ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ನೆಲೆಸಿದ್ದ ಬಾಂಗ್ಲನ್ನರ ಗಡಿಪಾರಿಗೆ ಕೋಲ್ಕತ್ತಾದಲ್ಲಿ ಅಡ್ಡಿ

* ಕೋಲ್ಕತ್ತಾದಲ್ಲಿ ಬೀಡುಬಿಟ್ಟ ಪೊಲೀಸರು * ಏಕಕಾಲದಲ್ಲಿ 59 ಮಂದಿ ಹಸ್ತಾಂತರ ಅಸಾಧ್ಯ; ಬಿಎಸ್‌ಎಫ್‌
Last Updated 26 ನವೆಂಬರ್ 2019, 6:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿ ಸಿಕ್ಕಿಬಿದ್ದಿರುವ 59 ಬಾಂಗ್ಲಾ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್‌ ಕಳುಹಿಸಲು ಕೋಲ್ಕತ್ತಾದಲ್ಲಿ ವಿರೋಧ ವ್ಯಕ್ತವಾಗಿದ್ದು, ಕೆಲ ಸಂಘಟನೆಗಳ ಸದಸ್ಯರು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದಾಗಿ ಗಡಿದಾಟಿಸುವ ಕೆಲಸಕ್ಕೆ ಅಡ್ಡಿಯಾಗಿದೆ.

ರಾಮಮೂರ್ತಿನಗರ ಹಾಗೂ ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದ 22 ಮಹಿಳೆಯರು ಸೇರಿದಂತೆ 59 ಬಾಂಗ್ಲಾ ಪ್ರಜೆಗಳನ್ನು ಕರೆದುಕೊಂಡು ಬೆಂಗಳೂರಿನ ಪೊಲೀಸರ ವಿಶೇಷ ತಂಡ ಈಗಾಗಲೇ ಕೋಲ್ಕತ್ತಾ ತಲುಪಿದೆ.

‘59 ಮಂದಿ ಭಾರತದವರು. ಅವರೆಲ್ಲ ಅಮಾಯಕರು ಹಾಗೂ ಬಡವರು. ಯಾವುದೇ ವಿಚಾರಣೆ ನಡೆಸದೆ ಅವರನ್ನು ಬಾಂಗ್ಲಾ ಪ್ರಜೆಗಳೆಂದು ತೀರ್ಮಾನಿಸುವುದು ಯಾವ ನ್ಯಾಯ. ಅವರನ್ನು ಗಡಿಪಾರು ಮಾಡಲು ಬಿಡುವುದಿಲ್ಲ’ ಎಂದು ಸ್ಥಳೀಯ ಮಾನವ ಹಕ್ಕುಗಳ ಸಂಘಟನೆಗಳು ಪಟ್ಟು ಹಿಡಿದಿವೆ. ಕೋಲ್ಕತ್ತಾ ಹಾಗೂ ಬಾಂಗ್ಲಾ ಗಡಿಯಲ್ಲಿ ಪ್ರತಿಭಟನೆಯನ್ನೂ ಶುರು ಮಾಡಿವೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಪೊಲೀಸರು, ‘ಸದ್ಯಕ್ಕೆ ಗಡಿಪಾರು ಪ್ರಕ್ರಿಯೆ ಸ್ಥಗಿತಗೊಳಿಸಿ’ ಎಂದು ಹೇಳಿದ್ದಾರೆ. ಅದರಿಂದಾಗಿ 59 ಮಂದಿ ಬಾಂಗ್ಲಾದೇಶಿಯರ ಸಮೇತಬೆಂಗಳೂರು ಪೊಲೀಸರು, ಕೋಲ್ಕತ್ತಾದಲ್ಲೇ ಬೀಡು ಬಿಟ್ಟಿದ್ದಾರೆ. ಅವರ ವಸತಿಗೆ ಸ್ಥಳೀಯ ಕಲ್ಯಾಣ ಮಂಟಪವೊಂದರಲ್ಲಿ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬಿಎಸ್‌ಎಫ್‌ ಅಧಿಕಾರಿಗಳ ಜೊತೆ ಮಾತುಕತೆ: ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಅವರೇ ಸೋಮವಾರ ಕೋಲ್ಕತ್ತಾಕ್ಕೆ ಹೋಗಿದ್ದಾರೆ. ಬಿಎಸ್‌ಎಫ್‌ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಗಡಿಪಾರು ಪ್ರಕ್ರಿಯೆ ಬಗ್ಗೆ ಚರ್ಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ದೇಶದ ಹಲವು ಭಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲು ಆಯಾ ರಾಜ್ಯಗಳ ಪೊಲೀಸರು ಕೋಲ್ಕತ್ತಾಗೆ ಬರುತ್ತಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಹಲವು ದಿನಗಳಿಂದ ಪ್ರತಿಭಟನೆ ಆರಂಭಿಸಿವೆ. ಹೀಗಾಗಿ, ಗಡಿಪಾರು ಪ್ರಕ್ರಿಯೆ ಸ್ವಲ್ಪ ವಿಳಂಬವಾಗಲಿದೆ’ ಎಂದು ವಿಶೇಷ ತಂಡದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಏಕಕಾಲದಲ್ಲಿ 59 ಮಂದಿಯನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ. ನಿತ್ಯ 10 ಮಂದಿಯನ್ನಷ್ಟೇ ಗಡಿಪಾರು ಮಾಡಲಾಗುವುದೆಂದು ಬಿಎಸ್‌ಎಫ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಅವರ ಸೂಚನೆಯಂತೆ ಬಾಂಗ್ಲಾ ಪ್ರಜೆಗಳ ಗಡಿಪಾರಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮಂಗಳವಾರ ಅಥವಾ ಬುಧವಾರ 10 ಮಂದಿಯನ್ನು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT