‘ಅಗೌರವವಾಗಿದ್ದರೆ ರಾಜೀನಾಮೆ’; ಸಿಎಂ ಎಚ್‌ಡಿಕೆ

7
ಬಾಯಿ ಚಪಲಕ್ಕೋ, ‌ಅಗೌರವ ಸೂಚಿಸಲೆಂದೋ ಮಾತನಾಡಿಲ್ಲ– ಕುಮಾರಸ್ವಾಮಿ

‘ಅಗೌರವವಾಗಿದ್ದರೆ ರಾಜೀನಾಮೆ’; ಸಿಎಂ ಎಚ್‌ಡಿಕೆ

Published:
Updated:
Deccan Herald

ಬೆಂಗಳೂರು: ‘ನಾಡಿನ‌ ಮಹಿಳೆಯರಿಗೆ ಯಾವತ್ತಾದರೂ ಅವಮಾನ ಮಾಡಿದರೆ, ಅಗೌರವ ತೋರಿದರೆ ಒಂದು‌ ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ. ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾವುಕರಾದರು.

ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ್ದ ಜಯಶ್ರೀ ಗುರಣ್ಣವರ, ‘ಆಡಳಿತ ನಡೆಸಲು ಕುಮಾರಸ್ವಾಮಿ ನಾಲಾಯಕ್’ ಎಂದು ನಿಂದಿಸಿದ್ದರು. ಅದಕ್ಕೆ ಕೃಷಿಮೇಳದಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ, ‘ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ’ ಎಂದು ಪ್ರಶ್ನಿಸಿದ್ದರು. ಮುಖ್ಯಮಂತ್ರಿಯ ಈ ಹೇಳಿಕೆ ಖಂಡಿಸಿ ರಾಜ್ಯದ ವಿವಿಧೆಡೆ ಸೋಮವಾರ ಪ್ರತಿಭಟನೆ ವ್ಯಕ್ತವಾಗಿತ್ತು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ನಾನು ಆ ಮಹಿಳೆಯನ್ನು ನಾಲ್ಕು ವರ್ಷ ನಿದ್ದೆ ಮಾಡುತ್ತಿದ್ರಾ ತಾಯಿ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನನ್ನು ನಾಲಾಯಕ್ ಮುಖ್ಯಮಂತ್ರಿ ಎಂದು ಏಕವಚನದಲ್ಲಿ ಕರೆಯುವ ಮೂಲಕ ಆ ಮಹಿಳೆ ನಾಡಿನ ಜನರಿಗೆ ಅವಮಾನ ಮಾಡಿದ್ದಾರೆ’ ಎಂದೂ ಹೇಳಿದರು.

‘ನನ್ನ ಜವಾಬ್ದಾರಿ ಏನೆಂಬುದು ಗೊತ್ತಿದೆ. ಅದನ್ನು ಇನ್ನೊಬ್ಬರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ.‌‌ ನಾನು ಎಂದೂ ಬಾಯಿ ಚಪಲಕ್ಕೋ, ‌
ಅಗೌರವ ಸೂಚಿಸಲೆಂದೋ ಮಾತನಾಡಲ್ಲ. ಕಬ್ಬು ಬೆಳೆಗಾರರು ಯಾವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವುದು ನನಗೆ ಈವರೆಗೂ ಗೊತ್ತಾಗಿಲ್ಲ. ರೈತರಿಗೆ ಅಗೌರವ ಸೂಚಿಸುವಂಥ ಕೆಲಸ ನಾನೇನು ಮಾಡಿದ್ದೇನೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಕಬ್ಬು ಬಾಕಿ ₹ 35 ಕೋಟಿ ಮಾತ್ರ’

‘ನಾನು ಅಧಿಕಾರ ವಹಿಸಿ ಕೊಂಡಾಗ ಕಬ್ಬು ಬಾಕಿ ಪಾವತಿ ಮೊತ್ತ ₹ 2,000 ಕೋಟಿ ಇತ್ತು. ಈಗ ₹ 35 ಕೋಟಿ ಮಾತ್ರ ಇದೆ. ₹ 450 ಕೋಟಿ ಬಾಕಿ ಇದೆ ಎಂದು ರೈತರು ಹೇಳುತ್ತಿದ್ದಾರೆ. ಹಾಗಿದ್ದರೆ ನನ್ನ ಬಳಿ ಬನ್ನಿ. ಸಮಸ್ಯೆ ಬಗೆಹರಿಸೋಣ’ ಎಂದು ರೈತರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

‘ಬಿಜೆಪಿ ನಾಯಕರು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ರೈತರಿಗೆ ಗುಂಡಿಟ್ಟು ಕೊಂದವರು ಈ ಯಡಿಯೂರಪ್ಪ. ಈಗ ಅವರು ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !