ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೇಶನರಹಿತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ’

15 ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸಲು ನಿರ್ಧಾರ
Last Updated 13 ಏಪ್ರಿಲ್ 2018, 12:55 IST
ಅಕ್ಷರ ಗಾತ್ರ

ಮಂಗಳೂರು: ಕಳೆದ 5 ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್ ಬಡವರಿಗೆ ಮನೆ ನೀಡುವ ವಿಚಾರದಲ್ಲಿ ಯಾವುದೇ ಯೋಜನೆ ರೂಪಿಸದೇ, ಇದೀಗ ನಿವೇಶನರಹಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ನಿವೇಶನರಹಿತರ ಹೋರಾಟ ಸಮಿತಿ ಅಧ್ಯಕ್ಷೆ ಪ್ರಭಾವತಿ ಬೋಳೂರು ಆರೋಪಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಎಂ ಕಳೆದ ನಾಲ್ಕು ವರ್ಷಗಳಿಂದ ನಿವೇಶನ ರಹಿತರನ್ನು ಒಟ್ಟು ಸೇರಿಸಿ, ನಿವೇಶನ ರಹಿತರ ಹೋರಾಟ ಸಮಿತಿ ರಚಿಸಿ ನಿರಂತರವಾಗಿ ಹಂತಹಂತವಾಗಿ ಹೋರಾಟ ನಡೆಸಿದೆ ಎಂದರು.

ಈ ಹೋರಾಟದ ಫಲವಾಗಿ ಶಕ್ತಿನಗರ, ಕನ್ನಗುಡ್ಡೆ, ಇಡ್ಯ, ವಾಮಂಜೂರು ಪ್ರದೇಶಗಳಲ್ಲಿ ನಿವೇಶನರಹಿತರಿಗೆ ನಿವೇಶನ ಮೀಸಲು ಸಾಧ್ಯವಾಗಿದೆ. ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರಪಾಲಿಕೆ ಮುತ್ತಿಗೆ, ಶಾಸಕರ ಕಚೇರಿಗೆ ಮುತ್ತಿಗೆ, ಬೆಂಗಳೂರು ಚಲೋ, 24 ಗಂಟೆಗಳ ಧರಣಿ, 24 ಗಂಟೆ ಉಪವಾಸ ಸತ್ಯಾಗ್ರಹ, 72 ಗಂಟೆಗಳ ಹಗಲು-ರಾತ್ರಿ ಧರಣಿ, ಶಕ್ತಿನಗರದ ಮೀಸಲಿಟ್ಟ ಜಾಗದಲ್ಲಿ ಒಂದು ದಿನದ ವಾಸ್ತವ್ಯ. ಸುರತ್ಕಲ್ ಚಲೋ, ಜೈಲ್ ಭರೋ ಮೂಲಕ 83 ಜನ ನಿವೇಶನರಹಿತರು, ಸಿಪಿಎಂ ನಾಯಕರು ಸೇರಿ 2 ದಿನ ಜೈಲು ವಾಸ ಅನುಭವಿಸಿದ್ದಾರೆ. ಈ ವಿಚಾರದಲ್ಲಿ ಈಗಲೂ ಕೇಸು ನಡೆಯುತ್ತಿದೆ. ಇಂತಹ ನಿರಂತರ ಹೋರಾಟದ ಫಲವಾಗಿ ನಿವೇಶನ ಮೀಸಲು ಸಾಧ್ಯವಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತ, ಶಾಸಕರು ಕೇವಲ ಆಯ್ಕೆ ಪಟ್ಟಿ ತಯಾರಿಸಿ ರಾಜಕೀಯ ಮಾಡುತ್ತಿದ್ದಾರೆ. ಆಯ್ಕೆಯಾದ ಪಟ್ಟಿಯಲ್ಲಿ ಇನ್ನೂ ಅನರ್ಹರಿದ್ದಾರೆ.

ನಿವೇಶನ ಕೊಡುವ ಪ್ರಕ್ರಿಯೆ ಪೂರ್ಣಗೊಳ್ಳಬೇಕಾದರೆ ಟೆಂಡರ್ ಪ್ರಕ್ರಿಯೆ ಮುಗಿಯಬೇಕು. ಪಾಲಿಕೆ ಅನುದಾನ ಮೀಸಲಿಡಬೇಕು. ಆಯ್ಕೆಯಾದ ನಿವೇಶನರಹಿತರು ಬ್ಯಾಂಕ್ ಖಾತೆಯನ್ನು ಠೇವಣಿ ಇಡಬೇಕು.

ಈ ಎಲ್ಲ ಪ್ರಕ್ರಿಯೆಗಳನ್ನು ಮುಗಿಸದೇ ಕ್ಷೇತ್ರದ ಶಾಸಕರು ಪುರಭವನದಲ್ಲಿ ಸಭೆ ಕರೆದು ಮನೆ ನಂಬರ್‌ ಹಂಚುವ ನಾಟಕವಾಡಿದ್ದರು.

ಮತ್ತೆ ಒಂದು ತಿಂಗಳ ನಂತರ ಕುಲಶೇಖರ ಹಾಲ್‌ನಲ್ಲಿ ಸಭೆ ಕರೆದು ಜೆರಾಕ್ಸ್ ಪತ್ರವನ್ನು ಹಂಚಿದರು. ಈ ಎಲ್ಲ ಬೆಳವಣಿಗೆಗಳು ನಿವೇಶನರಹಿತರ ದಾರಿ ತಪ್ಪಿಸುವುದಲ್ಲವೇ? ಇದರ ಜೊತೆಗೆ ಆಯ್ಕೆಯಾದ ನಿವೇಶನರಹಿತರನ್ನು ಇಂದಿರಾಗಾಂಧಿ ಶತಮಾನೋತ್ಸವವ ಕಾರ್ಯಕ್ರಮಕ್ಕೆ ಹಾಗೂ ರಾಹುಲ್ ಗಾಂಧಿ ಬರುವ ಸಭೆಗಳಿಗೆ ಫೋನ್ ಮೂಲಕ ಕರೆಯವುದು ರಾಜಕೀಯವಲ್ಲವೇ ಎಂದು ಪ್ರಶ್ನಿಸಿದರು.

ನಿವೇಶನರಹಿತರ ಹೋರಾಟ ಸಮಿತಿ, ನಗರ ಸಮಿತಿ ಸಭೆ ಸೇರಿ ಇದೇ 15ರಂದು ನಡೆಯುವ ರಾಜಕೀಯ ಸಮಾವೇಶಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿವೆ. ಅದರ ಭಾಗವಾಗಿ ನಮ್ಮ ಸದಸ್ಯರನ್ನು ಸಮಾವೇಶಕ್ಕೆ ಕರೆಯುವ ಪ್ರಕ್ರಿಯೆಗಳು ನಡೆಯುತ್ತಿವೆ. ಎಲ್ಲೂ ನಿವೇಶನರಹಿತರ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿಲ್ಲ. ಸಮಾವೇಶದಲ್ಲಿ ಭಾಗವಹಿಸುವ ಮೂಲಕ ನಿವೇಶನ ರಹಿತರಿಗೆ ಸತ್ಯ ವಿಚಾರ ಗೊತ್ತಾದರೆ, ಕಾಂಗ್ರೆಸ್‌ ಅನ್ನು ಚುನಾವಣೆಯಲ್ಲಿ ತಿರಸ್ಕರಿಸುತ್ತಾರೆ ಎಂಬ ಭಯದಿಂದ ಕಾಂಗ್ರೆಸ್ ಮುಖಂಡರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಾವು 4 ವರ್ಷಗಳಿಂದ ಇಂತಹ ಹೇಳಿಕೆಗಳು, ಅಡೆತಡೆಗಳು ಹಲವಾರು ಬಾರಿ ಬಂದಿದ್ದರೂ, ಅದನ್ನು ಮೀರಿ ನಿರಂತರವಾಗಿ ಹೋರಾಟ ಮಾಡಿದ್ದೇವೆ. ನಿಜವಾದ ನಿವೇಶನರಹಿತರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಸಮಾವೇಶದಲ್ಲಿಯೂ ಮನೆ ಇಲ್ಲದ ನಿವೇಶನರಹಿತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಂಘಟನಾ ಸಂಚಾಲಕ ಸಂತೋಷ್‌ ಶಕ್ತಿನಗರ, ಪ್ರಧಾನ ಕಾರ್ಯದರ್ಶಿ ಮಂಜುಳಾ ಶೆಟ್ಟಿ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ಯೋಗೀಶ್‌ ಜಪ್ಪಿನಮೊಗರು, ಸಂತೋಷ್‌ಕುಮಾರ್‌ ಬಜಾಲ್‌, ರೋಹಿಣಿ ಜಲ್ಲಿಗುಡ್ಡೆ, ಶೋಭಾ ಉರ್ವಸ್ಟೋರ್, ರೋಹಿಣಿ ಮಣ್ಣಗುಡ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT