ಈ ಗ್ರಾಮದಲ್ಲಿ ಚುನಾವಣೆ ದಿನ ಮಾತ್ರ ವಿದ್ಯುತ್!

7
ಸಾಗರದ ಸುಂಕದಮನೆ ಗ್ರಾಮಸ್ಥರ ಅರಣ್ಯರೋದನ

ಈ ಗ್ರಾಮದಲ್ಲಿ ಚುನಾವಣೆ ದಿನ ಮಾತ್ರ ವಿದ್ಯುತ್!

Published:
Updated:

ಸಾಗರ: ‘ಕಳೆದ ವಿಧಾನಸಭೆ ಚುನಾವಣೆ ದಿನ ನಮ್ಮ ಮನೆಗಳಲ್ಲಿ ವಿದ್ಯುತ್ ಇತ್ತು. ನಂತರ ನಾವು ವಿದ್ಯುತ್ ಬೆಳಕು ಕಂಡಿದ್ದು ಇವತ್ತೇ’ ಎಂದು ಹೇಳುವಾಗ ಹೆರಕಣಿ ಗ್ರಾಮದ ಸರಸ್ವತಮ್ಮ ಅವರ ಕಣ್ಣುಗಳಲ್ಲಿ ಆಕ್ರೋಶ ಮಡುಗಟ್ಟಿತ್ತು.

‘ಇದೊಂದು ಸಲ ಓಟ್ ಹಾಕಿದ್ದೇವೆ. ಮುಂದಿನ ಚುನಾವಣೆಯೊಳಗೆ ಸರಿಯಾಗಿ ವಿದ್ಯುತ್, ನಮ್ಮೂರಿಗೆ ರಸ್ತೆ ಮಾಡಿಕೊಡದಿದ್ದರೆ ಓಟು ಕೇಳಲು ಬರುವವರಿಗೆ ಜಾಡಿಸುತ್ತೇವೆ’ ಎಂದು ಸರಸ್ವತಮ್ಮ ತಮ್ಮೂರಿನ ಗ್ರಾಮದ ಚಿತ್ರಣವನ್ನು ಬಿಚ್ಚಿಟ್ಟರು.

ತಾಲ್ಲೂಕಿನ ಸುಂಕದಮನೆ ಗ್ರಾಮದ ಮತಗಟ್ಟೆಗೆ ಶನಿವಾರ ಸುದ್ದಿಗಾರರು ತೆರಳಿದಾಗ ಕಂಡಿದ್ದು ಅಲ್ಲಿನ ಗ್ರಾಮಸ್ಥರ ಅರಣ್ಯರೋದನ. ವಿಪರ್ಯಾಸವೆಂದರೆ ಕರ್ನಾಟಕಕ್ಕೆ ಬಹುಪಾಲು ವಿದ್ಯುತ್ ಸರಬರಾಜು ಮಾಡುವ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇರುವುದು ಈ ಗ್ರಾಮದ ಮಡಿಲಲ್ಲೇ. ‘ದೀಪದ ಕೆಳಗೇ ಕತ್ತಲು’ ಎನ್ನುವ ಮಾತು ಇಲ್ಲಿನ ಗ್ರಾಮಸ್ಥರ ಪಾಲಿಗೆ ಅಕ್ಷರಶಃ ನಿಜವಾಗಿದೆ.

ತಲಕಳಲೆ ಅಣೆಕಟ್ಟಿನ ಮಗ್ಗುಲಲ್ಲೇ ಇರುವ ಕಲ್ಲೊಟಿ, ಸುಂಕದಮನೆ, ತಾಸೊಳ್ಳಿ, ಹೆರಕಣಿ, ವಟ್ಟಕ್ಕಿ, ಅತ್ತಿಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಗೊಂಡರ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಕಾರಣಕ್ಕೆ ಇವರು ಮತ ಚಲಾಯಿಸುವ ಸುಂಕದಮನೆ ಮತಗಟ್ಟೆಯನ್ನು ‘ಬುಡಕಟ್ಟು ಮತಗಟ್ಟೆ’ (ಎತ್ನಿಕ್ ಬೂತ್) ಎಂದು ಗುರುತಿಸಲಾಗಿದೆ. ನೀಲಿ ಮತಗಟ್ಟೆಯೆಂದೂ ಇದನ್ನು ಕರೆಯಲಾಗುತ್ತದೆ.

ಇಲ್ಲಿನ ಮತಗಟ್ಟೆಗೇನೋ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಆದರೆ ತಮ್ಮ ಗ್ರಾಮಗಳಿಂದ ತೀರಾ ಹಾಳಾಗಿರುವ ಕಚ್ಚಾ ರಸ್ತೆಯನ್ನು ಕ್ರಮಿಸಿ ಮತಗಟ್ಟೆಗೆ ಬರಲು ಗ್ರಾಮಸ್ಥರು ಹರಸಾಹಸ ಮಾಡಬೇಕಾಗಿದೆ. ಹೀಗಾಗಿ 185 ಮತದಾರರಿರುವ ಈ ಮತಗಟ್ಟೆಯಲ್ಲಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ 74 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು.

ಹಿನ್ನೀರಿನಿಂದ ಆವರಿಸಿಕೊಂಡಿರುವ ಇಲ್ಲಿನ ಮತಗಟ್ಟೆಗೆ ಅಧಿಕಾರಿಗಳು ಯಾಂತ್ರೀಕೃತ ಬೋಟ್‌ನಲ್ಲಿ ಬರುತ್ತಾರೆ. ಕೆಲವು ಮತದಾರರಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ.

ರಸ್ತೆ, ವಿದ್ಯುತ್, ಕುಡಿಯುವ ನೀರಿನಂತಹ ಮೂಲಸೌಕರ್ಯಗಳ ಬರವನ್ನು ಎದುರಿಸುತ್ತಿರುವ ಇಲ್ಲಿನ ಗ್ರಾಮಸ್ಥರು ಎಲ್ಲಾ ರಾಜಕೀಯ ಪಕ್ಷಗಳಿಗೆ ಹಿಡಿಶಾಪ ಹಾಕುತ್ತಲೇ ಮತ ಚಲಾಯಿಸಲು ಬರುತ್ತಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !