ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಮಾರಿಯಾದರೂ ಬಿಲ್‌ ಪಾವತಿಸಲಿ: ಮುಖ್ಯಮಂತ್ರಿ ಆದೇಶ

Last Updated 13 ಜೂನ್ 2019, 16:10 IST
ಅಕ್ಷರ ಗಾತ್ರ

ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಕಬ್ಬು ಪೂರೈಕೆ ಬಿಲ್‌ ಮೊತ್ತವನ್ನು ಸಕ್ಕರೆ ಹರಾಜು ಹಾಕಿಯಾದರೂ ಪಾವತಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಟ್ಟಪ್ಪಣೆ ಮಾಡಿದರು.

‘ಸಕ್ಕರೆ ಕಾರ್ಖಾನೆಗಳ ಮಾಲೀಕರು 2018–19 ರ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಒಟ್ಟು ಮೊತ್ತ ₹1101.19 ಕೋಟಿ. ತಕ್ಷಣವೇ ಬಾಕಿ ಪಾವತಿ ಮಾಡಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಕಟ್ಟುನಿಟ್ಟಾದ ಸೂಚನೆ ನೀಡಬೇಕು. ಇಲ್ಲವಾದರೆ ಕಾರ್ಖಾನೆ ಮುಟ್ಟುಗೋಲು ಹಾಕಿಕೊಳ್ಳಿ’ ಎಂದು ವಿಧಾನಸಭೆಯಲ್ಲಿ ಗುರುವಾರ ನಡೆದ ಜಿಲ್ಲಾಧಿಕಾರಿಗಳ ಸಭೆ ಹೇಳಿದರು.

‘ಬಾಕಿ ಪಾವತಿಸಲು ಜೂನ್‌ 30 ಕೊನೆಯ ದಿನ. ಅಷ್ಟರೊಳಗೆ ಬಾಕಿಯನ್ನು ಸಂಪೂರ್ಣ ಪಾವತಿಸಬೇಕು. ಮಾಲೀಕರು ಹಣ ಇಲ್ಲ ಎಂದೋ, ಬೇರೇನೋ ಸಬೂಬು ನೀಡುವಂತಿಲ್ಲ. ಬೇಕಿದ್ದರೆ ಸಕ್ಕರೆ ಮಾರಾಟ ಮಾಡಿ ಹಣವನ್ನು ಹೊಂದಿಸಿಕೊಂಡು ಪಾವತಿ ಮಾಡಲಿ’ ಎಂದು ಕಡ್ಡಿ ಮುರಿದಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

‘ಒಂದು ವೇಳೆ ಕಾರ್ಖಾನೆಗಳ ಮಾಲೀಕರು ಹಣ ಪಾವತಿ ಮಾಡದಿದ್ದರೆ, ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಲು ಹಿಂಜರಿಯಬೇಡಿ. ರೈತರಿಗೆ ಹಣಕೊಡಿಸುವ ಜವಾಬ್ದಾರಿ ನಿಮ್ಮದು. ನಿಮಗೆ ಎಲ್ಲ ಅಧಿಕಾರವೂ ಇದೆ, ಕಾರ್ಖಾನೆಗಳು ಹಣ ಪಾವತಿ ಮಾಡದೇ ಇದ್ದರೆ, ನೀವೇ ಹೊಣೆಗಾರರಾಗಬೇಕಾಗುತ್ತದೆ’ ಎಂದೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ರಾಜ್ಯದ ವಿವಿಧ ಕಾರ್ಖಾನೆಗಳಿಂದ ಶೇ.91.09 ರಷ್ಟು ಬಾಕಿ ಹಣವನ್ನು ಈಗಾಗಲೇ ಪಾವತಿಸಲಾಗಿದೆ. ಸದ್ಯಕ್ಕೆ ₹1101.19 ಕೋಟಿ ಬಾಕಿ ಪಾವತಿ ಮಾಡಬೇಕಾಗಿದೆ. ಅಷ್ಟೂ ಹಣ ಸಂದಾಯ ಆಗಬೇಕು ಎಂದರು. ಸಭೆಯಲ್ಲಿ ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ ಅವರೂ ಇದ್ದರು.

ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾಗಿರುವ ಬಿಲ್ ಬಾಕಿ ಪಾವತಿಸುವಂತೆ ಕಬ್ಬು ಬೆಳೆಗಾರರು ಇತ್ತೀಚೆಗೆ ವಿಧಾನಸೌಧದ ಮುಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದರು. ರಾಜ್ಯದ 67 ಸಕ್ಕರೆ ಕಾರ್ಖಾನೆಗಳು 2018–19 ನೇ ಸಾಲಿನಲ್ಲಿ ಸುಮಾರು 4 ಕೋಟಿ ಟನ್‌ ಕಬ್ಬು ಅರೆದಿದ್ದು, ಕಬ್ಬು ಪೂರೈಸಿದ ರೈತರಿಗೆ ಎಂಆರ್‌ಪಿ ದರದ ಅನ್ವಯ ₹ 3 ಸಾವಿರ ಕೋಟಿ ಬಾಕಿ ಪಾವತಿ ಮಾಡಿಲ್ಲ ಎಂದು ಬೆಳೆಗಾರರು ಆರೋಪಿಸಿದ್ದರು. ಬಾಕಿ ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದೂ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT