ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನ ಮುಟ್ಟುತ್ತಿರುವ ಸುಮಲತಾ

ಕಿಕ್ಕೇರಿಯಿಂದ ಕೆ.ಆರ್‌.ನಗರದವರೆಗೆ ಪ್ರವಾಸ, ಸ್ಥಳೀಯ ದೇವಾಲಯಗಳಲ್ಲಿ ಪೂಜೆ
Last Updated 3 ಮಾರ್ಚ್ 2019, 19:56 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಘೋಷಿಸಿರುವ ನಟಿ ಸುಮಲತಾ ಕ್ಷೇತ್ರದ ಮೂಲೆಮೂಲೆಗೂ ಭೇಟಿ ಕೊಡುತ್ತಿದ್ದಾರೆ. ಜನಾಭಿಪ್ರಾಯ ಸಂಗ್ರಹಿಸಲು ಹೋಬಳಿಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಮನೆಗಳಿಗೂ ತೆರಳುತ್ತಿರುವ ಅವರು ಜನರ ಮನೆ, ಮನ ಮುಟ್ಟಲು ಯತ್ನಿಸುತ್ತಿದ್ದಾರೆ.

ಈಗಾಗಲೇ ಹಾಸನ ಗಡಿ ಕಿಕ್ಕೇರಿಯಿಂದ ಮೈಸೂರು ಗಡಿ ಕೆ.ಆರ್‌.ನಗರದವರೆಗೂ ಕ್ಷೇತ್ರ ಪ್ರವಾಸ ಮಾಡಿ ಜನರ ಮನದಾಳ ಅರಿಯಲು ಪ್ರಯತ್ನಿಸಿದ್ದಾರೆ. ಹಿರಿಯ ಕಾಂಗ್ರೆಸ್‌ ಮುಖಂಡರ ಭೇಟಿ ಜೊತೆಗೆ ಕಾರ್ಯಕರ್ತರ ಮನೆಗೂ ತೆರಳಿ ಅವರ ಮನೆಯಲ್ಲೇ ಊಟ ಮಾಡಿ ಮುಂದೆ ಸಾಗುತ್ತಿದ್ದಾರೆ. ಜಿಲ್ಲೆಯ ಸೊಸೆಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಮಹಿಳೆಯರು ಸೇರುತ್ತಿದ್ದಾರೆ. ಪಟ್ಟಣಗಳ ಪ್ರಮುಖ ಪ್ರದೇಶದಲ್ಲಿ ನಿಂತು ಜನರ ಜೊತೆ ನೇರವಾಗಿ ಮಾತನಾಡುತ್ತಿದ್ದಾರೆ.

ಕೆ.ಆರ್‌.ನಗರಕ್ಕೆ ಭೇಟಿ ನೀಡಿದ್ದ ಸುಮಲತಾ ಅವರನ್ನು ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ರ‍್ಯಾಲಿಯ ಮೂಲಕ ಸ್ವಾಗತ ಕೋರಿದರು. ನಾಗಮಂಗಲ, ಕೆ.ಆರ್‌.ಪೇಟೆ, ಪಾಂಡವಪುರ ಹಲವೆಡೆ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅನುಭವಿ ರಾಜಕಾರಣಿಯಂತೆ ವರ್ತಿಸುತ್ತಿರುವ ಅವರು ಕಾಂಗ್ರೆಸ್ ಪಕ್ಷದ ಕಚೇರಿಗಳಿಗೆ ತೆರಳಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿದ್ದಾರೆ.

‘30 ವರ್ಷಗಳಿಂದ ಅಂಬರೀಷ್‌ ಅವರ ಹಿಂದೆ ನಿಂತು ಹಲವು ಚುನಾವಣೆಗಳನ್ನು ಕಂಡಿದ್ದಾರೆ. ಅವರು ರಾಜಕಾರಣಕ್ಕೆ ಹೊಸಬರಲ್ಲ, ಸಾಕಷ್ಟು ಅನುಭವವಿದೆ. ರಾಜಕಾರಣಿಗೆ ಇರಬೇಕಾದ ಗಾಂಭೀರ್ಯ ಇದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್‌ ಹೇಳಿದರು.

ನಿಖಿಲ್‌ ಜನಪ್ರತಿನಿಧಿಗಳ ಭೇಟಿ: ಜೆಡಿಎಸ್‌ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ನಿಖಿಲ್‌ ಕುಮಾರಸ್ವಾಮಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಆಗಿಂದಾಗ್ಗೆ ಕ್ಷೇತ್ರಕ್ಕೆ ಭೇಟಿ ಕೊಡುತ್ತಿದ್ದಾರೆ. ಆದರೆ, ಸುಮಲತಾ ರೀತಿಯಲ್ಲಿ ತಳಮಟ್ಟದ ಕಾರ್ಯಕರ್ತರು ಹಾಗೂ ಜನರನ್ನು ಭೇಟಿ ಮಾಡುತ್ತಿಲ್ಲ. ಶಾಸಕರನ್ನು ಮಾತ್ರ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ನಿಖಿಲ್‌ ಗೆಲ್ಲಿಸಿಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ಷೇತ್ರದ ಜೆಡಿಎಸ್‌ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಬರೀಷ್‌ ಇದ್ದ ಮನೆ ಬಾಡಿಗೆಗೆ

ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಅಂಬರೀಷ್‌ ಬಾಡಿಗೆ ಪಡೆದಿದ್ದ ಮನೆಯನ್ನೇ ಸುಮಲತಾ ಬಾಡಿಗೆಗೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಷ್‌ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆಗ ಸುಮಲತಾ ಕೂಡ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದರು. ಅಂಬರೀಷ್‌ ಅವರ ಅದೃಷ್ಟದ ಮನೆ ಎಂದೇ ಹೇಳಲಾಗುತ್ತಿತ್ತು.

‘ಬಂದೀಗೌಡ ಬಡಾವಣೆಯಲ್ಲಿ ಸ್ವಂತ ಮನೆ ಕಟ್ಟಿಸುವ ಚಿಂತನೆ ಇದೆ. ಅದಕ್ಕೂ ಮೊದಲು ಅಂಬರೀಷ್‌ ಇದ್ದ ಮನೆಯನ್ನೇ ಬಾಡಿಗೆಗೆ ಪಡೆಯಲಿದ್ದಾರೆ. ಅಲ್ಲೇ ಕಚೇರಿ ತೆರೆಯಲಿದ್ದಾರೆ. ಶೀಘ್ರ ಸುಮಲತಾ ಹೊಸ ಮನೆ ಪ್ರವೇಶ ಮಾಡುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT