ಉಪನೋಂದಣಾಧಿಕಾರಿ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳು; ಜನರಲ್ಲಿ ಗೊಂದಲ

7

ಉಪನೋಂದಣಾಧಿಕಾರಿ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳು; ಜನರಲ್ಲಿ ಗೊಂದಲ

Published:
Updated:

ಬೆಳಗಾವಿ: ವರ್ಗಾವಣೆ ಗೊಂದಲದಿಂದಾಗಿ ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಇಬ್ಬರು ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸುವಂತಾಗಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. ತಮ್ಮ ಆಸ್ತಿ ಖರೀದಿ ದಾಖಲೆಗಳ ಮೇಲೆ ಯಾರ ಸಹಿ ಪಡೆಯಬೇಕೆನ್ನುವ ಗೊಂದಲ ಎದುರಿಸುತ್ತಿದ್ದು, ಕಳೆದ 2–3 ದಿನಗಳಿಂದ ಖರೀದಿ ಪತ್ರಗಳ ನೋಂದಣಿಯನ್ನೇ ಸ್ಥಗಿತಗೊಳಿಸಿದ್ದಾರೆ.

ಜುಲೈನಲ್ಲಿ ವರ್ಗಾವಣೆಯಾಗಿ ಬಂದಿದ್ದ ಉಪನೋಂದಣಾಧಿಕಾರಿ ವಿಷ್ಣುತೀರ್ಥ ಅವರನ್ನು ರಾಯಬಾಗಕ್ಕೆ ಹಾಗೂ ಅವರ ಸ್ಥಾನಕ್ಕೆ ಸದಾಶಿವ ಡಬ್ಬಗೋಳ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ, ವಿಷ್ಣುತೀರ್ಥ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಮೊರೆ ಹೋಗಿದ್ದರು. ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ಈ ಮಧ್ಯೆ, ಸದಾಶಿವ ಡಬ್ಬಗೋಳ ಅವರು ಬೆಳಗಾವಿ ಕಚೇರಿಗೆ ಬಂದು ಹಾಜರಾಗಿದ್ದಾರೆ. ಆದರೆ, ವಿಷ್ಣುತೀರ್ಥ ಅವರು ಅಧಿಕಾರ ಹಸ್ತಾಂತರಿಸದ ಕಾರಣ, ಬೇರೊಂದು ಕುರ್ಚಿ– ಟೇಬಲ್‌ ಹಾಕಿಕೊಂಡು ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಒಂದೇ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಕಂಡ ಜನರು ಗೊಂದಲಕ್ಕೀಡಾಗಿದ್ದಾರೆ. ಯಾರ ಸಹಿ ಊರ್ಜಿತ, ಅನೂರ್ಜಿತ ಎನ್ನುವ ಆತಂಕದಲ್ಲಿದ್ದಾರೆ. ಯಾರು ನಿಜವಾದ ಉಪನೋಂದಣಾಧಿಕಾರಿ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ ಸುಜಿತ್‌ ಮುಳಗುಂದ ಹೇಳಿದರು.

ಕೆಎಟಿ ತಡೆಯಾಜ್ಞೆ ನೀಡಿದೆ:

‘ಮೂರು ವರ್ಷಗಳಿಗಿಂತ ಮೊದಲು ವರ್ಗಾವಣೆ ಮಾಡಬಾರದೆನ್ನುವ ನಿಯಮವಿದ್ದರೂ, ಕೇವಲ ಮೂರು ತಿಂಗಳಲ್ಲಿ ಅಕ್ಟೋಬರ್‌ನಲ್ಲಿ ನನ್ನನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ, ಕೆಎಟಿಗೆ ಮೊರೆ ಹೋಗಿದ್ದೇನೆ. ಡಿ.6ರಂದು ವಿಚಾರಣೆ ನಡೆಯಲಿದ್ದು, ತೀರ್ಪು ಹೊರಬೀಳುವ ನಿರೀಕ್ಷೆ ಇದೆ’ ಎಂದು ವಿಷ್ಣುತೀರ್ಥ ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !