‘ಪಕ್ಕದ್ಮನೆ ಹುಡುಗಿ’ ಬದಲಾಗಿದ್ದಾಳೆ: ಸಂಯುಕ್ತಾ ಹೊರನಾಡು

ಶುಕ್ರವಾರ, ಮಾರ್ಚ್ 22, 2019
21 °C
ಇಂದಿನ ಹುಡುಗಿಯರ ನಿಜವಾದ ಬಿಂಬ ಯಾವುದು?

‘ಪಕ್ಕದ್ಮನೆ ಹುಡುಗಿ’ ಬದಲಾಗಿದ್ದಾಳೆ: ಸಂಯುಕ್ತಾ ಹೊರನಾಡು

Published:
Updated:
Prajavani

ದಿನವೂ ನಾವು ಏನು ನೋಡ್ತೀವಿ, ಏನು ಕೇಳ್ತೀವಿ, ಏನನ್ನು ಓದ್ತೀವಿ ಎನ್ನುವುದು ನಮ್ಮ ಮನಸ್ಥಿತಿಯನ್ನು ರೂಪಿಸುತ್ತದೆ. ನಾವು ನೋಡುವ ಸಿನಿಮಾ ಆಗಲಿ, ಹಾಡುಗಳಾಗಲಿ ನಮ್ಮ ವ್ಯಕ್ತಿತ್ವವನ್ನು, ಜೀವನದೃಷ್ಟಿಯನ್ನು ರೂಪಿಸುತ್ತಿರುತ್ತವೆ.

ಸಿನಿಮಾ ಕ್ಷೇತ್ರಕ್ಕೇ ಬರೋಣ. ಎಷ್ಟೊಂದು ಸಿನಿಮಾದಲ್ಲಿ ನೋಡ್ತಾನೇ ಇರ್ತೀವಿ. ಹುಡುಗ ಹುಡುಗಿಯನ್ನು ಅಡ್ಡಗಟ್ಟಿ ರೇಗಿಸುತ್ತಾನೆ. ಹಿಂಬಾಲಿಸಿ ಚುಡಾಯಿಸುತ್ತಾನೆ. ಅವನು ಹೀರೊ. ಹೀರೊಯಿನ್‌ ಕೂಡ ಹಾಗೆ ಚುಡಾಯಿಸಿದ ಹುಡುಗನನ್ನು ಪ್ರೇಮಿಸಲು ಶುರುಮಾಡಿಬಿಡುತ್ತಾಳೆ. ಆದರೆ ವಾಸ್ತವದಲ್ಲಿ ನಮ್ಮನ್ನು ಯಾರಾದ್ರೂ ರಸ್ತೆಯಲ್ಲಿ ಅಡ್ಡಗಟ್ಟಿದರೆ ಪ್ರೀತಿ ಹುಟ್ಟುವುದಿಲ್ಲ; ಭಯವಾಗುತ್ತದೆ. ಹಾಡುಗಳೂ ಅಷ್ಟೆ, ಹುಡುಗ ಹುಡುಗಿಯನ್ನು ಹಿಂಬಾಲಿಸುತ್ತಿರುತ್ತಾನೆ. ಅವಳಿಗೆ ಇಷ್ಟ ಆಗ್ತಾ ಇರುವುದಿಲ್ಲ. ಆದರೂ ಮೇಲೆ ಮೇಲೆ ಹೋಗಿ ಬೀಳ್ತಾ ಇರ್ತಾನೆ. ಆಮೇಲೆ ಅವಳಿಗೆ ಅವನ ಮೇಲೆ ಪ್ರೀತಿ ಆಗಿಬಿಡುತ್ತದೆ. ಅವನಿಗೆ ಒಳ್ಳೆಯ ಗುಣಗಳಿರಲ್ಲ. ಶ್ರೀಮಂತಿಕೆ ಇರುವುದಿಲ್ಲ. ಕೆಲಸ ಇರುವುದಿಲ್ಲ. ಪ್ರತಿಭೆ ಇರಲ್ಲ. ಎಲ್ಲೋ ಕುಡಿತಾ ಇರ್ತಾನೆ. ಅಪ್ಪ ಅಮ್ಮ ಅವನನ್ನು ಬಯ್ತಾ ಇರ್ತಾರೆ. ಹೀಗಿದ್ದೂ ಆ ಹುಡುಗಿ ಅಂಥವನನ್ನು ಯಾಕೆ ಪ್ರೀತಿಸಬೇಕು? ಈ ಥರ ಆಗಲ್ಲ. ಈಗೂ ಆಗಲ್ಲ, ನೂರು ವರ್ಷಗಳ ಹಿಂದೆಯೂ ಆಗಿಲ್ಲ. ಮುಂದೆಯೂ ಆಗಲ್ಲ.

ನಾನಂತೂ ಅಂಥ ಪಾತ್ರಗಳನ್ನು ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳುವುದೂ ಇಲ್ಲ.

ಇತ್ತೀಚೆಗೆ ನನಗೊಂದು ಕತೆ ಬಂತು. ಅದರಲ್ಲಿ ನಾಯಕ ಕೈಕೊಟ್ಟಾಗ ನಾಯಕಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ‘ಇವಳ್ಯಾಕೆ ಅವನ ಹಿಂದೆ ಹೋಗಿ ಆತ್ಮಹತ್ಯೆ ಮಾಡಿಕೊಂಡು ಸಾಯ್ತಾಳೆ? ಹೀಗೆಯೇ ಪ್ರೇಮಿಯಿಂದ ವಂಚಿತಳಾಗಿರುವ ಹುಡುಗಿಯೊಬ್ಬಳು ಈ ಸಿನಿಮಾ ನೋಡಿದರೆ, ತಾನೂ ಸಾಯುವುದೇ ಸರಿ ಅನಿಸುವುದಿಲ್ಲವೇ? ಅಪಘಾತವಾಗಿ ಸತ್ತುಹೋದರೆ ಪರ್ವಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡಂತೆ ತೋರಿಸುವುದು ಎಷ್ಟು ಸರಿ’ ಎಂದು ಕೇಳಿದೆ. ಈ ರೀತಿ ಯೋಚಿಸುವುದರಿಂದ, ಚರ್ಚಿಸುವುದರಿಂದ ನನಗೆ ಬರುವ ಸಿನಿಮಾ ಸ್ಕ್ರಿಪ್ಟ್‌ಗಳು ಕಡಿಮೆ ಆಗಬಹುದು. ಆದರೆ ಸರಿಯಾದ, ಒಳ್ಳೆಯ ಸ್ಕ್ರಿಪ್ಟ್‌ಗಳು ನಮ್ಮ ಬಳಿಗೆ ಬರುತ್ತವೆ.

ಅದೇನೋ ಇದ್ಯಲ್ಲ ಶಬ್ದ. ‘ಗರ್ಲ್‌ ನೆಕ್ಸ್ಟ್‌ ಡೋರ್‌’, ‘ಪಕ್ಕದ್ಮನೆ ಹುಡುಗಿ’ – ಅಷ್ಟು ವರ್ಸ್ಟ್‌ ಶಬ್ದ ನಾನು ಕೇಳಿಯೇ ಇಲ್ಲ. ಇಂದು ಯಾವ ಹುಡುಗಿಯೂ ಮನೆಯಲ್ಲಿ ಕೂತು ಪರಮಮುಗ್ಧೆಯಾಗಿ, ಯಾವ್ದೋ ಹುಡುಗ ಬಂದು ಬಾಗಿಲು ತಟ್ಟಲಿ ಎಂದು ಕಾಯ್ತಾ ಇರಲ್ಲ. ನಮ್ಮ ಅಜ್ಜಿ ನಿಜವಾದ ‘ಪಕ್ಕದ್ಮನೆ ಹಡುಗಿ’. ಅವರು ಮನೆ ನೋಡ್ಕೋತಾರೆ. ಅಡುಗೆ ಮಾಡ್ತಾರೆ. ಸುತ್ತಾಡ್ತಾರೆ. ಸಿನಿಮಾ ಮಾಡ್ತಾರೆ. ನಾಟಕ ಮಾಡ್ತಾರೆ. ಹಾಡು ಹೇಳ್ತಾರೆ... ಎಷ್ಟೆಲ್ಲ ಕೆಲಸ ಮಾಡ್ತಾರೆ ಗೊತ್ತಾ? ಇದು ಈಗಿನ ಕಾಲದ ‘ಗರ್ಲ್‌ ನೆಕ್ಸ್ಟ್‌ ಡೋರ್‌’ ಲಕ್ಷಣ. ಸಿನಿಮಾದಲ್ಲಿ ತೋರಿಸುವ ಗರ್ಲ್‌ ನೆಕ್ಸ್ಟ್‌ ಡೋರ್‌ ಎಂಬ ಪರಿಕಲ್ಪನೆ ಇದ್ಯಲ್ಲ, ಅದನ್ನು ಸೆನ್ಸಾರ್‌ನವರು ಬ್ಯಾನ್‌ ಮಾಡಬೇಕು.

ಹಾಗಾದರೆ ಇಂದು ತೆರೆಯ ಮೇಲೆ ತೋರಿಸುವ, ಸಿನಿಮಾಗಳಲ್ಲಿ ಚಿತ್ರಿಸುವ ಹೆಣ್ಣು ಹೇಗಿರಬೇಕು?

ಇಂದಿನ ಮಹಿಳೆಗೆ ಸ್ವಂತ ಬುದ್ಧಿ ಇದೆ. ಒಂದೊಮ್ಮೆ ಅವಳು ಮನೆ ಬಿಟ್ಟು ಹೋದಳು ಅಂತಿಟ್ಟುಕೊಳ್ಳಿ. ಪ್ರಿಯತಮ ಕೈಕೊಟ್ಟ ಎಂದು ಅವಳು ಸಾಯುವಷ್ಟು ಖಂಡಿತ ದುರ್ಬಳಲ್ಲ. ಅವಳಿಗೆ ತನ್ನಿಷ್ಟದ ಹಾಗೆ ಸ್ವತಂತ್ರವಾಗಿ ಬದುಕುವ ಶಕ್ತಿ ಇದೆ. ಅವಳದೇ ಅಭಿಪ್ರಾಯಗಳಿವೆ. ಬದುಕುತ್ತಾಳೆ.

ಹೆಂಗಸರಿಗೆ ಕೋಪ ಬಂದಾಗ ಅವಳಷ್ಟು ಪವರ್‌ಫುಲ್‌ ಯಾರೂ ಇಲ್ಲ. ಗಂಡಸರಿಗೆ ಕೋಪ ಬಂದಾಗ ಏನು ಮಾಡ್ತಾರೋ ಅದನ್ನೇ ಹೆಣ್ಣು ತುಂಬ ಗ್ರೇಸ್‌ಫುಲ್‌ ಆಗಿ ಮಾಡಬಲ್ಲಳು. ಇದಕ್ಕಾಗಿ ನಾವು ‘ಫೆಮಿನಿಸಂ’ ಎಂದು ಕಿರುಚಿಕೊಂಡು ಹೋಗಬೇಕಾಗಿಲ್ಲ.

ನಮ್ಮಜ್ಜಿ ಯಾವ್ದೋ ಕಾಲದಿಂದ ಹಾಗೆಯೇ ಬದುಕಿಕೊಂಡು ಬಂದಿದ್ದಾರೆ. ಗಂಡ ಏನಾದ್ರೂ ಅವರಿಗೆ ‘ನೀನು ನಾಟಕ ಮಾಡಬೇಡ’ ಎಂದು ಹೇಳಿದ್ದರೆ ‘ನೀನು ನಿನಗೇನು ಬೇಕೋ ಅದನ್ನು ಮಾಡ್ಕೊ. ನನಗೆ ಬೇಕಾದ್ದನ್ನು ನಾನು ಮಾಡ್ತೀನಿ’ ಎಂದು ಹೇಳಿರೋರು. ಹೆಂಗಸರು ಹೆಂಗೆ ಜಗಳ ಆಡ್ತಾರೆ ಎಂದು ಎಲ್ಲರೂ ನೋಡಿಯೇ ಇರ್ತಾರೆ. ಆದರೆ ಸಿನಿಮಾದಲ್ಲಿ ಮಾತ್ರ ವ್ಯಾ... ಎಂದು ಅತ್ತುಕೊಂಡು ಕೂತಿರ್ತಾರೆ. ನಾನಂತೂ ಅಂಥ ಹೆಂಗಸರನ್ನು ನನ್ನ ಬದುಕಿನಲ್ಲಿ ನೋಡಿಲ್ಲ. ಹೆಂಗಸರು ಎಷ್ಟು ಭಾವುಕ, ಸೂಕ್ಷ್ಮಜೀವಿಗಳೋ ಅಷ್ಟೇ ಅದಕ್ಕೆ ವಿರುದ್ಧವಾದ ಆಯಾಮವೂ ಅವರ ವ್ಯಕ್ತಿತ್ವಕ್ಕೆ ಇರುತ್ತದೆ. ಆ ಇನ್ನೊಂದು ಆಯಾಮವನ್ನು ನಾವು ಸಿನಿಮಾಗಳಲ್ಲಿ ತೋರಿಸುವುದೇ ಇಲ್ಲ. ಅಂದರೆ, ಮಾಲಾಶ್ರೀ ಥರ ಹೋಗಿ ಗಂಡಸರನ್ನು ಹೊಡೆದುಹಾಕಬೇಕು ಅಂತಲ್ಲ. ನಾವು ನಮ್ಮದೇ ರೀತಿಯಲ್ಲಿ ಅದನ್ನು ತೋರಿಸ್ತಾ ಇರ್ತೀವಿ.

ನಮ್ಮ ತಾತನಿಗೆ ಅಜ್ಜಿ ಎಷ್ಟು ಇರಿಟೇಟ್‌ ಮಾಡಿಬಿಡ್ತಿದ್ರು ಅಂದ್ರೆ... ನಮಗೆಲ್ಲ ದೊಡ್ಡ ಜೋಕು ಅದು. ತಾತ ಸಿಟ್ಟಿನಿಂದ ಬಯ್ತಿದ್ರೆ ಅಜ್ಜಿ ಜೋರಾಗಿ ಹಾಡು ಹೇಳೋಕೆ ಶುರುಮಾಡಿಬಿಡ್ತಿದ್ರು. ನಾವು ಕಾರ್ಟೂನ್‌ ನೆಟ್‌ವರ್ಕ್‌ ನೋಡಿದ ಥರ ನಗ್ತಿದ್ವಿ. ನಮ್ಮ ತಾತನಿಗೆ ಕೋಪ ಬಂದ್ರೆ ಒಂದು ಬಾಟಲಿಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಬಿಡ್ತಿದ್ರು. ಅದನ್ನು ತೆಗೆಯಬೇಕಲ್ವಾ? ಅಜ್ಜಿ ಬಂದು ಮತ್ತೆ ತಾತನ ಬಳಿಯೇ ‘ಪ್ಲೀಸ್‌ ತೆಗೆದುಕೊಡಿ’ ಎಂದು ಕೇಳಬೇಕು. ಅದರಲ್ಲಿ ಒಂಥರ ಶರಣಾಗತಿ, ಅಧಿಕಾರ, ವ್ಯಂಗ್ಯ ಎಲ್ಲ ಇರುತ್ತದೆ. ಇದು ನಮ್ಮನೆಯಲ್ಲಿ ನಡೆಯುತ್ತಿದ್ದ ಜಗಳದ ರೀತಿ. ಇದು ರಿಯಾಲಿಟಿ. ಇಂಥ ದೃಶ್ಯಗಳು ಯಾಕೆ ಯಾವ ಸಿನಿಮಾದಲ್ಲಿಯೂ ಇರುವುದಿಲ್ಲ? ನೀನು ಏನೇ ಮಾಡಿದರೂ ನಿನ್ನ ಜೊತೆಗೇ ಅನುಸರಿಸಿ ಬರುತ್ತೇನೆ ಎಂದು ಯಾವ ಹೆಣ್ಣೂ ಹೇಳೋದಿಲ್ಲ.

ಸಿನಿಮಾ ತುಂಬ ಪ್ರಭಾವಶಾಲಿ ಮಾಧ್ಯಮ. ಇಲ್ಲಿ ಮಹಿಳೆಯನ್ನು ಹೇಗೆ ತೋರಿಸುತ್ತಾರೆ ಎನ್ನುವುದು ಸಮಾಜದಲ್ಲಿಯೂ ಅವಳನ್ನು ನೋಡುವ ದೃಷ್ಟಿಕೋನವನ್ನು ರೂಪಿಸುತ್ತಿರುತ್ತಾರೆ. ಸಿನಿಮಾ ರೂಪಿಸುವವರು ಇದನ್ನು ಮರೆಯಬಾರದು.

ಮೀ ಟೂ ನಂತರ...

ಈಗ ಪರಿಸ್ಥಿತಿ ತುಂಬ ಬದಲಾಗುತ್ತಿದೆ. ತೆರೆಯ ಮೇಲಷ್ಟೇ ಅಲ್ಲ, ತೆರೆಯ ಹಿಂದೂ ಹೆಣ್ಣನ್ನು ಗೌರವದಿಂದ ಕಾಣುತ್ತಿದ್ದಾರೆ. ತುಂಬ ವೃತ್ತಿಪರವಾಗಿ ನಡೆದುಕೊಳ್ಳುತ್ತಿದ್ದಾರೆ. ‘ಮೀ ಟೂ’ ಅಭಿಯಾನದ ನಂತರ ಎಲ್ಲರೂ ಹೆದರಿಕೊಳ್ಳುತ್ತಿದ್ದಾರೆ. ಮೊದಲು ನನ್ನ ಮೊಬೈಲ್‌ಗೆ ನಡುರಾತ್ರಿ ‘ಹಾಯ್‌ ಮ್ಯಾಮ್‌’ ಎಂದು ಬರ್ತಿದ್ದ ಮೆಸೇಜುಗಳೆಲ್ಲ ‘ಹಾಯ್‌ ಸಿಸ್ಟರ್‌’ ಎಂದು ಬದಲಾಗಿವೆ. ಶೇ. 80ರಷ್ಟು ತಲೆಹರಟೆ ಮೆಸೇಜ್‌ಗಳು ಬರುವುದೇ ನಿಂತುಹೋಗಿವೆ. ಈಗ ಯಾರು ಫ್ಲರ್ಟೇ ಮಾಡಲ್ಲ. ಯಾಕೆ ನಂಗೇನು ಪ್ರಾಬ್ಲಮ್‌ ಆಗಿದೆ ಎಂದು ನನಗೇ ಅನಿಸುವಷ್ಟು ಬದಲಾಗಿದೆ. ಎಲ್ಲಿ ಸ್ಕ್ರೀನ್‌ಶಾಟ್‌ ತೆಗೆದು ಹಾಕಿಬಿಡ್ತಾರೋ ಅಂತ ಭಯ ಜನಕ್ಕೆ.

**

ಪಾರ್ವತಿ ಶಿವನ ಪಾದ ಹಿಡಿದುಕೊಂಡಿರುವ ಚಿತ್ರ ಇದೆಯಲ್ಲ. ಅದನ್ನು ತುಂಬ ಪಾರ್ವತಿ ಶಿವನಿಗೆ ಶರಣಾಗಿರುವ ಚಿತ್ರ ಎಂದುಕೊಂಡಿದ್ದಾರೆ. ಆದರೆ ಶಿವನ ಪಾದ ನೆಲದಲ್ಲಿಯೇ ಇರಬೇಕು ಎಂಬ ಕಾರಣಕ್ಕೆ ಅವಳು ಅವನ ಕಾಲು ಹಿಡಿದುಕೊಂಡಿರುವುದು. ನಾವಿಂದು ಆರಾಧಿಸುವ ಕಾಳಿ, ಚಾಮುಂಡಿ, ದುರ್ಗೆ ಯಾವವೂ ಪುರುಷಾಧೀನ ದೇವತೆಗಳಲ್ಲ. ಆದರೆ ಬರುತ್ತ ಬರುತ್ತ ನಮ್ಮಲ್ಲಿ ಮಹಿಳೆ ಪುರುಷನ ಅಧೀನ ಎಂಬ ಭಾವನೆ ಬೆಳೆದುಬಂದಿದೆ.

ನಾವು ದಿನವೂ ನೋಡುವ ಧಾರಾವಾಹಿಗಳಲ್ಲಿಯೂ ಅತ್ತೆ ಸೊಸೆ ಜಗಳವೇ ಇರುತ್ತದೆ.

**

ಇಂಥ ದೃಶ್ಯಗಳನ್ನು ಎಷ್ಟು ಜನ ನೋಡ್ತಾರೆ, ಎಷ್ಟು ಜನರ ಮೇಲೆ ಪ್ರಭಾವ ಬೀರುತ್ತಿರುತ್ತದೆ, ಅದರ ಪರಿಣಾಮ ಏನಾಗಬಹುದು ಎನ್ನುವುದನ್ನೆಲ್ಲ ಮರೆತುಬಿಡುತ್ತಿದ್ದೇವೆ. ಇದೆಲ್ಲ ಬರವಣಿಗೆಯ ಹಂತದಲ್ಲಿಯೇ ಯೋಚಿಸಬೇಕಾದ ವಿಷಯ. ನಮ್ಮಲ್ಲಿ ಬರೆಯುವವರಿಗೇ ಏನೋ ತೊಂದರೆ ಇದ್ದ ಹಾಗಿದೆ. ಖಂಡಿತ ಇದು ಸರಿಯಲ್ಲ.

**

‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ನಾನು ಸಿಗರೇಟ್‌ ಸೇದುವುದು, ಫ್ಲರ್ಟ್‌ ಮಾಡುವ ಪಾತ್ರದಲ್ಲಿ ನಟಿಸಿದ್ದನ್ನು ನೋಡಿ ನನ್ನ ಅಜ್ಜಿ ಬಂದು ‘ನೀನು ಮಾಡಿದ್ಯಲ್ಲ. ಅದೇ ಕರೆಕ್ಟು. ಯಾಕೆ ಹುಡುಗರು ಮಾತ್ರ ಫ್ಲರ್ಟ್‌ ಮಾಡಬೇಕು. ಸ್ಮೋಕ್‌ ಮಾಡಬೇಕು?’ ಎಂದು ಕೇಳಿದ್ದರು. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !