ಬಯಲಿಗೆ ಬಂದ ಸಕ್ಕರೆ ಕಾರ್ಖಾನೆ ತ್ಯಾಜ್ಯ

7
ತ್ಯಾಜ್ಯ ಘಟಕ ಸ್ಫೋಟದ ಕಹಿ ನೆನಪು ಮಾಸುವ ಮುನ್ನ ಮತ್ತೊಂದು ಅವಾಂತರ

ಬಯಲಿಗೆ ಬಂದ ಸಕ್ಕರೆ ಕಾರ್ಖಾನೆ ತ್ಯಾಜ್ಯ

Published:
Updated:
Deccan Herald

ಕೊಪ್ಪ (ಮಂಡ್ಯ): ಇಲ್ಲಿಯ ಎನ್ಎಸ್ಎಲ್ ಕಾರ್ಖಾನೆಯಲ್ಲಿ ತ್ಯಾಜ್ಯ ಸಂಗ್ರಹ ಘಟಕ ಸ್ಫೋಟಗೊಂಡ ನಂತರವೂ ಕಾರ್ಖಾನೆ ಸಿಬ್ಬಂದಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಸಮೀಪದ ಹೊಸಗಾವಿ ಗ್ರಾಮದ ಬಳಿ ಇರುವ ಕಾರ್ಖಾನೆಯ 20 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸುರಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಕ್ಕರೆ ಕಾರ್ಖಾನೆ ತ್ಯಾಜ್ಯವನ್ನು ಮಣ್ಣಿನ ಜೊತೆ ಸೇರಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಕಾರ್ಖಾನೆ ಸಿಬ್ಬಂದಿ ನಿಯಮ ಮೀರಿ ಕೃಷಿ ಭೂಮಿ ಹಾಗೂ ಜನವಸತಿ ಇರುವ ಸ್ಥಳದಲ್ಲಿ ಸುರಿದಿದ್ದಾರೆ. ರಾತ್ರಿ ವೇಳೆ ಶಿಂಷಾ ನದಿಗೆ ತ್ಯಾಜ್ಯ ಹರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ನಂತರ ತ್ಯಾಜ್ಯ ಘಟಕಕ್ಕೆ ಪ್ರತಿಭಟನಾಕಾರರು ಬೀಗ ಹಾಕಿದ್ದರು.

ಇದರಿಂದ ಎಚ್ಚೆತ್ತುಕೊಂಡ ಕಾರ್ಖಾನೆಯವರು ಟ್ಯಾಂಕರ್‌ಗಳ ಮೂಲಕ ವಿಷಯುಕ್ತ ತ್ಯಾಜ್ಯವನ್ನು ತುಂಬಿಸಿಕೊಂಡು ಬಂದು ಹೊಸಗಾವಿ ಗ್ರಾಮದ ಬಳಿ ವಿಲೇವಾರಿ ಮಾಡಿದ್ದಾರೆ. ಅಕ್ಕಪಕ್ಕದಲ್ಲಿ ಭತ್ತ, ಕಬ್ಬು, ರಾಗಿ ಬೆಳೆ ಇದ್ದು ಬೆಳೆಗೆ ಅಪಾಯ ಎದುರಾಗಿದೆ. ಕಾರ್ಖಾನೆಯ ಕೃತ್ಯಕ್ಕೆ ಚಿಕ್ಕೋನಹಳ್ಳಿ, ಅಣೆದೊಡ್ಡಿ, ತಗ್ಗಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಇದು ನಮ್ಮ ಜಾಗ, ನಾವು ಏನು ಬೇಕಾದರೂ ಮಾಡುತ್ತೇವೆ’ ಎಂದು ಕಾರ್ಖಾನೆ ಸಿಬ್ಬಂದಿ ಉಡಾಫೆ ಉತ್ತರ ನೀಡುತ್ತಿದ್ದಾರೆ. ವಿಷಯುಕ್ತ ನೀರು ನಾಲೆಯ ಮೂಲಕ ರೈತರ ಗದ್ದೆಗಳಿಗೆ ಸೇರುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

‘ತ್ಯಾಜ್ಯ ಘಟಕ ಸ್ಫೋಟದಿಂದ ರೈತರಿಗೆ ಆದ ನಷ್ಟಕ್ಕೆ ಕಾರ್ಖಾನೆ ಪರಿಹಾರ ನೀಡಲಿದೆ. ಬೆಳೆಹಾನಿ ಸಮೀಕ್ಷೆಯನ್ನು ಕೃಷಿ ಇಲಾಖೆ ನಡೆಸುತ್ತಿದೆ. ಹೊಸಗಾವಿ ಬಳಿ ತ್ಯಾಜ್ಯ ವಿಲೇವಾರಿ ಮಾಡಿರುವ ಬಗ್ಗೆ ತಕ್ಷಣ ಪರಿಶೀಲನೆ ನಡೆಸಲಾಗುವುದು’ ಎಂದು ಮದ್ದೂರು ತಹಶೀಲ್ದಾರ್‌ ರೂಪಾ ಹೇಳಿದರು.

ಪ್ರತಿಕ್ರಿಯೆ ಪಡೆಯಲು ಎನ್‌ಎಸ್‌ಎಲ್‌ ಆಡಳಿತ ಮಂಡಳಿ ಉಪಾಧ್ಯಕ್ಷ ಪಿ.ಜಿ.ಕೆ.ದತ್‌ ಅವರಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !