ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕ್ಕರೆ ಇಳುವರಿ ಅಧ್ಯಯನಕ್ಕೆ ಯಂತ್ರ: ಸಕ್ಕರೆ ಸಚಿವ ಸಿ.ಟಿ.ರವಿ

ಕಬ್ಬು ತೂಕದಲ್ಲಿ ಮೋಸ ತಡೆಗೆ ತಂಡ ರಚನೆ
Last Updated 17 ಅಕ್ಟೋಬರ್ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು: ಸಕ್ಕರೆ ಇಳುವರಿ ಪ್ರಮಾಣವನ್ನು ಅಧ್ಯಯನ ಮಾಡಲು ಕಾರ್ಖಾನೆಗಳಿಗೆ ಸ್ವಯಂ ಚಾಲಿತ ಯಂತ್ರಗಳನ್ನು ಅಳವಡಿಸಲು ಗುರುವಾರ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ
ನಿರ್ಧರಿಸಲಾಗಿದೆ.

‘ಒಂದೇ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲೇ ಇಳುವರಿಯಲ್ಲಿ ವ್ಯತ್ಯಾಸ ಆಗುತ್ತಿದ್ದು, ಇದರಿಂದ ರೈತರಿಗೆ ಪಾವ
ತಿಸುವ ಕಬ್ಬಿನ ದರದಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಭೆಯ ನಂತರ ಸಕ್ಕರೆ ಸಚಿವ ಸಿ.ಟಿ.ರವಿ ಸುದ್ದಿಗಾರರಿಗೆ ತಿಳಿಸಿದರು.

ಕೆಲ ಆಯ್ದ ಕಾರ್ಖಾನೆಗಳಲ್ಲಿ ಸ್ವಯಂಚಾಲಿತ ಯಂತ್ರವನ್ನು ಅಳವಡಿಸಲಾಗುವುದು. ಪ್ರತಿ ಯಂತ್ರದ ಬೆಲೆ ಸುಮಾರು ₹1 ಕೋಟಿಯಾಗಲಿದ್ದು, ಇಲ್ಲಿ ದಾಖಲಾಗುವ ವಿವರಗಳನ್ನು ವಿಶ್ಲೇಷಣೆ ಮಾಡಲಾಗುವುದು. ನಿರ್ದಿಷ್ಟ ಪ್ರದೇಶದಲ್ಲಿ ಇಳುವರಿಯಲ್ಲಿ ವ್ಯತ್ಯಾಸ ಕಂಡುಬಂದರೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು. ಈ ವರದಿ ಆಧಾರದ ಮೇಲೆ ನಿಯಮ ರೂಪಿಸುವಂತೆ ಕೇಂದ್ರವನ್ನು ಕೋರ
ಲಾಗುವುದು ಎಂದು ಅವರು ವಿವರಿಸಿದರು.

ತೂಕದಲ್ಲಿ ಮೋಸ: ಕಾರ್ಖಾನೆಗಳು ಕಬ್ಬು ತೂಕಮಾಡುವ ಸಮಯದಲ್ಲಿ ಮೋಸಮಾಡುತ್ತಿವೆ ಎಂಬ ಆರೋಪ ರೈತರಿಂದ ಕೇಳಿಬಂದಿದ್ದು, ತೂಕದ ಬಗ್ಗೆ ವಾಸ್ತವಿಕ ಅಧ್ಯಯನ ನಡೆಸಲು ಕಾರ್ಖಾನೆ ನೌಕರರು, ರೈತರು, ಅಧಿಕಾರಿಗಳು, ತಜ್ಞರನ್ನು ಒಳಗೊಂಡ ತಂಡ ರಚಿಸಲಾಗುವುದು. ಈ ತಂಡ ನಿಯಮಿತವಾಗಿ ತಪಾಸಣೆ ಮಾಡುವುದರಿಂದ ತೂಕದಲ್ಲಿ ವ್ಯತ್ಯಾಸವಾಗುವುದನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.

ಸಿಗದ ಹೆಚ್ಚುವರಿ ಮೊತ್ತ: ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ‘ನ್ಯಾಯ ಮತ್ತು ಲಾಭದಾಯಕ’ (ಎಫ್‌ಆರ್‌ಪಿ) ಬೆಲೆಯನ್ನು ಕೊಡಿಸಲಾಗುತ್ತಿದೆ. ಕೆಲ ಕಾರ್ಖಾನೆಗಳು ಕೇಂದ್ರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ದರ ನೀಡುವುದಾಗಿ ರೈತರಿಗೆ ಭರವಸೆ ನೀಡಿದ್ದು, ಹೆಚ್ಚುವರಿ ಮೊತ್ತವನ್ನು ಕೊಡುತ್ತಿಲ್ಲ ಎಂದು ಈಗ ಆರೋಪಿಸುತ್ತಿದ್ದಾರೆ. ಬಾಯಿ ಮಾತಿನ ಒಪ್ಪಂದದಿಂದಾಗಿ ಹೆಚ್ಚುವರಿ ಹಣ ಕೊಡಿಸಲು ಸಾಧ್ಯವಾಗುತ್ತಿಲ್ಲ.ಇನ್ನು ಮುಂದೆ ಲಿಖಿತವಾಗಿ ಒಪ್ಪಂದ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದೇವೆ. ಆಗ ಹಣ ಕೊಡದಿದ್ದರೆಮಧ್ಯಪ್ರವೇಶ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT