ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ದಿಢೀರ್‌ ಉಷ್ಣಾಂಶ ಕುಸಿತ

ವಿಜಯಪುರ ಜಿಲ್ಲೆಯಲ್ಲಿ ಮಂಜು ಕವಿದ ವಾತಾವರಣ/ ಚಳಿಯಿಂದ ನಡುಗಿದ ಜನತೆ
Last Updated 20 ಡಿಸೆಂಬರ್ 2018, 6:21 IST
ಅಕ್ಷರ ಗಾತ್ರ

ಬೆಂಗಳೂರು/ವಿಜಯಪುರ: ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಂಗಳವಾರ ಮತ್ತು ಬುಧವಾರ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ಸಾರ್ವಜನಿಕರು ಚಳಿಯಿಂದ ನಡುಗುವಂತಾಗಿದೆ.

ಕಲಬುರ್ಗಿಯಲ್ಲಿ 8, ವಿಜಯಪುರ 8.1, ಬೀದರ್ 8.9, ಚಿಕ್ಕಬಳ್ಳಾಪುರ 9.7, ಹಾಸನದಲ್ಲಿ 9.8 ಡಿಗ್ರಿ ಸೆಲ್ಸಿಯಸ್‌ ದಿನದ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಸಾಮಾನ್ಯವಾಗಿ ಚಳಿ ಕಡಿಮೆ ಇರುವ ಜಿಲ್ಲೆಗಳಾದ ದಕ್ಷಿಣಕನ್ನಡ 16.4 ಮತ್ತು ಉಡುಪಿ ಜಿಲ್ಲೆಯಲ್ಲಿ 15.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಉಳಿದ ಜಿಲ್ಲೆಗಳಲ್ಲಿ 13 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇತ್ತು.ಈ ಎಲ್ಲ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲೇ ತಾಪಮಾನದಲ್ಲಿ ಭಾರಿ ಏರುಪೇರಾಗಿದೆ.

ತತ್ತರಿಸಿದ ವಿಜಯಪುರ ಜನತೆ: ಒಂದೇ ದಿನದ ಅಂತರದಲ್ಲಿ ಗರಿಷ್ಠ ತಾಪಮಾನ 2 ಡಿಗ್ರಿ, ಕನಿಷ್ಠ ತಾಪಮಾನ 4.5 ಡಿಗ್ರಿಯಷ್ಟು ಕಡಿಮೆಯಾಗಿದ್ದು, ವಿಪರೀತ ಚಳಿಗೆ ಜಿಲ್ಲೆಯ ಜನರು ತತ್ತರಿಸಿದ್ದಾರೆ.

ಬುಧವಾರ ಬೆಳಿಗ್ಗೆ 6.30ರಿಂದ 10 ಗಂಟೆವರೆಗೆ ವಿಜಯಪುರ ನಗರ ಸೇರಿದಂತೆ, ಸಿಂದಗಿ, ಬಸವನಬಾಗೇವಾಡಿ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಮಂಜು ಕವಿದಿದ್ದು, ಗುಮ್ಮಟ ನಗರಿ ಮಂಜಿನ ನಗರಿಯಾಗಿ ಪರಿವರ್ತನೆಗೊಂಡಿತ್ತು.

ಎರಡರಿಂದ ಮೂರಡಿ ಅಂತರದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗದಷ್ಟು ಪ್ರಮಾಣದಲ್ಲಿ ಮಂಜು ದಟ್ಟವಾಗಿ ಕವಿದಿತ್ತು. ವಾಹನ ಸವಾರರು ಹೆಡ್‌ಲೈಟ್‌ ಬೆಳಕಿನಲ್ಲೂ ಸಂಚರಿಸಲು ಪರದಾಡಿದರು. ಬೆಳಿಗ್ಗೆ 10 ಗಂಟೆ ಬಳಿಕ ಸೂರ್ಯ ರಶ್ಮಿ ಭುವಿಗೆ ಸ್ಪರ್ಶಿಸಿದವು. ಇಡೀ ದಿನ ಶೀತ ಗಾಳಿ ಇತ್ತು.

‘ವಿಜಯಪುರ ಮಂಜುಮಯವಾಗಿತ್ತು. ಕಾಶ್ಮೀರ, ನವದೆಹಲಿಯ ಅನುಭವ ನೀಡಿತು. ನಿತ್ಯವೂ ದೂಳಿನ ಸ್ನಾನದಲ್ಲೇ ಮುಳುಗುತ್ತಿದ್ದವರಿಗೆ ಮಂಜಿನ ಸ್ನಾನವಾಯ್ತು. ಮೂರು ದಶಕದ ಅನುಭವದಲ್ಲಿ ಇಂಥ ದೃಶ್ಯ ನೋಡಿರಲಿಲ್ಲ’ ಎಂದು ಸಂಶೋಧಕ ಎ.ಎಲ್‌.ನಾಗೂರ ತಿಳಿಸಿದರು.

‘ಚಂಡಮಾರುತದ ಪ್ರಭಾವದಿಂದ ಉತ್ತರ ಭಾರತದಲ್ಲಿ ಶೀತ ಹವೆ ಹೆಚ್ಚುತ್ತಿದೆ. ರಾಜಸ್ತಾನದಲ್ಲಿ ವಾಯುಭಾರ ಹೆಚ್ಚಳವಾಗಿದೆ. ಇದರ ಪರಿಣಾಮ ಉತ್ತರ ದಿಕ್ಕಿನ ಶೀತ ಗಾಳಿ ಜಿಲ್ಲೆಯನ್ನು ಪ್ರವೇಶಿಸುತ್ತಿದೆ. ಇದರಿಂದ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಇನ್ನೂ ನಾಲ್ಕೈದು ದಿನ ಮುಂದುವರೆಯಬಹುದು. ಈ ಅವಧಿಯಲ್ಲಿ ಕನಿಷ್ಠ ತಾಪಮಾನ 8ರಿಂದ 11 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು’ ಎಂದು ನಗರದ ಹೊರ ವಲಯದಲ್ಲಿರುವ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಹವಾಮಾನ ವಿಭಾಗದ ಮುಖ್ಯಸ್ಥ ಡಾ.ಎಚ್‌.ವೆಂಕಟೇಶ್‌ ಮಾಹಿತಿ ನೀಡಿದರು.

***

ಸದ್ಯದ ವಾತಾವರಣ ವಯೋವೃದ್ಧರು– ಮಕ್ಕಳಿಗೆ ಪೂರಕವಾದುದಲ್ಲ. ಬೆಚ್ಚನೆಯ ಉಡುಪು ಧರಿಸಿ, ಮುಂಜಾನೆ– ಮುಸ್ಸಂಜೆ ಮನೆಯೊಳಗಿರುವುದು ಕ್ಷೇಮ

–ಡಾ.ಅರವಿಂದ ಡಾಣೂಕ ಶಿರೂರ, ವಿಜಯಪುರದ ಹಿರಿಯ ವೈದ್ಯ

ವಿಜಯಪುರದಲ್ಲಿ ಈ ಪರಿ ಮಂಜು ಕವಿದಿದ್ದನ್ನು ಹಿಂದೆಂದೂ ನೋಡಿರಲಿಲ್ಲ. ಮೊದಲ ಬಾರಿ ಮಂಜಿನ ವಾತಾವರಣದ ಅನುಭವ ಸಿಕ್ಕಿತು. ಚಳಿಯೂ ವಿಪರೀತವಿದೆ

–ಭೀಮು ಮಾಶ್ಯಾಳ, ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT