ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಕ್ಕೆ ದರ್ಶನ್–ಬಲಕ್ಕೆ ಯಶ್: ಜೆಡಿಎಸ್ ಭದ್ರಕೋಟೆಯಲ್ಲಿ ಸುಮಲತಾ ಶಕ್ತಿ ಪ್ರದರ್ಶನ

ರಾರಾಜಿಸಿದ ಕಾಂಗ್ರೆಸ್ ಬಾವುಟ
Last Updated 2 ಮೇ 2019, 11:56 IST
ಅಕ್ಷರ ಗಾತ್ರ

ಮಂಡ್ಯ: ಎಡಭಾಗಕ್ಕೆ ನಟ ದರ್ಶನ್‌, ಬಲಕ್ಕೆ ಯಶ್‌‌, ನಡುವೆ ಸುಮಲತಾ, ಮುಂದೆ ಜನಸಾಗರ...

ಮಂಡ್ಯ ಲೋಕಸಭೆಗೆ ಸುಮಲತಾ ಅಂಬರೀಷ್‌ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೊರಬಂದ ನಂತರ ನಡೆದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯವಿದು.

ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆಯಿಂದಲೂ ಸಾವಿರಾರು ಜನ ಸೇರಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ಸುಮಲತಾ 11 ಗಂಟೆಗೆ ನಗರ ತಲುಪಿದರು. ಅಷ್ಟೊತ್ತಿಗಾಗಲೇ ಜಿಲ್ಲಾಧಿಕಾರಿ ಕಚೇರಿ ಹಾಗೂ ಸಮಾವೇಶ ನಡೆಯುವ ಸಿಲ್ವರ್‌ ಜ್ಯೂಬಿಲಿ ಉದ್ಯಾನದ ನಡುವೆ ಜನಸೇತುವೆ ನಿರ್ಮಾಣವಾಗಿತ್ತು. ಅಂಬರೀಷ್‌, ಸುಮಲತಾ ಭಾವಚಿತ್ರ ಹಿಡಿದು ಯುವಜನರು ಜಯಘೋಷ ಮೊಳಗಿಸಿದರು. ಕಾಂಗ್ರೆಸ್‌, ರೈತಸಂಘ ಹಾಗೂ ಹಿಂದೂ ಮಹಾಸಭಾ ಧ್ವಜಗಳು ರಾರಾಜಿಸುತ್ತಿದ್ದವು.

ಬೆಳಿಗ್ಗೆ 11.40ಕ್ಕೆ ನಾಲ್ವರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಂತರ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಆರಂಭವಾಯಿತು. ರಸ್ತೆಯುದ್ದಕ್ಕೂ ವಿದ್ಯಾರ್ಥಿಗಳು, ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಎತ್ತಿನಗಾಡಿ, ಬೈಕ್‌ ರ‍್ಯಾಲಿಯೊಂದಿಗೆ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಸಿಲ್ವರ್‌ ಜ್ಯೂಬಿಲಿ ಉದ್ಯಾನ ತಲುಪಿತು.

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧಗೊಂಡಿತ್ತು. ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಷ್ಟು ದೊಡ್ಡ ಸಂಖ್ಯೆಯನ್ನು ಸುಮಲತಾ ಹಾಗೂ ಬೆಂಬಲಿಗರೇ ನಿರೀಕ್ಷೆ ಮಾಡಿರಲಿಲ್ಲ. ‘ಮಂಡ್ಯದ ಸ್ವಾಭಿಮಾನ ಉಳಿಸಿ - ಸುಮಲತಾ ಬೆಂಬಲಿಸಿ’ ಎಂದು ಘೋಷಣೆ ಮೊಳಗಿಸಿದರು.

ಮಳವಳ್ಳಿ ಹುಚ್ಚೇಗೌಡನ ಸೊಸೆ: ಜೆಡಿಎಸ್‌ ಮುಖಂಡರ ಮಾತಿಗೆ ತಿರುಗೇಟು ನೀಡುವ ರೀತಿಯಲ್ಲಿ ಭಾಷಣ ಆರಂಭಿಸಿದ ಸುಮಲತಾ, ‘ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ನಿಮ್ಮ ಪ್ರೀತಿಯ ಅಂಬರೀಷ್‌ ಧರ್ಮಪತ್ನಿ, ಈ ಮಣ್ಣಿನ ಮಗಳು. 40 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, 5 ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ. 27 ವರ್ಷಗಳಿಂದ ಅಂಬರೀಷ್ ಪತ್ನಿಯಾಗಿದ್ದೇನೆ. ಯಾರು ಎಂದು ಪ್ರಶ್ನಿಸಿದವರಿಗೆ ಇದೇ ನನ್ನ ಉತ್ತರ. ಕೆಲವರ ಮಾತಿನಿಂದ ನೋವಾಗಿದೆ, ಅವು ನನ್ನ ಪಾಲಿನ ಬಾಣಗಳಾಗಿದ್ದವು. ಹೆಣ್ಣಾಗಿ ಅವಮಾನ ನುಂಗಿಕೊಂಡಿದ್ದೇನೆ. ಅವರ ಮಾತುಗಳಿಗೆ ಉತ್ತರ ಕೊಟ್ಟಿಲ್ಲ. ಜನರೇ ಉತ್ತರ ಕೊಟ್ಟಿದ್ದಾರೆ’ ಎಂದರು.

‘ಕಾಂಗ್ರೆಸ್‌ನಿಂದ ನಾನು ಕಣಕ್ಕೆ ಇಳಿಯಬೇಕಾಗಿತ್ತು. ಆದರೆ ಪಕ್ಷದ ಮುಖಂಡರು ಮೈತ್ರಿಧರ್ಮ ಎಂದರು. ಆದರೆ ಎಷ್ಟರಮಟ್ಟಿಗೆ ಮೈತ್ರಿಧರ್ಮ ಪಾಲಿಸುತ್ತಿದ್ದಾರೆ ಎಂಬುದನ್ನು ನೀವೇ ನೋಡಿದ್ದೀರಿ. ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೆ ನಡೆಯುತ್ತಾ? ಎಲ್ಲರ ಬೆಂಬಲ ಸಿಕ್ಕಿದೆ. ನನ್ನ ಹೋರಾಟ ಸಾಧಾರಣವಲ್ಲ, ಹಿಮಾಲಯ ಹತ್ತಿದಷ್ಟು ಕಷ್ಟ ಎಂಬುದು ಗೊತ್ತಿದೆ. ಕಷ್ಟ ಇರಬಹುದು, ಆದರೆ ಅಸಾಧ್ಯವಲ್ಲ. ಅಂಬರೀಷ್‌ ಜನರಿಗಾಗಿ ಕೇಂದ್ರ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಅಂಬರೀಷ್‌ ಪ್ರೀತಿಸುತ್ತಿದ್ದ ಜನರನ್ನು ನಾನು ಬಿಟ್ಟು ಹೋದರೆ, ಅಂಬರೀಷ್‌ ಪತ್ನಿ ಎಂದು ಹೇಳುವ ಅರ್ಹತೆ ನನ್ನಲ್ಲಿ ಉಳಿಯುವುದಿಲ್ಲ. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ಸುಮಲತಾ ಜನರ ಮುಂದೆ ಕೈಚಾಚಿ ‘ಅಂಬರೀಷ್‌ ಎಂದೂ ಯಾರ ಬಳಿಯೂ ಕೈಚಾಚಿಲ್ಲ. ಆದರೆ ಅವರ ಪ್ರೀತಿಗಾಗಿ ನಾನು ನಿಮ್ಮ ಮುಂದೆ ಕೈಚಾಚುತ್ತೇನೆ. ನನ್ನ ಕೈ ಹಿಡಿಯುತ್ತೀರಾ’ ಎಂದು ಪ್ರಶ್ನಿಸಿದರು. ಜನ ಕೈ ಮೇಲೆತ್ತಿ ಬೆಂಬಲ ವ್ಯಕ್ತಪಡಿಸಿದರು. ನಂತರ ರೈತಸಂಘದ ಬೆಂಬಲ ಸ್ಮರಿಸಿದಾಗ ಹಸಿರು ಟವೆಲ್‌ ಬೀಸಿ ಹೆಗಲ ಮೇಲೆ ಹಾಕಿಕೊಂಡರು.

ನಟ ದೊಡ್ಡಣ್ಣ, ರಾಕ್‌ಲೈನ್‌ ವೆಂಕಟೇಶ್‌, ಕಾಂಗ್ರೆಸ್‌ ಮುಖಂಡರಾದ ಸಚ್ಚಿದಾನಂದ, ಪಿ.ಎಂ.ಸೋಮಶೇಕರ್‌, ಎಂ.ಪ್ರಸನ್ನ, ಅಂಬರೀಷ್‌ ಪುತ್ರ ಅಂಬರೀಷ್‌ಗೌಡ, ಬ್ರಾಹ್ಮಣ ಸಮಾಜದ ಬೆಳ್ಳೂರು ಶಿವರಾಂ,ಕುರುಬ ಸಮಾಜದ ದೊಡ್ಡಯ್ಯ, ಮುಸ್ಲಿಂ ಮುಖಂಡ ಅನ್ವರ್‌ ಪಾಷಾ, ಕ್ರೈಸ್ತರ ಮುಖಂಡ ಜಾರ್ಜ್‌ ಇದ್ದರು.

ಮಾತುಕೊಡಿ... ಎಂದು ಜನರನ್ನು ಕೇಳಿದ ಸುಮಲತಾ
ಮಾತುಕೊಡಿ... ಎಂದು ಜನರನ್ನು ಕೇಳಿದ ಸುಮಲತಾ

ಕಾಂಗ್ರೆಸ್‌ ಮುಖಂಡರ ಬೆಂಬಲ: ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯ ನಡುವೆಯೂ ಕಾಂಗ್ರೆಸ್‌ ಮುಖಂಡರು ಸುಮಲತಾ ಅವರಿಗೆ ಬೆಂಬಲ ಸೂಚಿಸಿದರು. ಕಾಂಗ್ರೆಸ್‌ನ ಪ್ರಮುಖ ನಾಯಕರು ಪಾಲ್ಗೊಂಡಿರಲಿಲ್ಲ. ಆದರೆ ಅವರು ತಮ್ಮ ಬೆಂಬಲಿಗರನ್ನು ಸಭೆಗೆ ಕಳುಹಿಸುವ ಮೂಲಕ ಪರೋಕ್ಷ ಬೆಂಬಲದ ಸಂದೇಶ ನೀಡಿದರು.

ಕೇಬಲ್‌ ಕಟ್‌
ಮೆರವಣಿಗೆ ಆರಂಭವಾದೊಡನೆ ಜಿಲ್ಲೆಯ ಬಹುತೇಕ ಕಡೆ ಟಿ.ವಿ ಕೇಬಲ್‌ ಸಂಪರ್ಕ ಸ್ಥಗಿತಗೊಳಿಸಲಾಯಿತು. ಸುಮಲತಾ ಪ್ರಚಾರ ರ‍್ಯಾಲಿ ಪ್ರಸಾರ ಮಾಡದಂತೆ ತಡೆಯುವ ಪ್ರಯತ್ನ ನಡೆಯಿತು.

‘ಕೇಬಲ್‌ ಕಟ್‌ ಮಾಡಬಹುದು. ಆದರೆ ಅಂಬರೀಷ್‌ ಜೊತೆ ಜನರಿಗಿರುವ ಪ್ರೀತಿ ಕಟ್‌ ಮಾಡುತ್ತೀರಾ’ ಎಂದು ಸುಮಲತಾ ಪ್ರಶ್ನಿಸಿದರು.

ನಟ ದೊಡ್ಡಣ್ಣ, ‘ಸೂರ್ಯನಿಗೆ ಛತ್ರಿ ಹಿಡಿದು ಭೂಮಿಗೆ ಕತ್ತಲು ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ನಾಯಕರಿಗೆ ಎಚ್ಚರಿಕೆ
‘ಯಶ್‌, ದರ್ಶನ್‌ ಬೆಂಬಲ ನೀಡಿದರೆ ಅವರ ವಿರುದ್ಧ ಮಾತನಾಡುತ್ತೀರಿ. ಅವರು ನನ್ನ ಮಕ್ಕಳು. ತಾಯಿಗೆ ಮಕ್ಕಳು ಸಹಾಯ ಮಾಡುವುದು ತಪ್ಪಾ. ಅವರ ಅಭಿಮಾನಿಗಳು ಕೇವಲ ಮಂಡ್ಯದಲ್ಲಿ ಮಾತ್ರ ಇಲ್ಲ. ರಾಜ್ಯ, ರಾಷ್ಟ್ರದಾದ್ಯಂತ ಇದ್ದಾರೆ. ಅವರ ಮೇಲೆ ಆರೋಪ ಮಾಡಿದರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ ನಿಮ್ಮ ಅಭ್ಯರ್ಥಿಗಳಿಗೆ ಧಕ್ಕೆಯಾಗುತ್ತದೆ’ ಎಂದು ಸುಮಲತಾ ಎಚ್ಚರಿಕೆ ನೀಡಿದರು.

ಸಾಯೋವರೆಗೂ ತಪ್ಪು ಮಾಡುವೆ: ಯಶ್‌
‘ಸುಮಲತಾ ಅವರಿಗೆ ನಾವು ನೀಡಿರುವ ಬೆಂಬಲವನ್ನು ಕೆಲವರು ತಪ್ಪು ಎನ್ನುತ್ತಿದ್ದಾರೆ. ಇದು ತಪ್ಪು ಎನ್ನುವುದಾದರೆ ಸಾಯುವವರೆಗೂ ಈ ತಪ್ಪು ಮಾಡುತ್ತಲೇ ಇರುತ್ತೇನೆ’ ಎಂದು ನಟ ಯಶ್‌ ಹೇಳಿದರು.

‘ನಾನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿಲ್ಲ. ಪಾಲಹಳ್ಳಿ ಪಂಪ್‌ಹೌಸ್‌ನಲ್ಲಿ ಈಜಿದ್ದೇನೆ, ಮಂಡ್ಯ ಕಬ್ಬು ತಿಂದಿದ್ದೇನೆ. ಸಿನಿಮಾದವರು ಎಂದು ಕನಿಷ್ಠವಾಗಿ ಮಾತನಾಡಬೇಡಿ. ಸುಮ್ಮನೇ ಯಾರೂ ನಮ್ಮನ್ನು ಹೊತ್ತು ಮೆರೆಸುವುದಿಲ್ಲ. ಮಂಡ್ಯ ಜನರು ಸ್ವಾಭಿಮಾನಕ್ಕಾಗಿ ಮನೆ, ಮಠ ಕಳೆದುಕೊಳ್ಳಲು ಸಿದ್ಧರಿದ್ದಾರೆ. ಸ್ವಾಭಿಮಾನ ಗೆಲ್ಲಿಸುತ್ತಾರೆ’ ಎಂದರು.

ಪರೇಡ್‌ ಮಾಡುವೆ, ಆಗಿದ್ದಾಗ್ಲಿ: ದರ್ಶನ್‌
‘ಜನರ ಪ್ರೀತಿ ಕಂಡು ಮೈಯಲ್ಲಿರುವ ರಕ್ತ ತೆಗೆದು ಅವರ ಪಾದ ತೊಳೆಯಬೇಕು ಎನ್ನಿಸಿದೆ. ಯಾರು ಏನು ಬೇಕಾದರೂ ಹೇಳಲಿ, ಏ. 18ರ ವರೆಗೂ ಮಂಡ್ಯದಲ್ಲಿ ಪರೇಡ್‌ ಮಾಡುತ್ತೇನೆ, ಆಗಿದ್ದು ಆಗಲಿ. ನಾವು ಪಕ್ಷಕ್ಕಾಗಿ ಬಂದಿಲ್ಲ, ಪ್ರೀತಿಗಾಗಿ ಬಂದಿದ್ದೇವೆ’ ಎಂದು ನಟ ದರ್ಶನ್ ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT