ಕೆ.ಸಿ. ವ್ಯಾಲಿ ಯೋಜನೆಗೆ ‘ಸುಪ್ರೀಂ’ ತಡೆ

7
ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ l ಆಂಜನೇಯ ರೆಡ್ಡಿ ಮೇಲ್ಮನವಿ ಸಲ್ಲಿಕೆ

ಕೆ.ಸಿ. ವ್ಯಾಲಿ ಯೋಜನೆಗೆ ‘ಸುಪ್ರೀಂ’ ತಡೆ

Published:
Updated:
Prajavani

ನವದೆಹಲಿ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳಿಗೆ ಶುದ್ಧೀಕರಿಸಿದ ಚರಂಡಿ ನೀರು ಹರಿಸುವ ಕೆ.ಸಿ. ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ) ಯೋಜನೆಗೆ ನೀಡಲಾಗಿದ್ದ ತಡೆಯನ್ನು ತೆರವುಗೊಳಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.

ಯೋಜನೆಗೆ ಕಳೆದ ಆಗಸ್ಟ್‌ನಲ್ಲಿ ತಾನೇ ನೀಡಿದ್ದ ತಡೆಯನ್ನು ತೆರವುಗೊಳಿಸಿ ರಾಜ್ಯ ಹೈಕೋರ್ಟ್‌ ಕಳೆದ ಸೆಪ್ಟೆಂಬರ್‌ 28ರಂದು ಮಧ್ಯಂತರ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ ಮೇಲ್ಮನವಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ನಡೆಸಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠವು, ಕರ್ನಾಟಕ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಲಮಂಡಳಿಗಳಿಗೆ ನೋಟಿಸ್ ಜಾರಿ ಮಾಡಿ, ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು.

ಶುದ್ಧೀಕರಿಸಿದ ಚರಂಡಿ ನೀರಿನಿಂದ ಕೋಲಾರ ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೆ.ಸಿ. ವ್ಯಾಲಿ ಮತ್ತು ಎಚ್‌.ಎನ್‌. ವ್ಯಾಲಿ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಆದರೆ, ಬೆಂಗಳೂರಿನಲ್ಲಿರುವ ಬೆಳ್ಳಂದೂರು ಮತ್ತಿತರ ಕೆರೆಗಳಲ್ಲಿ ಚರಂಡಿ ನೀರು ಹರಿಸುತ್ತಿರುವುದರಿಂದ ಸಾಕಷ್ಟು ಸಮಸ್ಯೆ ತಲೆದೋರಿದೆ. ಅದೇ ಮಾದರಿಯ ಸಮಸ್ಯೆ 191 ಕೆರೆಗಳಲ್ಲೂ ತಲೆದೋರಬಹುದು ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದರು.

ನಾಗವಾರ, ಹೆಣ್ಣೂರು ಮತ್ತು ಹೊರಮಾವುಗಳಲ್ಲಿನ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ)ಗಳಿಂದ ಈ ಕೆರೆಗಳಿಗೆ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರನ್ನು ಕೋರುವ ಜನರ ಹಕ್ಕನ್ನು ಕಿತ್ತುಕೊಂಡಂತಾಗಲಿದೆ. ಇದರಿಂದ ಜನರ ಆರೋಗ್ಯದ ಮೇಲೂ ತೀವ್ರ ದುಷ್ಪರಿಣಾಮ ಉಂಟಾಗಲಿದೆ ಎಂದು ಅವರು ಹೇಳಿದರು.

ಯೋಜನೆಯ ಜಾರಿಗೆ ಮುನ್ನ ರಾಜ್ಯ ಸರ್ಕಾರ ಯಾವುದೇ ರೀತಿಯ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ಅತ್ಯಂತ ಅಪಾಯಕಾರಿಯಾದ ಈ ಯೋಜನೆಯು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. ಯೋಜನೆಯ ಕುರಿತು 2015ರಲ್ಲಿ ವಿವಿಧ ಸಂಸ್ಥೆಗಳು ಸಲ್ಲಿಸಿರುವ ನಕಾರಾತ್ಮಕವಾದ ವರದಿಗಳನ್ನು ಸರ್ಕಾರ ನಿರ್ಲಕ್ಷಿಸಿದ ಎಂದೂ ಅವರು ವಿವರಿಸಿದರು.

ಈಗಾಗಲೇ ಕೋಲಾರ ಜಿಲ್ಲೆಯಲ್ಲಿನ ಅಂತರ್ಜಲದಲ್ಲಿ ಜನರ ಆರೋಗ್ಯಕ್ಕೆ ಮಾರಕವಾದ ಫ್ಲೋರೈಡ್‌ ಹಾಗೂ ಇತರ ಅಪಾಯಕಾರಿ ಅಂಶಗಳಿರುವುದು ಪತ್ತೆಯಾಗಿದೆ. ಇದೀಗ ಯೋಜನೆ ಮೂಲಕ ಕೆರೆಗಳನ್ನು ಚರಂಡಿ ನೀರಿಂದ ತುಂಬಿಸಿದಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಹೆಚ್ಚುವ ಮೂಲಕ ಮತ್ತಷ್ಟು ಸಮಸ್ಯೆ ತಲೆದೋರಲಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !