ನಿಲ್ಲದ ಹೋರಾಟ: 200ಕ್ಕೂ ಹೆಚ್ಚು ಟ್ರಾಕ್ಟರ್ ತಡೆದು ರೈತರ ಪ್ರತಿಭಟನೆ

7

ನಿಲ್ಲದ ಹೋರಾಟ: 200ಕ್ಕೂ ಹೆಚ್ಚು ಟ್ರಾಕ್ಟರ್ ತಡೆದು ರೈತರ ಪ್ರತಿಭಟನೆ

Published:
Updated:
Deccan Herald

ಮುಧೋಳ/ಅಥಣಿ: ಅಹವಾಲು ಆಲಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ ಬಳಿಕವೂ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧೆಡೆ, ಕಬ್ಬು ಬೆಳೆಗಾರರು ಪ್ರತಿಭಟನೆ ಮುಂದುವರಿಸಿದ್ದಾರೆ.

ಕಬ್ಬು ಬಾಕಿ ಪಾವತಿಸಲು ಹಾಗೂ 2018–19ನೇ ಸಾಲಿನ ಎಫ್‌ಆರ್‌ಪಿ ದರ ಪ್ರಕಟಿಸುವಂತೆ ಆಗ್ರಹಿಸಿ, ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರೈತರು ನಡೆಸುತ್ತಿರುವ ಧರಣಿಯು ಶನಿವಾರವೂ ಮುಂದುವರಿದಿದ್ದು 14ನೇ ದಿನಕ್ಕೆ ಕಾಲಿಟ್ಟಿದೆ.

ತಮ್ಮ ಬೇಡಿಕೆ ಈಡೇರುವವರೆಗೆ ಕಾರ್ಖಾನೆಗೆ ಕಬ್ಬು ಸಾಗಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಪ್ರತಿಭಟನೆಯ ನಡುವೆಯೇ ಕಬ್ಬು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಅವುಗಳ ಚಕ್ರಗಳ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮವಾಗಿ, ತಾಲ್ಲೂಕಿನ ನಾಲ್ಕು ಸಕ್ಕರೆ ಕಾರ್ಖಾನೆಗಳ ಪೈಕಿ ಮೂರು ಕಾರ್ಖಾನೆಗಳು ಇದುವರೆಗೆ ಕಬ್ಬು ನುರಿಸುವ ಕೆಲಸವನ್ನು ಆರಂಭಿಸಿಲ್ಲ. ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಆರಂಭವಾಗಿದ್ದು, ಸ್ಥಗಿತಗೊಳಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಶುಕ್ರವಾರ ಮುಧೋಳ ಬಂದ್‌ ಆಗಿದ್ದರೆ, ಶನಿವಾರ ಮಹಾಲಿಂಗಪುರ ಬಂದ್‌ ಇತ್ತು.

ಟ್ರಾಕ್ಟರ್‌ ತಡೆದು ಪ್ರತಿಭಟನೆ:ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮುರಗುಂಡಿ ಗ್ರಾಮದ ಬಳಿ, ಶನಿವಾರ ಕಬ್ಬು ಸಾಗಿಸುತ್ತಿದ್ದ 200ಕ್ಕೂ ಹೆಚ್ಚು ಟ್ರಾಕ್ಟರ್‌ಗಳನ್ನು ತಡೆದ ರೈತರು, ವಾಹನಗಳ ಚಕ್ರಗಳ ಗಾಳಿ ತೆಗೆದರು. ಇದರಿಂದಾಗಿ ಅಂದಾಜು 3 ಕಿ.ಮೀ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.  ರಸ್ತೆಯ ಪಕ್ಕದಲ್ಲೇ ಬಿಡಾರ ಹೂಡಿದ್ದ ಪ್ರತಿಭಟನಾಕಾರರು, ಕಾರ್ಖಾನೆಗಳಿಗೆ ಕಬ್ಬು ಪೂರೈಕೆಯಾಗದಂತೆ ತಡೆದರು. ಇದರಿಂದ, ಇತರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !