ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಶಿಬಿರಗಳ ಕಾಲ

Last Updated 4 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಇನ್ನೇನು ಬೇಸಿಗೆ ಶುರುವಾಗಿದೆ. ಶಾಲಾ ಪರೀಕ್ಷೆಗಳೂ ಈ ತಿಂಗಳಾಂತ್ಯದೊಳಗೆ ಮುಗಿಯಲಿವೆ. ಬೇಸಿಗೆ ರಜೆಗೆ ದಿನಗಣನೆ ಆರಂಭವಾಗಿದೆ. ರಜೆ ಕಳೆಯಲು ಕೆಲ ಮಕ್ಕಳು ಅಜ್ಜಿ, ಅಜ್ಜ, ಸಂಬಂಧಿಕರ ಮನೆಗಳಿಗೆ ಹೋಗಲು ಯೋಜನೆ ರೂಪಿಸಿದ್ದರೆ, ನಗರದಲ್ಲಿಯೇ ಇರುವ ಮಕ್ಕಳಿಗೆ ರಜೆ ಕಳೆಯಲೆಂದೇ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತಿವೆ.

ಓದಿಗೆ ಬಿಡುವು ನೀಡಿ, ಆಟೋಟಗಳತ್ತ ಮಕ್ಕಳನ್ನು ಕೇಂದ್ರೀಕರಿಸಲು ಬಯಸುವ ಪೋಷಕರು ನಗರದಲ್ಲಿ ಹೆಚ್ಚಾಗುತ್ತಿದ್ದಾರೆ. ಬೇಸಿಗೆ ಶಿಬಿರಗಳು ಆಟೋಟಗಳಿಗಷ್ಟೇ ಸೀಮಿತವಾಗದೆ ನಾಟಕ, ನೃತ್ಯ, ಸಂಗೀತ, ಕರಕುಶಲ ಕಲೆ, ಯೋಗ ಕಲಿಕೆಗೂ ಒತ್ತು ನೀಡುತ್ತಿವೆ.

ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಹೊರಾಂಗಣ ಕ್ರೀಡೆಗಳಿಗೆ ಸಂಬಂಧಿಸಿದಂತೆ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದರೆ, ಒಳಾಂಗಣ ಕ್ರೀಡೆಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿವಿಧ ಬ್ಯಾಚ್‌ಗಳಲ್ಲಿ ಶಿಬಿರಗಳು ಆಯೋಜನೆಗೊಳ್ಳುತ್ತಿವೆ. ಸಾಂಸ್ಕೃತಿಕ ಮತ್ತು ಕುಶಲ ಕಲೆಗಳ ಶಿಬಿರಗಳೂ ಒಳಾಂಗಣದಲ್ಲಿಯೇ ನಡೆಯುವುದರಿಂದ ಅವುಗಳಿಗೆ ನಿರ್ದಿಷ್ಟ ಸಮಯದ ಮಿತಿಯಿಲ್ಲ.

ಎರಡರಿಂದ ಮೂರು ತಿಂಗಳು ನಗರದ ವಿವಿಧೆಡೆ ಬೇಸಿಗೆ ಶಿಬಿರಗಳದ್ದೇ ಸುಗ್ಗಿ. ಪೋಷಕರು ತಮ್ಮ ಮಕ್ಕಳನ್ನು ಒಂದಲ್ಲ ಒಂದು ಶಿಬಿರಕ್ಕೆ ಬಿಟ್ಟು ಬರುವ ಅಥವಾ ಶಿಬಿರದಿಂದ ಕರೆದುಕೊಂಡು ಬರುವ ಚಿತ್ರಣ ಸಾಮಾನ್ಯವಾಗಿರುತ್ತದೆ.

ಕ್ರಿಕೆಟ್‌, ಫುಟ್‌ಬಾಲ್‌ಗೆ ಒತ್ತು:ಕ್ರೀಡೆಗಳಿಗಾಗಿ ಆಯೋಜನೆಗೊಳ್ಳುವ ಬೇಸಿಗೆ ಶಿಬಿರಗಳಲ್ಲಿ ಈಗಲೂ ಕ್ರಿಕೆಟ್‌ಗೆ ಮೊದಲ ಸ್ಥಾನವಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಸಣ್ಣ ಮೈದಾನ ಇದ್ದರೂ ಅಲ್ಲಿ ಕ್ರಿಕೆಟ್‌ ಪಿಚ್ ಸಿದ್ಧವಾಗಿ, ಶಿಬಿರಕ್ಕೆ ಚಾಲನೆ ನೀಡಲು ಕ್ಷಣಗಣನೆ ಆರಂಭವಾಗಿದೆ.

ಕೆಲ ವರ್ಷಗಳಿಂದ ನಗರದ ಜನರಲ್ಲಿ ಫುಟ್‌ಬಾಲ್‌ ಕ್ರೇಜ್‌ಕೂಡ ಹೆಚ್ಚಾಗಿದೆ. ಹಲವು ಶಾಲಾ, ಕಾಲೇಜುಗಳು ಫುಟ್‌ಬಾಲ್‌ಗೆ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಮಕ್ಕಳಲ್ಲಿ ಫುಟ್‌ಬಾಲ್‌ ಬಗ್ಗೆ ಆಸಕ್ತಿ ಬೆಳೆದಿದೆ. ಹಾಗಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಫುಟ್‌ಬಾಲ್‌ ಕಲಿಸುವ ಸಂಬಂಧ ಬೇಸಿಗೆ ಶಿಬಿರಗಳಿಗೂ ಚಾಲನೆ ದೊರೆಯಲಿವೆ.

ಬಿಬಿಎಂಪಿ ಮೈದಾನಗಳು, ಖಾಸಗಿ ಶಾಲಾ, ಕಾಲೇಜುಗಳ ಮೈದಾನಗಳಲ್ಲಿ ಫುಟ್‌ಬಾಲ್‌ ಶಿಬಿರಗಳು ಆಯೋಜನೆಗೊಳ್ಳುತ್ತಿವೆ. ಫುಟ್‌ಬಾಲ್‌ ಕ್ಲಬ್‌ಗಳು, ಕಲಿಕಾ ಕೇಂದ್ರಗಳು ಬೇಸಿಗೆ ಶಿಬಿರಗಳನ್ನು ಆಯೋಜಿಸಿ ಮಕ್ಕಳನ್ನು ಸೆಳೆಯುತ್ತಿವೆ. ಅಂತೆಯೇ ಒಳಾಂಗಣ ಕ್ರೀಡೆಗಳಲ್ಲಿ ಷಟಲ್‌ ಬ್ಯಾಡ್ಮಿಂಟನ್‌, ಈಜು, ಟೇಕ್ವಾಂಡೊಗೆ ಒತ್ತು ನೀಡಿವೆ.

ಎಸ್‌ಎಐ, ಬಿಪಿಎಸ್‌ಎಯಲ್ಲಿ ಶಿಬಿರ:ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಪ್ರತಿ ವರ್ಷದಂತೆ ಈ ವರ್ಷವೂ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದು ಅಥ್ಲೆಟಿಕ್‌, ಬ್ಯಾಡ್ಮಿಂಟನ್‌, ಟೇಕ್ವಾಂಡೊ, ಈಜು, ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌ಗೆ ಕ್ರೀಡೆಗಳಿಗೆ ತರಬೇತಿ ನೀಡಲಿದೆ. ನಗರದ ಬಹುತೇಕ ಈಜುಕೊಳಗಳು ಮತ್ತು ಕ್ಲಬ್‌ಗಳು ಈಜಿಗೆ ಸಂಬಂಧಿಸಿದಂತೆ ಬೇಸಿಗೆ ಶಿಬಿರಗಳನ್ನು ಆಯೋಜಿಸಿವೆ.

ಬೆಂಗಳೂರು ಪ್ರೀಮಿಯರ್‌ ಸಾಕರ್‌ ಅಕಾಡೆಮಿ (ಬಿಪಿಎಸ್‌ಎ) ಇಂದಿರಾನಗರ, ಟಿ.ಸಿ.ಪಾಳ್ಯ, ಯಶವಂತಪುರದಲ್ಲಿ ಫುಟ್‌ಬಾಲ್‌ ಕಲಿಕೆಗೆ ಇದೇ 4ರಿಂದ (ಸೋಮವಾರ) ಬೇಸಿಗೆ ಶಿಬಿರ ಆರಂಭವಾಗಿದೆ. 6ರಿಂದ 16ರ ವಯೋಮಾನದವರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಆಸಕ್ತರು ಮೊಬೈಲ್‌ ಸಂಖ್ಯೆಗೆ 9916993587, 8147993587 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.

ವಿಜಯನಗರ ಬಿಂಬದಲ್ಲಿ ರಂಗ ಶಿಬಿರ:ವಿಜಯನಗರ ಬಿಂಬ ಈ ಬಾರಿಯೂ ನಾಟಕ, ಕಲೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು, ಅನಾವರಣಗೊಳಿಸಲು ಬೇಸಿಗೆ ಶಿಬಿರ ಆಯೋಜಿಸುತ್ತಿದೆ. ಏಪ್ರಿಲ್‌ 3ರಿಂದ 13ರವರೆಗೆ ‘ಚಿಣ್ಣರ ಚಿತ್ತಾರ’ (3ರಿಂದ 7 ವರ್ಷ) ಹಾಗೂ ಏ 14ರಿಂದ 29ರವರೆಗೆ ‘ಚಿಣ್ಣರ ಚಾವಡಿ’ (8ರಿಂದ 18) ಶಿಬಿರ ಆಯೋಜನೆಗೊಂಡಿದೆ. ಮಾರ್ಚ್‌ ತಿಂಗಳ ರಜೆಯನ್ನು ಮಕ್ಕಳು ಕುಟುಂಬದವರ ಜತೆ ಕಳೆದು ಏಪ್ರಿಲ್‌ನಲ್ಲಿ ಶಿಬಿರಕ್ಕೆ ಬರಲಿ ಎಂಬ ಉದ್ದೇಶವನ್ನು ಬಿಂಬ ಹೊಂದಿದೆ ಎನ್ನುತ್ತಾರೆ ವಿಜಯನಗರ ಬಿಂಬದ ಅಧ್ಯಕ್ಷ ಶೋಭಾ ವೆಂಕಟೇಶ್‌.

ಮಕ್ಕಳಿಗೆ ರಂಗ ಕಾರ್ಯಾಗಾರ, ನೃತ್ಯ, ಕಲೆ, ಭಾಷಣ ಕಲೆ ಕುರಿತು ತರಬೇತಿ ನೀಡುತ್ತೇವೆ. ಮೀಡಿಯಾ ಹಬ್ಬವನ್ನೂ ಆಯೋಜಿಸಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಹಾಗೂ ಅನಿಮೇಷನ್‌ ಕೌಶಲದ ಕುರಿತು ತಿಳಿಸಿಕೊಡುತ್ತೇವೆ. ತಜ್ಞರೊಂದಿಗೆ ಸಂವಾದ, ಪ್ರಶ್ನೋತ್ತರ ಸೆಷನ್‌ಗಳನ್ನು ಏರ್ಪಡಿಸುತ್ತೇವೆ. ಮಕ್ಕಳಿಂದ ನಾಟಕ ಮಾಡಿಸುತ್ತೇವೆ ಎನ್ನುತ್ತಾರೆ ಅವರು. ಆಸಕ್ತರು ದೂರವಾಣಿ ಸಂಖ್ಯೆ 080– 23300967 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT