ಗುರುವಾರ , ಫೆಬ್ರವರಿ 27, 2020
19 °C

ಸಂತೆಯಲ್ಲಿ ತರಕಾರಿ ಕೊಂಡ ಸುಧಾಮೂರ್ತಿ! ಚೌಕಾಶಿ ಮಾಡಲಿಲ್ಲ, ಸಂಕಷ್ಟ ಆಲಿಸಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭಾನುವಾರ ಮುಂಜಾನೆ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಬಂದು ಸಾಮಾನ್ಯರಂತೆ ಚೀಲ ಹಿಡಿದು ಅಡ್ಡಾಡಿ ತರಕಾರಿ ಕೊಂಡರು. ಇದು ಸ್ಥಳೀಯರನ್ನು ಆಶ್ಚರ್ಯಚಕಿತಗೊಳಿಸಿತು.

ಮನೆದೇವರು ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಸುಧಾಮೂರ್ತಿ ಬಂದಿದ್ದರು. ಶನಿವಾರ ಸಂಜೆಯೇ ಜಮಖಂಡಿ ನಗರಕ್ಕೆ ಬಂದಿದ್ದ ಅವರು, ಅಲ್ಲಿನ ಕುಂಚನೂರು ರಸ್ತೆಯ ಕೆಎಚ್‌ಬಿ ಕಾಲೊನಿ ದಾನಮ್ಮನ ಗುಡಿ ಬಳಿಯ ಸೋದರಳಿಯ (ತಮ್ಮನ ಮಗ) ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ಉಳಿದಿದ್ದರು. 

ಮರುದಿನ ಲಕ್ಷ್ಮೀನರಸಿಂಹ ಸ್ವಾಮಿಗೆ ಪೂಜೆ ಮಾಡಿಸಿ, ಅಲ್ಲಿಂದ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು, ಜಾತ್ರೆಯಲ್ಲಿ ಅಡ್ಡಾಡಿ ನಂತರ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳಿದರು.

ಜಮಖಂಡಿಯ ಎಪಿಎಂಸಿ ಆವರಣದ ವಾರದ ಸಂತೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತರಕಾರಿ ಖರೀದಿಸಿದರು

ಚೌಕಾಶಿ ಮಾಡಲಿಲ್ಲ: ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿ ಅವರ ತವರುಮನೆ. ’ಕೃಷ್ಣಾ ತೀರದಲ್ಲಿಯೇ ಆಡಿ ಬೆಳೆದಿರುವ ಅವರಿಗೆ ಇಲ್ಲಿ ಬೆಳೆಯುವ ತರಕಾರಿ ಅಚ್ಚುಮೆಚ್ಚು. ಇತ್ತ ಬಂದಾಗಲೆಲ್ಲಾ ಕಾಯಿ‍‍ಪಲ್ಲೆ, ಹೂವು, ಬೆಲ್ಲ, ಸಾಂಬಾರು ಪದಾರ್ಥ ಕೊಂಡು ಬೆಂಗಳೂರಿನ ಮನೆಗೆ ಒಯ್ಯುತ್ತಾರೆ’ ಎಂದು ನಾರಾಯಣ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು..

‘ಅತ್ತೆ ಪ್ರತಿ ಬಾರಿ ಜಮಖಂಡಿಗೆ ಬಂದಾಗಲೂ ಅವರಿಗೆ ನಾನೇ ಸಂತೆಯಿಂದ ತರಕಾರಿ ಕೊಂಡು ತರುತ್ತಿದ್ದೆ. ಆದರೆ ಈ ಬಾರಿ ಅವರೂ ನನ್ನೊಂದಿಗೆ ಬಂದರು. ಇತ್ತೀಚೆಗಷ್ಟೇ ಈ ಭಾಗ ಕೃಷ್ಣಾ ನದಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ, ರೈತರ ಸ್ಥಿತಿಗತಿ ಅರಿಯಲು ಸ್ವತಃ ಸಂತೆಗೆ ಬಂದರು. ವ್ಯಾಪಾರಕ್ಕೆ ಕುಳಿತವರನ್ನು ಮಾತಾಡಿಸಿ, ಅವರ ಸಂಕಷ್ಟ ಆಲಿಸುತ್ತಾ ಚೌಕಾಶಿ ಮಾಡದೇ ತರಕಾರಿ ಕೊಂಡು ತಂದರು’ ಎಂದು ತಿಳಿಸಿದರು.

ಜಮಖಂಡಿಯ ಎಪಿಎಂಸಿ ಆವರಣದ ವಾರದ ಸಂತೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತರಕಾರಿ ಖರೀದಿಸಿದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು