ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ₹ 1,646 ಕೋಟಿ ಕಬ್ಬು ಹಣ ಬಾಕಿ

ಲಾಕ್‌ಡೌನ್‌ ಹೊಡೆತದ ಮಧ್ಯೆ ಬೆಳೆಗಾರರಿಗೆ ಬರೆ
Last Updated 27 ಏಪ್ರಿಲ್ 2020, 20:06 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಲಾಕ್‌ಡೌನ್‌ ಪರಿಣಾಮದಿಂದ ರೈತ ವರ್ಗ ಸಂಕಷ್ಟದಲ್ಲಿರುವ ಮಧ್ಯೆಯೇ ರಾಜ್ಯದ 46 ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ₹ 1,646.71 ಕೋಟಿ ಬಾಕಿ ಉಳಿಸಿಕೊಂಡು ಗಾಯದ ಮೇಲೆ ಬರೆ ಎಳೆದಿವೆ.

2019–20ನೇ ಸಾಲಿನ ಹಂಗಾಮಿನಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿರುವ 62 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ. ಈ ಪೈಕಿ 16 ಕಾರ್ಖಾನೆಗಳು ಮಾತ್ರ ರೈತರಿಗೆ ಸಲ್ಲಬೇಕಾದ ಎಫ್ಆರ್‌ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ಸಂಪೂರ್ಣ ಪಾವತಿಸಿವೆ.

ಭಾರಿ ಮೊತ್ತ ತನ್ನಲ್ಲೇ ಉಳಿಸಿಕೊಂಡ ಬಹುತೇಕ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿವೆ. ಸಚಿವರಾದ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಶಾಸಕರಾದ ಉಮೇಶ ಕತ್ತಿ, ಮುರುಗೇಶ ನಿರಾಣಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಆನಂದ ನ್ಯಾಮೇಗೌಡ, ಎಸ್‌. ಆರ್‌. ಪಾಟೀಲ ಮಾಲೀಕತ್ವದ ಕಾರ್ಖಾನೆಗಳು ಈ ಪಟ್ಟಿಯಲ್ಲಿವೆ.

ಅದರಲ್ಲೂ, ಬೆಳಗಾವಿ ಜಿಲ್ಲೆ ಅಥಣಿಯಲ್ಲಿರುವ ಉಗಾರ್ ಶುಗರ್ಸ್‌, ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿರುವ ಬೀಳಗಿ ಶುಗರ್ಸ್, ಮುಧೋಳದಲ್ಲಿರುವ ಗೋದಾವರಿ ಶುಗರ್ಸ್‌, ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌, ನಿರಾಣಿ ಶುಗರ್ಸ್‌, ಜಮಖಂಡಿಯಲ್ಲಿರುವ ಶ್ರೀ ಸಾಯಿಪ್ರಿಯಾ ಶುಗರ್ಸ್‌ ಕಾರ್ಖಾನೆಗಳು ಬೆಳೆಗಾರರಿಗೆ ತಲಾ ₹ 100 ಕೋಟಿಗೂ ಹೆಚ್ಚು ಪಾವತಿಸಬೇಕಿವೆ. ಗೋದಾವರಿ ಶುಗರ್ಸ್ ಅತೀ ಹೆಚ್ಚು ₹ 161.28 ಕೋಟಿ ಉಳಿಸಿಕೊಂಡಿದೆ.

ಅತೀ ಹೆಚ್ಚು ಕಾರ್ಖಾನೆಗಳಿರುವ (24) ಬೆಳಗಾವಿ ಜಿಲ್ಲೆಯಲ್ಲಿ 14 ಕಾರ್ಖಾನೆಗಳು ₹ 463.01 ಕೋಟಿ ಉಳಿಸಿಕೊಂಡಿವೆ. 11 ಕಾರ್ಖಾನೆಗಳಿರುವ ಬಾಗಲಕೋಟೆ ಜಿಲ್ಲೆಯಲ್ಲಿ ನಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ.) ಶುಗರ್ಸ್‌ ಹೊರತುಪಡಿಸಿ ಉಳಿದ 10 ಕಾರ್ಖಾನೆಗಳು ₹ 790.59 ಕೋಟಿ ರೈತರಿಗೆ ವಿತರಿಸಬೇಕಿದೆ.

ವಿಜಯಪುರದಲ್ಲಿರುವ ಎಂಟು ಕಾರ್ಖಾನೆಗಳ ಪೈಕಿ ಎರಡು ಮಾತ್ರ ರೈತರ ಹಣ ಪೂರ್ಣ ಚುಕ್ತಾ ಮಾಡಿವೆ. ಉಳಿದ ಆರು ಕಾರ್ಖಾನೆಗಳು ಒಟ್ಟು ₹ 100.09 ಕೋಟಿ ಉಳಿಸಿಕೊಂಡಿವೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿರುವ ಎರಡೂ ಕಾರ್ಖಾನೆಗಳು ಮತ್ತು ಗದಗ, ಮೈಸೂರು, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ತಲಾ ಒಂದೊಂದು ಕಾರ್ಖಾನೆ ಕಬ್ಬು ಹಣ ಸಂಪೂರ್ಣ ಪಾವತಿಸಿವೆ.

‘ಕಬ್ಬು ಬಾಕಿ ಪಾವತಿಸದ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗಿದೆ. ಹೀಗಾಗಿ, ಕಳೆದ 25 ದಿನಗಳಲ್ಲಿ ₹ 1,000 ಕೋಟಿ (ಶೇ 85ರಷ್ಟು) ಪಾವತಿಯಾಗಿದ್ದು, ₹ 1,646.71 ಕೋಟಿ ಇನ್ನೂ ಬಾಕಿ ಇದೆ. ನೋಟಿಸ್‌ ನೀಡಿದ ಬಳಿಕವೂ ಬಾಕಿ ಉಳಿಸಿಕೊಂಡ ಕಾರ್ಖಾನೆಗಳಿಗೆಆಯಾ ಜಿಲ್ಲಾಧಿಕಾರಿಗಳ ಮೂಲಕ ಜಪ್ತಿ ಪ್ರಮಾಣ ಪತ್ರ (ರಿಕವರಿ ಸರ್ಟಿಫಿಕೇಟ್‌) ಜಾರಿ ಮಾಡಲಾಗುವುದು’ ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಅಕ್ರಂ ಪಾಷಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT