ಧರ್ಮದಲ್ಲಿ ‘ಸುಪ್ರೀಂ’ಗಿಲ್ಲ ಅಧಿಕಾರ: ವಿಶ್ವೇಶತೀರ್ಥ ಸ್ವಾಮೀಜಿ

7
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ

ಧರ್ಮದಲ್ಲಿ ‘ಸುಪ್ರೀಂ’ಗಿಲ್ಲ ಅಧಿಕಾರ: ವಿಶ್ವೇಶತೀರ್ಥ ಸ್ವಾಮೀಜಿ

Published:
Updated:

ಉಡುಪಿ: ಧರ್ಮ ಹಾಗೂ ಸಂಪ್ರದಾಯಗಳನ್ನು ಪರಿವರ್ತನೆ ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ. ಧರ್ಮದ ನಿರ್ಣಯವನ್ನು ಸಂತರು ಹಾಗೂ ಭಕ್ತರು ಮಾತ್ರ ತೆಗೆದುಕೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಎಂಜಿಎಂ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಶ್ರೀಗಳು, ‘ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಇಲ್ಲ’ ಎಂದರು.

‘ಸಾಮಾಜಿಕ ಪರಿವರ್ತನೆಗೆ ಯಾರ ವಿರೋಧವಿಲ್ಲ. ಆದರೆ, ಶಾಸ್ತ್ರ, ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಮುಂದೆ, ರಾಮಮಂದಿರ ವಿಚಾರದಲ್ಲಿ ವ್ಯತಿರಿಕ್ತ ತೀರ್ಪು ಹೊರಬಿದ್ದರೆ ಪ್ರತಿಭಟನೆ ಮಾಡಲೇಬೇಕಾಗುತ್ತದೆ’ ಎಂದು ಪೇಜಾವರ ಶ್ರೀಗಳು ಎಚ್ಚರಿಕೆ ನೀಡಿದರು.

ಸಮಾಜಕ್ಕೆ ಅನ್ಯಾಯವಾಗುವಂತಿದ್ದರೆ ಮಾತ್ರ ಧರ್ಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಈ ವಿಚಾರದಲ್ಲೂ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ; ಭಕ್ತರೇ ತೆಗೆದುಕೊಳ್ಳಬೇಕು ಎಂದರು.

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್‌ ಪುನರ್‌ ವಿಮರ್ಶಿಸಬೇಕು. ಮಹಿಳಾ ಭಕ್ತರ ಅಭಿಪ್ರಾಯವನ್ನು ಪರಾಮರ್ಶಿಸಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಕೇರಳ ಸರ್ಕಾರವು ಪ್ರಜೆಗಳ ಹಕ್ಕನ್ನು ದಮನಗೊಳಿಸಬಾರದು. ದೇವಾಲಯಗಳ ಸಂಪ್ರದಾಯ ವಿಚಾರದಲ್ಲಿ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವುದು ಖಂಡನೀಯ ಎಂದರು.

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿಲ್ಲ. 10 ವರ್ಷದೊಳಗಿನ ಮಕ್ಕಳು ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮುಕ್ತ ಪ್ರವೇಶವಿದೆ. ದೇವಸ್ಥಾನ ಪ್ರವೇಶಿಸುವ ವಿಚಾರದಲ್ಲಿ ದಲಿತರಿಗೆ ಆಗಿರುವಷ್ಟು ಅನ್ಯಾಯ ಮಹಿಳೆಯರಿಗೆ ಆಗಿಲ್ಲ. ಮಹಿಳೆಯರು ಸ್ವಲ್ಪ ಕಾಲ ಕಾಯಬೇಕು ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದರು.

ಸಂಪ್ರದಾಯ ಬದಲಾವಣೆ ಮಾಡಿದ ಯತಿಗಳ ಪೈಕಿ ನಾನು ಮೊದಲಿಗ. ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೆ. ಇಡೀ ಹಿಂದೂ ಸಮಾಜ ಈ ನಿರ್ಣಯದ ಪರವಾಗಿತ್ತು ಎಂದರು.‌

ಕೇರಳದ ಪಂದಳರಾಜ ಮನೆತನದ ಪ್ರತಿನಿಧಿ ಶಶಿಕುಮಾರ್ ವರ್ಮ ಅವರು ಅಭಿಯಾನದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 12

  Angry

Comments:

0 comments

Write the first review for this !