ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ‘ಅಭಿಯಾನ’ಕ್ಕೆ ಸ್ಯಾಂಡಲ್‌ವುಡ್‌ ಬೆಂಬಲ

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಟ್ವೀಟ್‌ನಲ್ಲೇ ಆಗ್ರಹ, ಅಭೂತ ಪೂರ್ವ ಸ್ಪಂದನೆ
Last Updated 13 ಜೂನ್ 2019, 15:58 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಗೆ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು...’ ಎನ್ನುವ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ‘ಟ್ವಿಟರ್‌ ಅಭಿಯಾನ’ ಪ್ರಾರಂಭವಾದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಸಹ ಸಾಥ್‌ ನೀಡಿದೆ. ಹಲವು ನಟಿ– ನಟಿಯರು ಕೊಡಗಿನ ಕೂಗಿಗೆ ಧ್ವನಿಯಾಗಿದ್ದಾರೆ.

ಕಳೆದೆರಡು ದಿನಗಳಿಂದ ಯುವ ಸಮೂಹ ದೊಡ್ಡಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿಬೆಂಬಲ ಸೂಚಿಸಿದ್ದು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕ ಸರ್ಕಾರಕ್ಕೆ ತಮ್ಮ ಆಗ್ರಹ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೊರ ಜಿಲ್ಲೆಯಿಂದಲೂ ಸಾರ್ವಜನಿಕರು ಸರ್ಕಾರವನ್ನು ಎಚ್ಚರಿಸಲು ‘ಟ್ವೀಟ್’ ಮಾಡುತ್ತಿದ್ದಾರೆ.

ಬುಧವಾರ ಪ್ರಾರಂಭವಾದ ‘ವಿ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್ ಇನ್‌ ಕೊಡಗು’ ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಸಾವಿರಾರು ಜನರು ಹಕ್ಕೊತ್ತಾಯ ಮಂಡನೆ ಮಾಡುವುದಕ್ಕೆ ಫೇಸ್‌ಬುಕ್‌, ಟ್ವಿಟರ್‌ ಮತ್ತು ವ್ಯಾಟ್ಸ್‌ಆ್ಯಪ್‌ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಬೆಂಬಲ:ಈ ಅಭಿಯಾನ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದಂತೆಯೇ ಚಿತ್ರರಂಗದ ನಟ–ನಟಿಯರು ಬೆಂಬಲ ಸೂಚಿಸಿದ್ದಾರೆ.ಕೊಡಗಿನಲ್ಲೇ ‘ರವಿ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ ರವಿಚಂದ್ರನ್‌ ಜನರ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದ್ದಾರೆ.

‘ಹ್ಯಾಟ್ರಿಕ್‌ ಹೀರೋ’ ಶಿವರಾಜ್‌ ಕುಮಾರ್‌, ಕೊಡಗಿನವರೇ ಆದ ನಟ ಭುವನ್, ನಟಿಯರಾದ ದಿಶಾ ಪೂವಯ್ಯ, ಹರ್ಷಿಕಾ ಪೂಣಚ್ಚ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಗ್ರಹವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.

‘ಕೊಡಗು‌ ದೇಶ ಕಾಯುವ ಯೋಧರನ್ನು ನೀಡಿದ ನಾಡು. ನಾಡಿಗೆ ನೀರು ಕೊಟ್ಟ ಜಿಲ್ಲೆ. ಇವರ ಬೆಂಬಲಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಶಿವರಾಜ್‌ ಕುಮಾರ್‌ ಅವರು ವಿನಮ್ರವಾಗಿ ಮನವಿ ಮಾಡಿದ್ದಾರೆ.

ನಟಿ ಹರ್ಷಿಕಾ, ‘ಟ್ವೀಟ್ ಅಭಿಯಾನಕ್ಕೆ ಶೇ 100 ಬೆಂಬಲ ಕೊಡುತ್ತಿದ್ದೇನೆ. ನಮ್ಮ ತಂದೆಗೆ ಅನಾರೋಗ್ಯವಾದಾಗ ಕೊಡಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಬೆಂಗಳೂರಿನ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ರೀತಿಯ ತೊಂದರೆ ಇನ್ಮುಂದೆ ಯಾರಿಗೂ ಆಗಬಾರದು. ಟ್ವಿಟರ್‌ ಅಭಿಯಾನಕ್ಕೆ ಪ್ರತಿಯೊಬ್ಬರು ಕೈಜೋಡಿಸಿ ರಾಜ್ಯ ಸರ್ಕಾರವನ್ನು ಎಚ್ಚರಿಸಿ’ ಎಂದು ಕೋರಿದ್ದಾರೆ.

ಮಡಿಕೇರಿಯಲ್ಲಿ ಎರಡು ಆಸ್ಪತ್ರೆಗಳಿವೆ. ಆದರೆ ಯಾವುದೇ ಸೌಲಭ್ಯಗಳಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಂದರೆ ಎಷ್ಟೋ ಜೀವಗಳು ಉಳಿಯುತ್ತವೆ ಎಂದು ವಕೀಲ ಮನೋಜ್ ಬೋಪಯ್ಯ ಹೇಳಿದ್ದಾರೆ.

ನೇರವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಟ್ಯಾಗ್ ಮಾಡುವ ಮೂಲಕ ಒತ್ತಡ ಹೇರುವ ಪ್ರಯತ್ನವನ್ನು ಯುವ ಸಮೂಹ ಮಾಡುತ್ತಿದೆ. ಕಾವೇರಿ ನಾಡಿಗೆ ಸುಸಜ್ಜಿತ ಆಸ್ಪತ್ರೆ ಬೇಕು; ಜಿಲ್ಲೆಯಲ್ಲಿ ಬರೀ ಐಷಾರಾಮಿರೆಸಾರ್ಟ್, ಹೋಮ್‌ ಸ್ಟೇಗಳಿವೆ. ಆದರೆ, ಚಿಕಿತ್ಸೆಗೆ ಆಸ್ಪತ್ರೆಯಿಲ್ಲ ಎಂಬ ನೂರಾರು ಸಂಖ್ಯೆಯಲ್ಲಿ ಟ್ವೀಟ್‌ ಮಾಡಲಾಗಿದೆ.

ಹೊರ ಜಿಲ್ಲೆಗಳಿಗೆ ಹೋಗಬೇಕು:ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಎನ್ನುವುದೇ ಇಲ್ಲ; ಕೆಲವು ಖಾಸಗಿ ಆಸ್ಪತ್ರೆಗಳು ಇದ್ದರೂ ಪ್ರಯೋಜನವಿಲ್ಲ. ಅಪಘಾತ, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ನೋವು ಕಾಡುತ್ತಿದೆ.

**

ಸೂಪರ್ ಸ್ಪೆಷಾಲಿಟಿ ಹಾಸ್ಟಿಟಲ್‌ ಇಲ್ಲ ಎಂಬ ಕೊರಗು ಸಾಕಷ್ಟು ದಿನಗಳಿಂದ ಕೊಡಗಿನಲ್ಲಿದೆ. ಆಸ್ಪತ್ರೆ ಸ್ಥಾಪನೆಗೆ ಸ್ಯಾಂಡಲ್‌ವುಡ್‌ ಪರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ.
– ಶಿವರಾಜ್‌ ಕುಮಾರ್‌, ಚಿತ್ರ ನಟ

**

ಕೊಡಗಿನ ಜನರಿಗೆ ಬೇಕಾದ ಮೂಲಸೌಲಭ್ಯವಿಲ್ಲ. ಶಿಕ್ಷಣ, ಉದ್ಯೋಗಕ್ಕೆ ಬೇರೆ ಜಿಲ್ಲೆಗೆ ಹೋಗಬೇಕು. ಕನಿಷ್ಠ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾದರೂ ಸ್ಥಾಪಿಸಿ
– ದಿಶಾ ಪೂವಯ್ಯ, ನಟಿ

**

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬರಲೇಬೇಕು. ಇದರಿಂದ ಕೊಡಗಿನ ಜನರಿಗೆ ಹಾಗೂ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಹೆಚ್ಚಿನ ನೆರವು ಸಿಗಲಿದೆ
– ಭುವನ್, ಚಿತ್ರ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT