರದಲ್ಲಂತೂ ನಿರಾಸಕ್ತಿ ಎದ್ದು ತೋರುತ್ತಿದೆ. ನಗರದ ಬಹುತೇಕ ಮೇಲ್ಸೇತುವೆಗಳು ಮಿತಿಗಿಂತ ಹೆಚ್ಚು ಹೊರೆಯನ್ನು ಹೊರುತ್ತಿರುವುದು ಗಮನಕ್ಕೆ ಬಂದ ಬಳಿಕವೂ ಅವುಗಳ ರಚನೆಗೆ ಸಂಬಂಧಿಸಿದ ಪರಿಶೀಲನೆ ನಡೆಸುವಲ್ಲಿ ಪಾಲಿಕೆ ಆಡಳಿತ ಆಸ್ಥೆ ವಹಿಸಿಲ್ಲ.

ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ರಚನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಯದ ಬಗ್ಗೆ 2018ರ ಸೆಪ್ಟೆಂಬರ್‌ನಲ್ಲಿ ಪಾಲಿಕೆ ಸಭೆಯಲ್ಲೂ ಚರ್ಚೆ ನಡೆದಿತ್ತು. ಬಳಿಕ ಈ ಸಲುವಾಗಿ ಸಮಿತಿಯೊಂದನ್ನು ರಚಿಸುವುದಾಗಿ ಪಾಲಿಕೆ ಆಯುಕ್ತರು ತಿಳಿಸಿದ್ದರು. ಆದರೆ ಇದುವರೆಗೂ ಈ ಕಾರ್ಯ ನಡೆದಿಲ್ಲ.

‘ಮೇಲ್ಸೇತುವೆಗಳ ರಸ್ತೆಗಳು ಗುಂಡಿ ಬಿದ್ದರೆ ಅದನ್ನು ಮುಚ್ಚುವ ಕಾರ್ಯವನ್ನು ನಾವು ಆಗಾಗ ನಿರ್ವಹಿಸುತ್ತೇವೆ. ಅವುಗಳ ಬೇರಿಂಗ್‌ಗಳನ್ನು, ವಿಕಸನ ಕೊಂಡಿಗಳನ್ನು (ಎಕ್ಸ್‌ಪಾನ್ಷನ್‌ ಜಾಯಿಂಟ್‌) ಆಗಾಗ್ಗೆ ತಪಾಸಣೆ ನಡೆಸುತ್ತಿರಬೇಕು. ಆಗ ಅವುಗಳಲ್ಲಿ ಸಣ್ಣಪುಟ್ಟ ಲೋಪ ಕಾಣಿಸಿಕೊಂಡರೆ ಸರಿಪಡಿಸಬಹುದು. ಬಿರುಕುಗಳು ಕಾಣಿಸಿಕೊಂಡಿವೆಯೇ,ನೀರು ಹರಿಯುವ ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಇಲ್ಲದಿದ್ದರೆ ಸಣ್ಣ ಲೋಪಗಳೇ ದೊಡ್ಡದಾಗಿ ಇಡೀ ಸೇತುವೆ ರಚನೆಗೇ ಧಕ್ಕೆ ಉಂಟಾಗುವ ಅಪಾಯ ಇದೆ. ಬೇರಿಂಗ್‌ನಲ್ಲಿ ಲೋಪವನ್ನು ಸಕಾಲದಲ್ಲಿ ಪತ್ತೆ ಹಚ್ಚದಿದ್ದರೆ ಸೇತುವೆ ಕುಸಿಯುವ ಸಾಧ್ಯೆತೆಯೂ ಇದೆ’ ಎಂದು ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.

ನಗರದಲ್ಲಿ 24 ಮೇಲ್ಸೇತುವೆಗಳಿವೆ. ಮೇಲ್ಸೇತುವೆ, ಕೆಳಸೇತುವೆ ಹಾಗೂ ಗ್ರೇಡ್‌ ಸಪರೇಟರ್‌ಗಳು ಸೇರಿ ಒಟ್ಟು 59 ರಚನೆಗಳಿವೆ. ಆದರೆ ಇವುಗಳ ನಿರ್ವಹಣೆಗೆ ಪಾಲಿಕೆ ಅನುದಾನವನ್ನೇ ನೀಡುತ್ತಿರಲಿಲ್ಲ. ಹಾಗಾಗಿ ನಿರ್ವಹಣೆ ಕಾರ್ಯ ಕಡೆಗಣನೆಗೆ ಒಳಗಾಗಿತ್ತು.

‘2019–20ನೇ ಸಾಲಿನ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನವನ್ನು ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ವಹಣೆಗೆ ಕಾಯ್ದಿರಿಸಲಾಗಿದೆ. ಇಷ್ಟೊಂದು ಅನುದಾನ ಒದಗಿಸಿದ್ದು ಇದೇ ಮೊದಲು’ ಎಂದು ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ತಿಳಿಸಿದರು.

ಪರಿಶೀಲನೆಗೆ ಬೇಕು ಪ್ರತ್ಯೇಕ ಘಟಕ
‘ನಗರದಲ್ಲಿ ವರ್ಷ ವರ್ಷವೂ ಹತ್ತಾರು ಮೇಲ್ಸೇತುವೆಗಳು ನಿರ್ಮಾಣಗೊಳ್ಳುತ್ತಲೇ ಇವೆ. ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದವು ಇವುಗೆಳಲ್ಲದರ ಮೇಲೆ ನಿಗಾ ಇಡುವುದು ಕಷ್ಟಸಾಧ್ಯ. ಹಾಗಾಗಿ ಮೇಲ್ಸೇತುವೆಗಳ ನಿರ್ವಹಣೆ ಹಾಗೂ ಅವುಗಳ ರಚನೆಗೆ ಸಂಬಂಧಿಸಿ ಪರಿಶೀಲನೆ ನಡೆಸುವುದಕ್ಕೆ ಪ್ರತ್ಯೇಕ ಕೋಶವನ್ನು ಹೊಂದುವ ಅಗತ್ಯ ಇದೆ’ ಎಂದು ಎಂಜಿನಿಯರರೊಬ್ಬರು ಅಭಿಪ್ರಾಯಪಟ್ಟರು.

‘ದಟ್ಟಣೆ ವೇಳೆ ಒತ್ತಡ ಹೆಚ್ಚು’
‘ಮೇಲ್ಸೇತುವೆಗಳ ಮೇಲೆ ಹಾದು ಹೋಗುವ ವಾಹನಗಳ ಸಂಖ್ಯೆ ಆಧಾರದಲ್ಲಿ ಅದರ ಸಂರಚನಾ ಸಾಮರ್ಥ್ಯವನ್ನು ನಿಗದಿಪಡಿಸಲಾಗುತ್ತದೆ. ಆದರೆ, ನಗರದಲ್ಲಿ ವಾಹನಗಳ ಸಂಖ್ಯೆ ಊಹೆಗೂ ಮೀರಿದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ವಾಹನ ದಟ್ಟಣೆ ತಡೆಯುವ ಉದ್ದೇಶದಿಂದ ನಿರ್ಮಿಸಿದ ಮೇಲ್ಸೇತುವೆಗಳ ಮೇಲೂ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿವೆ.ಏಕಕಾಲಕ್ಕೆ ನೂರಾರು ವಾಹನಗಳು ನಿಂತಾಗ ಅವುಗಳ ಭಾರದಿಂದಾಗಿ ಮೇಲ್ಸೇತುವೆಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತಿದೆ. ಕಾಲ ಕಾಲಕ್ಕೆ ಅವುಗಳ ರಚನೆಗೆ ಸಂಬಂಧಿಸಿದ ಪರಿಶೀಲನೆ ನಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಂಜಿನಿಯರ್‌ ಒಬ್ಬರು ಎಚ್ಚರಿಸಿದರು.

**

ಮೇಲ್ಸೇತುವೆಗಳ ರಚನೆಗೆ ಸಂಬಂಧಿಸಿದ ಪರಿಶೀಲನೆಗೆ ಸಿದ್ಧತೆ ನಡೆದಿದೆ. ಶೀಘ್ರವೇ ಈ ಕುರಿತು ಟೆಂಡರ್‌ ಕರೆಯಲಿದ್ದೇವೆ.
-ಎನ್‌.ಮಂಜುನಾಥ ಪ್ರಸಾದ್‌,ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT