ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಸಲಹೆಗೆ ಕಾರ್ಖಾನೆ ಮಾಲೀಕರ ಸಮ್ಮತಿ; ರೈತರ ಅತೃಪ್ತಿ

Last Updated 22 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬು ಬಾಕಿ ಪಾವತಿ ವಿಚಾರದಲ್ಲಿ ರೈತರ ಜೊತೆ ಚರ್ಚಿಸಿ, 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೀಡಿದ ಸಲಹೆಗೆ, ಸಕ್ಕರೆ ಕಾರ್ಖಾನೆ ಮಾಲೀಕರು ಸಮ್ಮತಿಸಿದ್ದಾರೆ.

ಆದರೆ, ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಭರಿಸುವ ವಿಷಯದಲ್ಲಿನ ಗೊಂದಲ ನಿವಾರಿಸಬೇಕು. ವೆಚ್ಚವನ್ನು ಮಾಲೀಕರೇ ಭರಿಸಬೇಕು ಎಂದು ಆಗ್ರಹಿಸಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕೆಲಭಾಗದ ರೈತರು ಹೋರಾಟ ಮುಂದುವರಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಲೀಕರ ಜೊತೆ ಗುರುವಾರ ಸುಮಾರು ಐದು ತಾಸು ಚರ್ಚೆ ನಡೆಸಿದ ಮುಖ್ಯಮಂತ್ರಿ, ‘ರೈತರೊಂದಿಗೆ ವಿಶ್ವಾಸದ ಮೇಲೆ ನೀವು ಎಫ್‌ಆರ್‌ಪಿಗಿಂತ (ನ್ಯಾಯಯುತ ದರ) ಹೆಚ್ಚು ದರ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದೀರಿ. ಆದ್ದರಿಂದ, ಈ ಮೊತ್ತ ಪಾವತಿಸುವುದು ನಿಮ್ಮ ಬದ್ಧತೆ’ ಎಂದು ಸೂಚಿಸಿದ್ದಾರೆ.

‘ಸಕ್ಕರೆ ದರ ಏಕಾಏಕಿ ಕುಸಿದಿದ್ದರಿಂದ ಮತ್ತು ಇತರ ಕೆಲವು ಸಮಸ್ಯೆಗಳ ಕಾರಣದಿಂದ 2017-18ನೇ ಸಾಲಿನಲ್ಲಿ ಸಮಸ್ಯೆ ತಲೆದೋರಿದೆ’ ಎಂದು ಕಾರ್ಖಾನೆ ಮಾಲೀಕರು, ತಮ್ಮ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಟನ್‌ಗೆ ₹ 2,900 ದರದಲ್ಲಿ ಕಬ್ಬು ಖರೀದಿಸಲಾಗಿತ್ತು. ಸಾರಿಗೆ ಮತ್ತು ಕಟಾವು ವೆಚ್ಚ ₹ 650 ಕಡಿತಗೊಳಿಸಿ, ರೈತರಿಗೆ ₹ 2,250 ದರ ಪಾವತಿಸಲು ಸಭೆಯಲ್ಲಿ ಮಾಲೀಕರು ಒಪ್ಪಿದ್ದಾರೆ.

‘ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು. ಸರ್ಕಾರ ರೂಪಿಸುವ ಮಾರ್ಗಸೂಚಿಯನ್ನು ಕಾರ್ಖಾನೆ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

‘ದೇಶದಲ್ಲಿ ಪ್ರಸ್ತುತ 230 ಲಕ್ಷ ಟನ್ ಸಕ್ಕರೆ ದಾಸ್ತಾನು ಇದೆ. ಹೆಚ್ಚುವರಿ ಉತ್ಪಾದನೆ ಸಮಸ್ಯೆ ಸರಿಪಡಿಸಲು ಕೇಂದ್ರ ಸರ್ಕಾರ ಕಬ್ಬಿನಿಂದ ಇಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಕಟಾವಿಗೆ ಸಿದ್ಧವಿರುವ ಕಬ್ಬು ಅರೆಯಲು ರೈತರ ಜೊತೆ ಸೂಕ್ತ ರೀತಿಯ ಒಡಂಬಡಿಕೆ ಮಾಡಿಕೊಳ್ಳಬೇಕು. ಪರಸ್ಪರ ಸಮನ್ವಯದಿಂದ ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರಿಸಬೇಕು’ ಎಂದೂ ತಿಳಿಸಿದರು.

ಉಪಸ್ಥಿತರಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ, ಶಾಸಕರಾದ ಸತೀಶ ಜಾರಕಿಹೊಳಿ, ಮುರುಗೇಶ ನಿರಾಣಿ, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಎಸ್.ಆರ್. ಪಾಟೀಲ ಸೇರಿ 31 ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆ ಮಾಲೀಕರ ಒಕ್ಕೂಟದ ಅಧ್ಯಕ್ಷರು.

ಸಭೆಯ ತೀರ್ಮಾನಗಳು

l ರೈತರ ಬಾಕಿಯನ್ನು 15 ದಿನಗಳೊಳಗೆ ಪಾವತಿಸಬೇಕು

l ಎಫ್‌ಆರ್‌ಪಿ ದರ ಪಾವತಿ ಕಡ್ಡಾಯ

l ಸರ್ಕಾರದ ಮಾರ್ಗಸೂಚಿಯಂತೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು

l ಕಬ್ಬು ನಿಯಂತ್ರಣ ಮಂಡಳಿಯ ನಿರ್ಣಯದಂತೆ ಆದಾಯ ಹಂಚಿಕೆ ಸೂತ್ರ ಜಾರಿ

l ತೂಕ, ಇಳುವರಿ ಪ್ರಮಾಣ ನಿಗದಿಯಲ್ಲಿ ಪಾರದರ್ಶಕತೆಗೆ ಮಾರ್ಗಸೂಚಿ

ಮಾಲೀಕರ ಪ್ರತ್ಯೇಕ ಸಭೆ

ಮುಖ್ಯಮಂತ್ರಿ ಜೊತೆಗೆ ಸಭೆ ನಡೆಸುವುದಕ್ಕೂ ಮುನ್ನ ಕೆಲವು ಸಕ್ಕರೆ ಕಾರ್ಖಾನೆಗಳ ಮಾಲೀಕರು ಅಶೋಕ ಹೋಟೆಲ್‌ನಲ್ಲಿ ಸಭೆ ನಡೆಸಿದರು. ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಮುಂದಿಡಲು ಮತ್ತು ಸಭೆಯಲ್ಲಿ ಮುಖ್ಯಮಂತ್ರಿ ನೀಡಬಹುದಾದ ಸಲಹೆಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT