ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬೆಂಬಲಿಸಿದವರಿಗೆ ಕಿರುಕುಳ: ಸುಮಲತಾ

Last Updated 21 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಮಂಡ್ಯ: ‘ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ನಿಂತವರಿಗೆ ಅಧಿಕಾರವುಳ್ಳವರು ಕಿರುಕುಳ ನೀಡಲು ಮುಂದಾಗಿದ್ದಾರೆ. ಇದನ್ನು ತಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡುತ್ತೇನೆ’ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು.

‘ಎಲ್ಲಾ ಪಕ್ಷಗಳ ಕಾರ್ಯಕರ್ತರು ಸ್ವಾಭಿಮಾನದ ದೃಷ್ಟಿಯಿಂದ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದ್ದಾರೆ. ಅಂಥವರಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ನನ್ನ ಪರವಾಗಿ ಪ್ರಚಾರ ಮಾಡಲು ಬಂದ ಚಿತ್ರ ನಟರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಯಾವ ರೀತಿ ಪಶ್ಚಾತ್ತಾಪ ಅನುಭವಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಇಂತಹ ಬೆದರಿಕೆಗಳನ್ನು ಖಂಡಿಸುತ್ತೇನೆ' ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚುನಾವಣೆ ಯಲ್ಲಿ ಕ್ಷೇತ್ರದಾದ್ಯಂತ ಉತ್ತಮ ಬೆಂಬಲ ವ್ಯಕ್ತ ವಾಗಿದೆ. ಬೆಂಬಲ ನೀಡಿದ ಬಿಜೆಪಿ, ರೈತ ಸಂಘ, ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು, ಸಂಘಟನೆಗಳು ಹಾಗೂ ಎಲ್ಲಾ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಈ ಬಾರಿ ಶೇ 80ಕ್ಕಿಂತ ಹೆಚ್ಚು ಮತದಾನ ನಡೆದಿದ್ದು, ಮಹಿಳೆಯರ ಮತದಾನದ ಪ್ರಮಾಣ ಕಳೆದ ಬಾರಿಗಿಂತ ಅಧಿಕವಾಗಿದೆ. ಮಹಿಳೆಯರ ಬಹುತೇಕ ಮತಗಳು ನನ್ನ ಪರವಾಗಿದ್ದು, ಗೆಲ್ಲುವ ವಿಶ್ವಾಸವಿದೆ. ಕೋಡಿಮಠದ ಸ್ವಾಮಿಗಳ ಭವಿಷ್ಯವನ್ನು ಆಶೀರ್ವಾದ ಎಂದು ತಿಳಿಯುತ್ತೇನೆ. ಆದರೆ, ಚುನಾವಣೆ ಫಲಿತಾಂಶ ಹೊರಬರುವವರೆಗೂ ಕಾದು ನೋಡುತ್ತೇನೆ’ ಎಂದರು.

‘ಚುನಾವಣೆ ಆರಂಭದಿಂದ ಇಲ್ಲಿಯವರೆಗೂ ನನ್ನ ಮೇಲೆ ಆರೋಪಗಳು ಬರುತ್ತಿವೆ. ಈಗ ಸಿಂಗಪುರಕ್ಕೆ ಹೋಗಿದ್ದಾರೆ ಎಂಬ ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ. ನಾನು ಸಿಂಗಪುರಕ್ಕೆ ಹೋಗಿಲ್ಲ. ಮಂಡ್ಯವೇ ನನಗೆ ಸಿಂಗಪುರವಾಗಿದೆ. ಚುನಾವಣೆಯಲ್ಲಿ ಗೆದ್ದರೂ, ಸೋತರೂ ನಿರಂತರ ಜನರ ಜೊತೆಯಲ್ಲಿರುತ್ತೇನೆ. ಗೆದ್ದರೆ ಯಾವುದೇ ಪಕ್ಷಕ್ಕೆ ಹೋಗುವ ಅವಶ್ಯವಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಜನರ ತೀರ್ಮಾನಕ್ಕೆ ಬದ್ಧಳಾಗಿರುತ್ತೇನೆ’ ಎಂದು ನುಡಿದರು.

‘ಮೇ 29ರಂದು ಅಂಬರೀಷ್ ಅವರ ಜನ್ಮ ದಿನವನ್ನು ಮಂಡ್ಯ ನಗರದಲ್ಲಿಯೇ ಆಚರಣೆ ಮಾಡಲಾಗುವುದು. ಅಂಬರೀಷ್ ಹಾಗೂ ಜಿಲ್ಲೆಯ ಜನರ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT