ಪ್ರತಿ ಕೆ.ಜಿ. ಮಾವಿಗೆ ₹2.50 ಬೆಂಬಲ ಬೆಲೆ

7

ಪ್ರತಿ ಕೆ.ಜಿ. ಮಾವಿಗೆ ₹2.50 ಬೆಂಬಲ ಬೆಲೆ

Published:
Updated:

ಬೆಂಗಳೂರು: ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಪ್ರತಿ ಕೆ.ಜಿ. ಮಾವಿಗೆ ₹2.50ರಂತೆ (ಟನ್‌ಗೆ ₹2,500) ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ.

ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಉಭಯ ಸದನಗಳಲ್ಲಿ ಸೋಮವಾರ ಈ ವಿಷಯ ಪ್ರಕಟಿಸಿದರು.

‘ಬೆಂಬಲ ಬೆಲೆಯನ್ನು ಎಪಿಎಂಸಿಗಳ ಮೂಲಕವೇ ಪಾವತಿಸುವ ವ್ಯವಸ್ಥೆ ಮಾಡಿ. ಇಲ್ಲದಿದ್ದರೆ ಹಣ ಅಪವ್ಯಯವಾಗುವ ಅಪಾಯವಿದೆ’ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್‌. ರಮೇಶಕುಮಾರ್‌ ಸಚಿವರಿಗೆ ಸೂಚಿಸಿದರು.

ಸರ್ಕಾರ ಕೈಗೊಂಡ ತೀರ್ಮಾನದ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೂ ವಿಧಾನಸಭೆಯ ಗಮನಕ್ಕೆ ತಂದರು. ‘ರಾಜ್ಯದಲ್ಲಿ ಈ ಸಲ ಮಾವಿನ ಫಸಲು ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಆಂಧ್ರ ಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ಹೀಗಾಗಿ ರಾಜ್ಯದ ಮಾವು ತರಿಸಿಕೊಳ್ಳದಂತೆ ಆಂಧ್ರದಲ್ಲಿ ನಿಷೇಧ ವಿಧಿಸಲಾಗಿದೆ. ಇದರಿಂದ ಮಾವು ಬೆಳೆಗಾರರ ಸಂಕಷ್ಟ ಹೆಚ್ಚಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮಾವು ಸಂಸ್ಕರಣೆ ಘಟಕಗಳು ಇರುವುದು ಕೇವಲ ಎರಡು. ಅದೇ ಆಂಧ್ರದಲ್ಲಿ 59 ಘಟಕಗಳಿವೆ. ಹೀಗಾಗಿ ರಾಜ್ಯದಲ್ಲಿ ಬೆಳೆದ ಮಾವನ್ನು ಇಲ್ಲಿಯೇ ಸಂಸ್ಕರಣೆ ಮಾಡುವುದು ಕಷ್ಟವಾಗಿದೆ. ಮಹಾರಾಷ್ಟ್ರ ಘಟಕದಲ್ಲಿ ಸಂಸ್ಕರಣೆ ಮಾಡಿಸಲು ಸಾಧ್ಯವೋ ಎಂದೂ ವಿಚಾರಿಸಿದೆವು. ಆದರೆ, ಅಲ್ಲಿ ಈಗಾಗಲೇ 50 ಸಾವಿರ ಮೆಟ್ರಿಕ್‌ ಟನ್‌ ಮಾವಿನ ದಾಸ್ತಾನಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಆಂಧ್ರದ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದೆ. ಆದರೆ, ಅವರು ಸಿಂಗಾಪುರಕ್ಕೆ ಹೋಗಿರುವುದರಿಂದ ಮಾತನಾಡಲು ಸಾಧ್ಯವಾಗಲಿಲ್ಲ’ ಎಂದು ವಿವರಿಸಿದರು.

‘ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಸಲ ಮಾವಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ₹17 ಕೋಟಿಯಿಂದ ₹20 ಕೋಟಿಯಷ್ಟು ಹೊರೆ ಬೀಳಲಿದೆ’ ಎಂದು ಅವರು ಹೇಳಿದರು. ‘ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ಮಾವು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !