ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನಗಳಲ್ಲಿ ಬಾಕಿ ಪಾವತಿಸಿ: ಸಕ್ಕರೆ ಕಾರ್ಖಾನೆಗಳಿಗೆ ಸಚಿವ ಹೆಬ್ಬಾರ್‌ ಸೂಚನೆ

Last Updated 22 ಜೂನ್ 2020, 11:25 IST
ಅಕ್ಷರ ಗಾತ್ರ

ಬೆಳಗಾವಿ: ‘ಕಬ್ಬು ಪೂರೈಸಿದ ರೈತರಿಗೆ ನೀಡಬೇಕಾದ ಬಾಕಿಯನ್ನು ಸಕ್ಕರೆ ಕಾರ್ಖಾನೆಗಳು 15 ದಿನಗಳಲ್ಲಿ ಪಾವತಿಸಬೇಕು’ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‌ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳು ಹಾಗೂ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿಗಿಂತಲೂ ಹೆಚ್ಚಿನ ಬೆಲೆ ಕೊಟ್ಟಿರುವುದು ಹಾಗೂ ಶೇ 96ಕ್ಕಿಂತಲೂ ಹೆಚ್ಚಿನ ಬಿಲ್‌ ಪಾವತಿಸಿರುವುದು ಅಭಿನಂದನಾರ್ಹ. ಬಾಕಿ ಉಳಿಸಿಕೊಂಡರೆ ಕಾರ್ಮಿಕರು ಹಾಗೂ ರೈತರು ತೊಂದರೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಆಸ್ಪದ ಕೊಡಬಾರದು’ ಎಂದರು.

ವಿಶೇಷ ಕಾರ್ಯಾಚರಣೆ ನಡೆಸಿ

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ₹ 5 ಸಾವಿರ ಪರಿಹಾರ ಘೋಷಿಸಲಾಗಿದೆ.ಜಿಲ್ಲೆಯಲ್ಲಿ 85ಸಾವಿರ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದಾರೆ. 60ಸಾವಿರ ಮಂದಿಗೆ ಪರಿಹಾರ ನೀಡಲಾಗಿದೆ. ಉಳಿದವರಿಗೆ 15 ದಿನಗಳ ಒಳಗೆ ತಲುಪಿಸಬೇಕು. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

‘ರಾಜ್ಯದಲ್ಲಿ 7.80 ಲಕ್ಷ ಕಾರ್ಮಿಕರು ನವೀಕರಣ ಮಾಡದಿದ್ದರೂ ಪರಿಹಾರ ದೊರೆಯಲಿದೆ. ಅವರ ಆಧಾರ್ ಬ್ಯಾಂಕ್ ಖಾತೆ ತೆಗೆದುಕೊಂಡು ಹಣ ಜಮಾ ಮಾಡಲಾಗುತ್ತಿದೆ. ಇನ್ನೂ 5 ಲಕ್ಷ ಮಂದಿಯ ಮಾಹಿತಿ ಸಂಗ್ರಹಿಸಬೇಕಾಗಿದೆ. ಹಣಕಾಸಿನ ಕೊರತೆ ಇಲ್ಲ. ಈಗಾಗಲೇ ಹಣ ಬ್ಯಾಂಕಲ್ಲಿ ಇಡಲಾಗಿದೆ’ ಎಂದರು.

ಶೋಷಣೆಗೆ ಆಸ್ಪದ ಕೊಟ್ಟಿಲ್ಲ

‘ಕೋವಿಡ್–19 ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರು ಶೋಷಣೆಗೆ ಒಳಗಾಗದಂತೆ ನೋಡಿಕೊಂಡಿದ್ದೇವೆ. ಅವರಿಗೆ ಪರಿಹಾರ, ಆಹಾರ ಕಿಟ್‌ ನೀಡಲಾಗಿದೆ. ಶ್ರಮಿಕರನ್ನು ಅವರ ಊರುಗಳಿಗೆ ತಲುಪಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಅನುಮತಿ ಇಲ್ಲದೆ ಮತ್ತು ಕಾರ್ಮಿಕರಿಗೆ ವೇತನ ಕೊಡದೇ ಕಾರ್ಖಾನೆ ಮುಚ್ಚಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.

ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಶೀಘ್ರವೇ ಪಾವತಿಸುವುದಾಗಿ ತಿಳಿಸಿದರು. ‘ಆರ್ಥಿಕ ತೊಂದರೆ ನಿವಾರಣೆಗಾಗಿ, ಕೇಂದ್ರದಿಂದ ಬರಬೇಕಿರುವ ಸಕ್ಕರೆ ರಫ್ತು ಸಹಾಯಧನವನ್ನು ಕೂಡಲೇ ಕೊಡಿಸಬೇಕು’ ಎಂದು ಕೋರಿದರು.

‘ಕೇಂದ್ರದಿಂದ ಹಣ ಬಂದಾಗ ಕೊಡುತ್ತೇವೆ ಎನ್ನುವ ಷರತ್ತು ಹಾಕಬೇಡಿ’ ಎಂದು ಸಚಿವರು ಸೂಚಿಸಿದರು.

₹ 5ಸಾವಿರ ಕೊಡಿ

ಶಾಸಕ ಅಭಯ ಪಾಟೀಲ, ‘ನೇಕಾರರನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಬೇಕು. ಅವರಿಗೆ ₹ 2ಸಾವಿರದ ಬದಲಿಗೆ ₹ 5ಸಾವಿರ ಪರಿಹಾರ ಕೊಡಬೇಕು. ಅಕ್ಕಸಾಲಿಗರ ಬಳಿ ಕೆಲಸ ಮಾಡುವ ಕಾರ್ಮಿಕರಿಗೂ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅನಿಲ ಬೆನಕೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT