ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ನಲ್ಲಿ ಬಂಡಾಯ

ಸರ್ಕಾರದ ಹಸ್ತಕ್ಷೇಪ: ಮುಖ್ಯ ನ್ಯಾಯಮೂರ್ತಿಗೆ ನ್ಯಾ.ಚಲಮೇಶ್ವರ್‌ ಪತ್ರ
Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಯಾವುದೇ ರೀತಿಯ ‘ಸೌಹಾರ್ದ ಸಂಬಂಧ’ ಪ್ರಜಾಪ್ರಭುತ್ವದ ‘ಸಾವಿನ ಘಂಟಾನಾದ’ ಎಂದು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಎಚ್ಚರಿಸಿದ್ದಾರೆ.

ನ್ಯಾಯಾಂಗದ ಮೇಲೆ ಸರ್ಕಾರದ ಹಸ್ತಕ್ಷೇಪವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಚರ್ಚಿಸಲು ಪೂರ್ಣ ನ್ಯಾಯಾಲಯದ ಸಭೆ ಕರೆಯಬೇಕು ಎಂದು ಪತ್ರ ಬರೆದು ಕೋರಿದ್ದಾರೆ.

ಮುಖ್ಯ ನ್ಯಾಯಮೂರ್ತಿಗೆ ಬರೆದ ಈ ಪತ್ರದ ಪ‍್ರತಿಯನ್ನು ಚಲಮೇಶ್ವರ್‌ ಅವರು ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳಿಗೂ ಕಳುಹಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು ಕೇಂದ್ರ ಕಾನೂನು ಸಚಿವಾಲಯದ ಸೂಚನೆಯಂತೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೃಷ್ಣಭಟ್‌ ವಿರುದ್ಧ ತನಿಖೆಗೆ ಆದೇಶಿಸಿರುವುದನ್ನು ಚಲಮೇಶ್ವರ್‌ ಪ್ರಶ್ನಿಸಿದ್ದಾರೆ. ಕೃಷ್ಣಭಟ್‌ ಅವರಿಗೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವಂತೆ ಕೊಲಿಜಿಯಂ ಎರಡು ಬಾರಿ ಶಿಫಾರಸು ಮಾಡಿತ್ತು.

ಕೃಷ್ಣಭಟ್‌ ವಿರುದ್ಧ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು ಕೆಲವು ಆರೋಪ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಟಿ.ಎಸ್‌ ಠಾಕೂರ್‌ ಅವರು 2016ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಅವರಿಗೆ ಸೂಚಿಸಿದ್ದರು. ತನಿಖೆಯು ಕೃಷ್ಣ ಭಟ್‌ರನ್ನು ದೋಷ ಮುಕ್ತಗೊಳಿಸಿತ್ತು. ಬಳಿಕ, ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು.

‘ಕೆಳಮುಖ ಓಟದಲ್ಲಿ ಬೆಂಗಳೂರಿನವರೊಬ್ಬರು ಈಗಾಗಲೇ ನಮ್ಮ ಬೆನ್ನಿಗೆ ಹೊಡೆದಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರು ಕೂಡ ನಮ್ಮ ಬೆನ್ನ ಹಿಂದೆ, ಸರ್ಕಾರದ ಕೆಲಸ ಮಾಡುವುದಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ’ ಎಂದು ಚಲಮೇಶ್ವರ್‌ ಹೇಳಿದ್ದಾರೆ.

‘ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಗಳಿಗೆ ನೇಮಕದ ಶಿಫಾರಸುಗಳನ್ನು ಸರ್ಕಾರವು ಅಡಿಗೆ ಹಾಕಿ ಕುಳಿತಿರುವ ‘ಅಹಿತಕರ ಅನುಭವ’ ನಮಗೆ ಈಗಾಗಲೇ ಆಗಿದೆ’ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.

‘ನಮ್ಮ ಶಿಫಾರಸುಗಳನ್ನು ಸರ್ಕಾರ ಅಡಿಗೆ ಹಾಕಿ ಕುಳಿತುಕೊಳ್ಳುವುದು ಸಹಜ ಮತ್ತು ಒಪ್ಪಿಕೊಳ್ಳುವುದು ವಿಶೇಷ ಎಂಬುದು ಸ್ವಲ್ಪ ಕಾಲದಿಂದ ನಡೆದುಕೊಂಡು ಬರುತ್ತಿದೆ. ‘ಅನನುಕೂಲಕರ’ ಆದರೆ ಸಮರ್ಥ ನ್ಯಾಯಮೂರ್ತಿಗಳು ಅಥವಾ ಭಾವಿ ನ್ಯಾಯಮೂರ್ತಿಗಳನ್ನು ಈ ಮೂಲಕ ಬದಿಗೆ ಸರಿಸುವುದು ಇದರ ಉದ್ದೇಶವಾಗಿದೆ’ ಎಂದು ಚಲಮೇಶ್ವರ್‌ ಆರೋಪಿಸಿದ್ದಾರೆ.

‘ಸರ್ಕಾರವು ಸುಪ್ರೀಂ ಕೋರ್ಟನ್ನು ನಿರ್ಲಕ್ಷಿಸಿದ ಹಿಂದಿನ ಯಾವ ನಿದರ್ಶನವೂ ನನಗೆ ಕಾಣಿಸುತ್ತಿಲ್ಲ. ನಮ್ಮ ಶಿಫಾರಸು ಸರ್ಕಾರದಲ್ಲಿ ಬಾಕಿ ಇದೆ. ಅದರ ಮಧ್ಯದಲ್ಲಿಯೇ, ಸುಳ್ಳು ಎಂದು ಈಗಾಗಲೇ ಸಾಬೀತಾಗಿರುವ ಆರೋಪವನ್ನು ಮರುಪರಿಶೀಲನೆಗೆ ಒಳಪಡಿಸಿದ ವಿದ್ಯಮಾನ ಹಿಂದೆಂದೂ ನಡೆದಿಲ್ಲ. ಸುಪ್ರೀಂ ಕೋರ್ಟ್‌ನ ಶಿಫಾರಸನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ಗೆ ಸೂಚನೆ ನೀಡುವುದು ಅಸಮರ್ಪಕ ಮತ್ತು ಉದ್ಧಟತನ’ ಎಂದು ಚಲಮೇಶ್ವರ್‌ ಹೇಳಿದ್ದಾರೆ.

ಸಂವಿಧಾನದ ಆಶಯದಂತೆ ಸುಪ್ರೀಂ ಕೋರ್ಟ್‌ ತನ್ನ ಮಹತ್ವವನ್ನು ಉಳಿಸಿಕೊಳ್ಳಬೇಕಿದ್ದರೆ ಸರ್ಕಾರದ ಹಸ್ತಕ್ಷೇಪವನ್ನು ತಡೆಯಲೇಬೇಕು. ಅದಕ್ಕಾಗಿ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಬಗ್ಗೆ ದೀಪಕ್‌ ಮಿಶ್ರಾ ಅವರಿಂದ ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಯಶಸ್ವಿಯಾಗಿಲ್ಲ. ಹಾಗೆಯೇ, ನ್ಯಾಯಾಂಗ ತಜ್ಞರು ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಪತ್ರವ್ಯವಹಾರಕ್ಕೆ ಆಕ್ಷೇಪ
ಸರ್ಕಾರ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನಡುವಣ ಪತ್ರ ವ್ಯವಹಾರಕ್ಕೆ ಚಲಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿಫಾರಸು ಮಾಡುವುದರೊಂದಿಗೆ ಹೈಕೋರ್ಟ್‌ನ ಕೆಲಸ ಮುಗಿಯುತ್ತದೆ. ನಂತರದ ಯಾವುದೇ ವ್ಯವಹಾರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ಮಧ್ಯೆ ನಡೆಯಬೇಕು. ಸರ್ಕಾರವು ನೇರವಾಗಿ ಹೈಕೋರ್ಟನ್ನು ಸಂಪರ್ಕಿಸಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಪಾಡೇನು, ಯಾವ ತೀರ್ಪು ನೀಡಲಾಗುವುದು ಎಂಬುದನ್ನೆಲ್ಲ ವಿಚಾರಿಸುವ ದಿನ ದೂರವಿಲ್ಲ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಎರಡನೇ ಪ್ರತಿರೋಧ
ಮುಖ್ಯ ನ್ಯಾಯಮೂರ್ತಿಯವರು ಪ್ರಕರಣಗಳನ್ನು ವಿಚಾರಣೆಗಾಗಿ ಪೀಠಗಳಿಗೆ ಹಂಚಿಕೆ ಮಾಡುವ ಕ್ರಮವನ್ನು ಪ್ರಶ್ನಿಸಿ ಚಲಮೇಶ್ವರ್‌ ಅವರು ಜನವರಿ 12ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಸುಪ್ರೀಂ ಕೋರ್ಟ್‌ನ ಮೂವರು ಹಿರಿಯ ನ್ಯಾಯಮೂರ್ತಿಗಳು ಚಲಮೇಶ್ವರ್‌ಗೆ ಬೆಂಬಲ ನೀಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

ನಮ್ಮ ಸ್ವಾತಂತ್ರ್ಯದ ಮೇಲೆ ಸರ್ಕಾರದ ಒತ್ತುವರಿ ಹೆಚ್ಚುತ್ತಲೇ ಇದೆ. ಈ ಒತ್ತುವರಿಗೆ ಅವಕಾಶ ಕೊಟ್ಟಿದ್ದೇವೆ ಎಂಬ ಆರೋಪ ನಮ್ಮ ಮೇಲಿದೆ.
– ಚಲಮೇಶ್ವರ್‌, ‘ಸುಪ್ರೀಂ’ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT