ಲೋಕಸಭಾ ಚುನಾವಣೆ: ಸುಮಲತಾಗೆ ಸಿನಿತಾರೆಯರ ಬೆಂಬಲ!

7
ಮೈಸೂರಿನಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ನಟ ದರ್ಶನ್‌

ಲೋಕಸಭಾ ಚುನಾವಣೆ: ಸುಮಲತಾಗೆ ಸಿನಿತಾರೆಯರ ಬೆಂಬಲ!

Published:
Updated:

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್‌ ಪತ್ನಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ನಟ ದರ್ಶನ್‌ ವಹಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಂಬರೀಷ್‌ ಅಭಿಮಾನಿಗಳ ಮಾತಿಗೆ ಮನಸೋತಿರುವ ಸುಮಲತಾ ಚುನಾವಣಾ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಹಲವು ಗಣ್ಯರು ಈಗಾಗಲೇ ಅವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಂಬರೀಷ್‌ ಕುಟುಂಬದ ಜೊತೆ ಆಪ್ತ ಒಡನಾಟ ಹೊಂದಿರುವ ದರ್ಶನ್‌ ಪ್ರಚಾರದ ಸಂಪೂರ್ಣ ಜವಾಬ್ದಾರಿ ಹೊತ್ತು ಜಿಲ್ಲೆಯಾದ್ಯಂತ ಕೆಲಸ ಮಾಡಲಿದ್ದಾರೆ. ಶನಿವಾರ ಸುತ್ತೂರು ಜಾತ್ರೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದರ್ಶನ್‌ ಈ ವಿಚಾರ ತಿಳಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಸುಮಲತಾ ಅವರಿಗೆ ಮೊದಲಿನಿಂದಲೂ ರಾಜಕಾರಣದ ಮೇಲೆ ಆಸಕ್ತಿ ಇದೆ. ಅಂಬರೀಷ್‌ ರಾಜಕಾರಣದಲ್ಲಿ ಬಹುಕಾಲ ಉಳಿಯಲು ಅವರೇ ಮುಖ್ಯ ಕಾರಣ. ದರ್ಶನ್‌ ಸೇರಿ ಚಿತ್ರರಂಗದ ಹಲವರು ಅವರ ಹಿಂದೆ ನಿಂತಿದ್ದಾರೆ. ಮಂಡ್ಯ ಜನರ ಒತ್ತಾಯಕ್ಕೆ ಮಣಿದಿರುವ ಅವರು ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದಾರೆ. ಫೆ. 11ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಸಚ್ಚಿದಾನಂದ ಪ್ರತಿಕ್ರಿಯಿಸಿದರು.

ಅಂಬರೀಷ್‌ ಹಾಗೂ ರಮ್ಯಾ ಅವರಿಂದಾಗಿ ಜಿಲ್ಲೆಯ ರಾಜಕಾರಣ ಸದಾ ಚಿತ್ರ ತಾರೆಯರ ಆಕರ್ಷಣೆಯಿಂದ ಕಂಗೊಳಿಸುತಿತ್ತು. ಕಳೆದ ಲೋಕಸಭಾ ಚುನಾವಣೆ ಸೋಲಿನ ನಂತರ ರಮ್ಯಾ ಕ್ಷೇತ್ರ ತ್ಯಜಿಸಿದರು.  ವಿಧಾನಸಭಾ ಚುನಾವಣೆ ವೇಳೆ ಅಂಬರೀಷ್‌ ರಾಜಕಾರಣದಿಂದ ಹಿಂದೆ ಸರಿದರು. ಹೀಗಾಗಿ ಸಕ್ಕರೆ ನಾಡಿನ ರಾಜಕಾರಣ ತಾರಾ ವರ್ಚಸ್ಸು ಕಳೆದುಕೊಂಡಿತ್ತು. ಈಗ ಮತ್ತೆ ಸುಮಲತಾ ಹಾಗೂ ದರ್ಶನ್‌ ಮೂಲಕ ತಾರೆಗಳ ಆಕರ್ಷಣೆ ಪಡೆಯುತ್ತಿದ್ದು, ಜನರಲ್ಲಿ ಕುತೂಹಲ ಮನೆ ಮಾಡಿದೆ.

ಜೆಡಿಎಸ್‌ ಕ್ಷೇತ್ರ ಬಿಟ್ಟುಕೊಡಲಿದೆಯೇ?: ಸುಮಲತಾ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಲಭದ ಹಾದಿಯಲ್ಲ. ಕ್ಷೇತ್ರವು ದಳಪತಿಗಳ ಭದ್ರಕೋಟೆಯಾಗಿದ್ದು, ಮುಖ್ಯಮಂತ್ರಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ತುದಿಗಾಲ ಮೇಲೆ ನಿಂತಿದೆ. ನಿಖಿಲ್‌ ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಪೂರ್ವ ತಯಾರಿ ಎಂಬಂತೆ ನಿಖಿಲ್‌ ಅಭಿನಯದ ‘ಸೀತಾರಾಮ ಕಲ್ಯಾಣ’ ಚಲನಚಿತ್ರ ವೀಕ್ಷಣೆಗೆ ಜಿಲ್ಲೆಯ ಜೆಡಿಎಸ್‌ ಶಾಸಕರು ಜನರಿಗೆ ಉಚಿತವಾಗಿ ಟಿಕೆಟ್‌ ಹಂಚುತ್ತಿದ್ದಾರೆ. ಪ್ರಾಯೋಜಿತ ಪ್ರದರ್ಶನ ಏರ್ಪಡಿಸಿದ್ದಾರೆ.

ಚಿತ್ರದಲ್ಲಿ ನಿಖಿಲ್‌, ರೈತರ ಆತ್ಮಹತ್ಯೆ ತಡೆಯುವ ದೃಶ್ಯ ಕಂಡು ಜನ ಶಿಳ್ಳೆ ಹಾಕುತ್ತಿದ್ದಾರೆ. ಅವರು ಪಂಚೆಯುಟ್ಟು ಬರುವ ದೃಶ್ಯಗಳಲ್ಲಿ, ಮುಂದಿನ ಸಂಸದ ನಿಖಿಲ್‌ ಎಂದು ಜೈಕಾರ ಹಾಕುತ್ತಿದ್ದಾರೆ. ನಿಖಿಲ್‌ ಅವರನ್ನು ಜಿಲ್ಲೆಯ ಮನೆ, ಮನಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ.

ಹೀಗಿರುವಾಗ ಕಾಂಗ್ರೆಸ್‌ ಪಕ್ಷಕ್ಕೆ ಜೆಡಿಎಸ್‌ ಲೋಕಸಭಾ ಸ್ಥಾನ ಬಿಟ್ಟುಕೊಡುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸೋತು ಸುಣ್ಣವಾಗಿರುವ ಕಾಂಗ್ರೆಸ್‌ ಮುಖಂಡರು ಜಿಲ್ಲೆಯಲ್ಲಿ ಮತ್ತೆ ಎದ್ದು ನಿಲ್ಲಲು ಸುಮಲತಾ ಎಂಬ ಅಸ್ತ್ರ ಹೂಡಿದ್ದಾರೆ. ಈ ಅಸ್ತ್ರ ಜೆಡಿಎಸ್‌ ಮುಖಂಡರಿಗೆ ನುಂಗಲಾಗದ ತುತ್ತಾಗಿದೆ.

ಕಾಂಗ್ರೆಸ್‌ಗೆ ಮಂಡ್ಯ ಬಿಟ್ಟುಕೊಟ್ಟರೆ ಹಾಸನದಲ್ಲಿ ಜೆಡಿಎಸ್‌ ಪರ ಕೆಲಸ ಮಾಡುವುದಾಗಿ ಕಾಂಗ್ರೆಸ್‌ ಮುಖಂಡ ಎ.ಮಂಜು ತಿಳಿಸಿರುವುದು ದಳಪತಿಗಳ ಕಣ್ಣು ಕೆಂಪಾಗಿಸಿವೆ.

ಜೆಡಿಎಸ್‌ ಪಾಲಿಗೆ ಮಂಡ್ಯ ಎಂದರೆ ಖಾತ್ರಿ ಗೆಲುವಿನ ಕ್ಷೇತ್ರ. ಇದನ್ನು ಉಳಿಸಿಕೊಳ್ಳಲು ಜೆಡಿಎಸ್‌ ಮುಖಂಡರು ಪ್ರತ್ಯಸ್ತ್ರ ಹೂಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಮೈತ್ರಿ ಹಗ್ಗಜಗ್ಗಾಟದಲ್ಲಿ ಸುಮಲತಾ ಸ್ಪರ್ಧೆ, ದರ್ಶನ್‌ ಪ್ರಚಾರ ವಿಷಯಗಳು ಜನರ ಕಣ್ಣರಳಿಸಿವೆ.

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 2

  Sad
 • 1

  Frustrated
 • 4

  Angry

Comments:

0 comments

Write the first review for this !