ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಮೇಷ್ಟ್ರಾಗಲು ಹೊರಟ ಸಿದ್ದರಾಮಯ್ಯ: ಸುರೇಶ್‌ಕುಮಾರ್‌ 

‘ಜನರ ಭಾವನೆ ಹೇಳಿದ್ದಕ್ಕೆ ನೋಟಿಸ್ ನೀಡಿದರು ಎಂಬ ವ್ಯಾಖ್ಯಾನ ಸರಿಯಲ್ಲ’
Last Updated 5 ಅಕ್ಟೋಬರ್ 2019, 12:13 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಷ್ಟು ದಿವಸ ವ್ಯಾಕರಣ ಮೇಷ್ಟ್ರಾಗಿದ್ದರು; ಈಗ ಇತಿಹಾಸದ ಮೇಷ್ಟ್ರು ಆಗಲು ಹೊರಟಿದ್ದಾರೆ’ ಎಂದು ಪ್ರಾಥಮಿಕ ಹಾಗ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಇಲ್ಲಿ ಶನಿವಾರ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ರಾಜಕಾರಣ ಮಾಡ್ತಿದಾರೆ’ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಜನಜೀವನ ಹಾಳು ಮಾಡಿದ್ದ ವ್ಯಕ್ತಿಗಳ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಇಂಥ ಹೋಲಿಕೆ ಸಿದ್ದರಾಮಯ್ಯ ಅವರ ರಾಜಕೀಯ ಧೋರಣೆ ತೋರಿಸುತ್ತದೆ’ ಎಂದು ತಿರುಗೇಟು ನೀಡಿದರು.

ರಾಜ್ಯದ ಬೊಕ್ಕಸದಲ್ಲಿದ್ದ ಹಣದಿಂದ ಪರಿಹಾರ ಕಾರ್ಯ ಆರಂಭಿಸಿದ್ದೇವೆ. ಕೇಂದ್ರ ಸರ್ಕಾರವೂ ₹ 1,200 ಕೋಟಿ ನೆರವು ಘೋಷಿಸಿದ್ದು, ಇನ್ನೂ ಹೆಚ್ಚಿನ ನೆರವು ಅಗತ್ಯವಿದೆ. ಆ ಹಣವನ್ನು ಕೇಂದ್ರದಿಂದ ಬಯಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ಗೆ ಯಾವ ವಿಚಾರಕ್ಕೆ ನೋಟಿಸ್ ನೀಡಲಾಗಿದೆ ಎಂಬುದನ್ನು ಮುಖಂಡರ ಬಳಿ ವಿಚಾರಿಸುತ್ತೇನೆ. ಜನರ ಭಾವನೆ ಎತ್ತಿ ಹಿಡಿದಿರುವುದಕ್ಕೆ ನೋಟಿಸ್‌ ನೀಡಲಾಗಿದೆ ಎಂಬ ವ್ಯಾಖ್ಯಾನ ಸರಿಯಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಎಸಗಿಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಮೋದಿ ಸಹಕಾರ ನನಗಿತ್ತು; ನಿಮಗೇಕಿಲ್ಲ’ ಎಂದು ಕುಮಾರಸ್ವಾಮಿ ಹೇಳಿಕೆ ಕುರಿತು ಗಮನ ಸೆಳೆದಾಗ, ‘ಕುಮಾರಸ್ವಾಮಿ ಅವರು ಯಾವ ಸಂದರ್ಭದಲ್ಲಿ ಏನೇನು ಹೇಳುತ್ತಾರೆ ಅನ್ನೋದು ಜಗತ್ತಿದೆ ತಿಳಿದಿದೆ’ ಎಂದು ವ್ಯಂಗ್ಯವಾಡಿದರು.

ಪಾಸು–ಫೇಲು ಇಲ್ಲ: ‘7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುತ್ತಿದ್ದು ಈ ವರ್ಷ ಪಾಸು – ಫೇಲ್‌ ವ್ಯವಸ್ಥೆ ಇರುವುದಿಲ್ಲ. ಈ ವರ್ಷ ಪ್ರಾಯೋಗಿಕವಾಗಿ ಪಬ್ಲಿಕ್‌ ಪರೀಕ್ಷೆ ನಡೆಸುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಇದು ಕಡ್ಡಾಯವಾಗಲಿದೆ. ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದ್ದೆ ಎಂಬ ಆತಂಕವಿದ್ದು, ಇಂಥ ಸುಧಾರಣಾ ಕ್ರಮಗಳು ಅಗತ್ಯ’ ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT