ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಮರಳಿದರು, ಹಾವೇರಿ ಚಿಣ್ಣರು!

ಶಿಕ್ಷಣ ಇಲಾಖೆ ಕಾರ್ಯಾಚರಣೆಯ ಫಲ * ನೋಟಿಸ್‌ಗೆ ಪಾಠ ಕಲಿತ ಪೋಷಕರು
Last Updated 20 ಸೆಪ್ಟೆಂಬರ್ 2019, 19:41 IST
ಅಕ್ಷರ ಗಾತ್ರ

ಹಾವೇರಿ: ಇದ್ದಿಲು ಸುಡುತ್ತಿದ್ದ ಕೈಗಳೀಗ ಬಳಪ ಹಿಡಿದಿವೆ. ಇಟ್ಟಿಗೆ ಹೊರುತ್ತಿದ್ದ ಮಕ್ಕಳ ಹೆಗಲಿಗೀಗ ಶಾಲಾ ಬ್ಯಾಗ್‌ ಸೇರಿದೆ. ತುತ್ತಿನ ಚೀಲಕ್ಕಾಗಿ ಹೊಲದಲ್ಲಿ ದುಡಿಯುತ್ತಿದ್ದ ಮಕ್ಕಳ ಹೊಟ್ಟೆಯನ್ನೀಗ ಮಧ್ಯಾಹ್ನದ ಬಿಸಿಯೂಟ ತುಂಬಿಸುತ್ತಿದೆ. ಋತುಮತಿ ಆಗಿದ್ದಕ್ಕೇ ಶಿಕ್ಷಣ ವಂಚಿತಳಾಗಿದ್ದ ಹೆಣ್ಣು ಮಗಳೂ ಈಗ ಅಕ್ಷರ ಕಲಿಯುತ್ತಿದ್ದಾಳೆ...

ಕಳೆದ ಒಂದೂವರೆ ತಿಂಗಳಲ್ಲಿ ಇಂತಹ ಮಹತ್ವದ ಬದಲಾವಣೆಗಳಿಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ. ಶಾಲೆಯಿಂದ ಹೊರಗುಳಿದಿದ್ದ 584 ಮಕ್ಕಳ ಪೈಕಿ ಕಳೆದ ವರ್ಷ 61 ಮಕ್ಕಳನ್ನಷ್ಟೇ ಹುಡುಕಿದ್ದ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಇದೀಗ ವಿಶೇಷ ಕಾರ್ಯಾಚರಣೆ ಕೈಗೊಂಡು ಐದು ವಾರಗಳಲ್ಲಿ 196 (93 ಗಂಡು, 103 ಹೆಣ್ಣು) ಮಕ್ಕಳನ್ನು ಮುಖ್ಯವಾಹಿನಿಗೆ ತಂದಿದ್ದಾರೆ.

ಜತೆಗೆ ಈ ಶೈಕ್ಷಣಿಕ ವರ್ಷದಲ್ಲಿ ಗೈರಾಗುತ್ತಿರುವ ಮಕ್ಕಳನ್ನೂ ಕಾಲಮಿತಿಯೊಳಗೆ ಹುಡುಕಿ ತರುತ್ತಿದ್ದಾರೆ. ಕಳೆದ ವರ್ಷ ಶಾಲೆ ಬಿಟ್ಟವರಲ್ಲಿ 18 ಮಕ್ಕಳು ವಿವಿಧ ಕಾರಣಗಳಿಂದ ಅಸುನೀಗಿದ್ದರೆ, ಇನ್ನೂ 505 ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೇ ನಿರಾಕರಿಸಿದ್ದರು.ಈ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ 150ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಯ ವಿಶೇಷ ತಂಡಗಳು, ರಾಜ್ಯದ ಮೂಲೆ ಮೂಲೆಯಲ್ಲೂ ಶೋಧ ನಡೆಸಿ 196 ಮಕ್ಕಳನ್ನು ಕರೆತಂದಿವೆ.

ಹೀಗಿದೆ ಕಾರ್ಯಾಚರಣೆ: ಕಳೆದ ವರ್ಷ ಎಷ್ಟು ಮಕ್ಕಳು ಶಾಲೆ ತೊರೆದಿದ್ದರು? ಅವರಲ್ಲಿ ಎಷ್ಟು ಮಂದಿ ವಾಪಸ್ ಬಂದಿದ್ದಾರೆ? ಈ ವಾರದಲ್ಲಿ ಎಷ್ಟು ಮಕ್ಕಳು ಹೊಸದಾಗಿ ಗೈರಾಗಿದ್ದಾರೆ ಎಂಬ ಬಗ್ಗೆ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ಪ್ರತಿ ಶನಿವಾರವೂ ಜಿಲ್ಲಾ ಶಿಕ್ಷಣ ಸಂಯೋಜಕರಿಗೆ ವರದಿ ಕಳುಹಿಸುತ್ತಿದ್ದಾರೆ.

ನಂತರ ವರದಿ ವಿವರ, ಮಕ್ಕಳ ಮನೆ ವಿಳಾಸ ಆಧರಿಸಿ ಎಲ್ಲ ಸಿಆರ್‌ಪಿಗಳು ಹಾಗೂ ಮುಖ್ಯಶಿಕ್ಷಕರು ಸೋಮವಾರದಿಂದ ಶುಕ್ರವಾರದವರೆಗೆ ಶೋಧ ನಡೆಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪದ ಪೋಷಕರಿಗೆ ಆಪ್ತ ಸಮಾಲೋಚನೆಯನ್ನೂ ಮಾಡಿಸುತ್ತಿದ್ದಾರೆ. ಅಷ್ಟಾಗಿಯೂ ಮಾತು ಕೇಳದಿದ್ದರೆ ನೋಟಿಸ್ ಕೊಟ್ಟು, ಕೊನೆಗೆ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ದೂರು ಕೊಡುತ್ತಿದ್ದಾರೆ.

‘ನೋಟಿಸ್ ಕೊಟ್ಟಾಗಲೇ ಪೋಷಕರಿಗೆ ಭಯ ಶುರುವಾಗುತ್ತಿದೆ. ಪ್ರಕರಣ ಸಿಡಬ್ಲ್ಯುಸಿ ಸುಪರ್ದಿಗೆ ಹೋದರೆ ಅವರು ಯಾರ ಮಾತೂ ಕೇಳದೆ ಮಕ್ಕಳನ್ನು ಹಾಸ್ಟೆಲ್‌ನಲ್ಲಿರಿಸಿ ಶಿಕ್ಷಣ ಕೊಡಿಸುತ್ತಾರೆ ಎಂಬುದನ್ನೂ ಪೋಷಕರಿಗೆ ಬಿಡಿಸಿ ಹೇಳುತ್ತಿದ್ದೇವೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಕೂಲಿ ಮಾಡುತ್ತಿದ್ದ ಇಲ್ಲಿನ 40ಕ್ಕೂ ಹೆಚ್ಚು ಮಕ್ಕಳನ್ನೂ ವಾಪಸ್ ಕರೆತಂದಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ
ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒರಟುತನ ಹೋಯ್ತು: ‘ಪೋಷಕರ ಜತೆ ಇಟ್ಟಿಗೆ ಗೂಡಿಗೆ ಹೋಗುತ್ತಿದ್ದ, ಹೊಲದಲ್ಲಿ ಕುರಿ ಕಾಯುತ್ತಿದ್ದ ಮಕ್ಕಳೂ ಕಲಿಕೆ ಪ್ರಾರಂಭಿಸಿವೆ. ಕಾಕೋಳದ 6ನೇ ತರಗತಿ ವಿದ್ಯಾರ್ಥಿ ಪ್ರತಿ ದಿನ ಶಾಲೆ ಎದುರೇ ಓಡಾಡುತ್ತಿದ್ದರೂ, ತರಗತಿಗೆ ಬರುತ್ತಿರಲಿಲ್ಲ. ಶಾಲೆಗೆ ಕಳುಹಿಸುವಂತೆ ಹೇಳಿದರೆ ಆತನ ಪೋಷಕರು ನಮಗೇ ಒರಟು ಭಾಷೆಯಲ್ಲಿ ಬೈಯ್ಯುತ್ತಿದ್ದರು. ನೋಟಿಸ್ ಕೊಟ್ಟ ನಂತರ ಸೋಮವಾರದಿಂದ (ಸೆ.16) ಆತನೂ ತರಗತಿಗೆ ಬರುತ್ತಿದ್ದಾನೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT