ಬುಧವಾರ, ನವೆಂಬರ್ 13, 2019
17 °C

ವಿಮಾನ ಹತ್ತಲು ಸ್ನೇಹಲ್‌ ಮಂತ್ರಿಗೆ ವಲಸೆ ಅಧಿಕಾರಿಗಳಿಂದ ತಡೆ

Published:
Updated:

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಲುಕ್ಔಟ್‌ ನೋಟಿಸ್‌ ಹೊರಡಿಸಲಾಗಿದ್ದ ಮಂತ್ರಿ ಡೆವಲಪರ್ಸ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹಾಗೂ ನಿರ್ದೇಶಕ (ಮಾರ್ಕೆಟಿಂಗ್‌ ಮತ್ತು ಎಚ್‌ಆರ್‌) ಸುಶೀಲ್‌ ಮಂತ್ರಿ ಅವರ ಪತ್ನಿ ಸ್ನೇಹಲ್‌ ಮಂತ್ರಿ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

‘ಸಿಂಗಪುರಕ್ಕೆ ತೆರಳಲು ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ, ದಾಖಲೆಗಳ ಪರಿಶೀಲನೆ ವೇಳೆ ಅವರ ಪತಿ ಸುಶೀಲ್‌ ಮಂತ್ರಿ, ಪುತ್ರ ಪ್ರತೀಕ್‌ ಮತ್ತು ಇತರ ಆರು ಮಂದಿ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಿರುವುದು ಗೊತ್ತಾಗಿದೆ. ಹೀಗಾಗಿ, ಆಕೆ ವಿಮಾನ ಹತ್ತಲು ಅವಕಾಶ ನೀಡಲಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಕಬ್ಬನ್‌ ಪಾರ್ಕ್‌ ಠಾಣೆಗೆ ಈ ಬಗ್ಗೆ ಮಾಹಿತಿ ಬಂದಿದೆ. ತನಿಖೆಗೆ ಹಾಜರಾಗುವಂತೆ ಈಗಾಗಲೇ ಅವರಿಗೆ ನೋಟಿಸ್‌ ನೀಡಿರುವುದರಿಂದ ಕಸ್ಟಡಿಗೆ ಪಡೆಯುವ ಅಗತ್ಯ ಇಲ್ಲ. ಅವರನ್ನು ವಿಮಾನ ಹತ್ತದಂತೆ ತಡೆದ ಅಧಿಕಾರಿಗಳು, ವಾಪಸ್‌ ಕಳುಹಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

‘ಹೆಣ್ಣೂರಿನಲ್ಲಿರುವ ಮಂತ್ರಿ ವೆಬ್‌ ಸಿಟಿ ಅಪಾರ್ಟ್‌ಮೆಂಟ್ಸ್‌ನಲ್ಲಿ ಫ್ಲ್ಯಾಟ್‌ ಕೊಡುವ ಆಮಿಷ ಒಡ್ಡಿ 2016ರಲ್ಲೇ ಹಣ ಪಡೆದು ಕಂಪನಿ ನಮಗೆ ವಂಚಿಸಿದೆ’ ಎಂದು ಆರೋಪಿಸಿ ಮಂತ್ರಿ ಡೆವಲಪರ್ಸ್‌ನಲ್ಲಿ ಬಂಡವಾಳ ಹೂಡಿದ್ದ ಕೆಲವು ಖರೀದಿದಾರರು ಇದೇ ಜುಲೈ ತಿಂಗಳಲ್ಲಿ ‌ದೂರು ನೀಡಿದ್ದರು.

ಆರೋಪಿಗಳು ದೇಶದಿಂದ ಪಲಾಯನ ಮಾಡಬಹುದು ಎಂಬ ಆತಂಕದಿಂದ, ಲುಕ್‌ಔಟ್‌ ನೋಟಿಸ್‌ ಹೊರಡಿಸುವಂತೆ ಸಂತ್ರಸ್ತರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)