₹ 14 ಲಕ್ಷ ಲಂಚ ಪಡೆದ ಪ್ರಕರಣ: ಐ.ಟಿ ಅಧಿಕಾರಿಗಳಿಗೆ ಜಾಮೀನು

ಬುಧವಾರ, ಏಪ್ರಿಲ್ 24, 2019
33 °C

₹ 14 ಲಕ್ಷ ಲಂಚ ಪಡೆದ ಪ್ರಕರಣ: ಐ.ಟಿ ಅಧಿಕಾರಿಗಳಿಗೆ ಜಾಮೀನು

Published:
Updated:

ಬೆಂಗಳೂರು: ಆದಾಯ ತೆರಿಗೆ ತಪ್ಪಿಸಿದ ಪ್ರಕರಣದಿಂದ ಪಾರುಮಾಡಲು ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕರಿಂದ ಲಂಚ ಪಡೆಯುವಾಗ ಬಂಧನಕ್ಕೊಳಗಾಗಿದ್ದ ಆದಾಯ ತೆರಿಗೆ ಅಧಿಕಾರಿಗಳಾದ ಎಚ್‌.ಆರ್‌. ನಾಗೇಶ್ ಮತ್ತು ನರೇಂದರ್‌ ಸಿಂಗ್‌ ಅವರಿಗೆ ಇಲ್ಲಿನ ಸಿಬಿಐ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.

ಈ ಮಧ್ಯೆ, ಎರಡು ದಿನಕ್ಕಿಂತಲೂ ಹೆಚ್ಚು ಸಮಯ ಸಿಬಿಐ ವಶದಲ್ಲಿದ್ದ ಐಟಿಒಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತು ಆದೇಶವನ್ನು ಶನಿವಾರ ಆರೋಪಿಗಳಿಗೆ ತಲುಪಿಸಲಾಗಿದೆ. ನಾಗೇಶ್‌, ಬುಧವಾರ ರಾತ್ರಿ ಲಂಚ ಸ್ವೀಕರಿಸುವಾಗ ಜಯನಗರದಲ್ಲಿ ಬಂಧಿಸಲಾಗಿತ್ತು. ಆನಂತರ, ಸಿಂಗ್‌ ಅವರನ್ನು ಅವರ ಮನೆಯಲ್ಲಿ ದಸ್ತಗಿರಿ ಮಾಡಲಾಗಿತ್ತು.

ಸಿಬಿಐ ತನಿಖೆ ಜೊತೆಯಲ್ಲೇ ಆರೋಪಿಗಳ ವಿರುದ್ಧ ಆಂತರಿಕ ವಿಚಾರಣೆ ನಡೆಯಲಿದೆ. ವಿಚಾರಣೆಗೆ ಮೂರ್ನಾಲ್ಕು ಹಿರಿಯ ಅಧಿಕಾರಿಗಳಿರುವ ಸಮಿತಿ ನೇಮಕವಾಗಲಿದ್ದು, ಕಮಿಷನರ್‌ ದರ್ಜೆ ಅಧಿಕಾರಿ ಸಮಿತಿ ನೇತೃತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾಮೀನು ಅರ್ಜಿ ಪುರಸ್ಕಾರ: ನಾಗೇಶ್‌ ಮತ್ತು ನರೇಂದರ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಬಿಐನ ವಿಶೇಷ ನ್ಯಾಯಾಲಯ ಬಂಧಿತರಿಗೆ ಷರತ್ತುಬದ್ಧ ಜಾಮೀನು ನೀಡಿತು. ತಲಾ ₹ 2 ಲಕ್ಷದ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಎರಡು ಶೂರಿಟಿ ಕೊಡುವಂತೆ ನ್ಯಾಯಾಧೀಶರು ಆದೇಶಿಸಿದರು. ಕರೆದಾಗ ತನಿಖೆಗೆ ಹೋಗಬೇಕು. ಅನುಮತಿ ಪಡೆಯದೆ ಊರು ಬಿಡಬಾರದು ಎಂದೂ ಕೋರ್ಟ್‌ ಹೇಳಿದೆ.

‘ಆರೋಪಿಗಳಿಗೆ ಜಾಮೀನು ಕೊಡಬಾರದು. ಜಾಮೀನು ಕೊಟ್ಟರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಪ್ರಕರಣದ ಎರಡನೇ ಆರೋಪಿ ನರೇಂದರ್‌ ಸಿಂಗ್‌ ಅವರನ್ನು ಇನ್ನಷ್ಟು ವಿಚಾರಣೆಗೆ ಒಳ‍ಪಡಿಸಬೇಕಿರುವುದರಿಂದ ಸಿಬಿಐ ವಶಕ್ಕೆ ಕೊಡಬೇಕು’ ಎಂದು ಸಿಬಿಐ ವಕೀಲರು ವಾದಿಸಿದರು.

ಬಂಧಿತರ ಪರ ಹಾಜರಾಗಿದ್ದ ವಕೀಲರು, ‘ಈಗಾಗಲೇ ಇಬ್ಬರು ಅಧಿಕಾರಿಗಳು ಐದು ದಿನ ಸಿಬಿಐ ವಶದಲ್ಲಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಹೆಚ್ಚು ಸಮಯ ತನಿಖಾಧಿಕಾರಿಗಳ ವಶಕ್ಕೆ ಕೊಡಲು ಸಾಧ್ಯವಿಲ್ಲ. ಅಲ್ಲದೆ, ನಾಗೇಶ್‌ ಮನೆಯಲ್ಲಿ ವಶಪಡಿಸಿಕೊಂಡ ಹಣ ಅವರದ್ದೇ ಎಂದು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ’ ಎಂದು ಪ್ರತಿಪಾದಿಸಿದರು. ವಾದ–ಪ್ರತಿವಾದ ಆಲಿಸಿದ ಕೋರ್ಟ್‌ ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿತು.

ಪ್ರಕರಣವೇನು?: ‘ವಿಂಡ್ಸರ್‌ ಎಡಿಫೈಸಸ್‌ ಪ್ರೈವೇಟ್‌ ಲಿ’. ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರಾವ್‌ ಎಂಬುವವರನ್ನು ತೆರಿಗೆ ವಂಚನೆ ಪ್ರಕರಣದಿಂದ ಪಾರುಮಾಡಲು ₹ 14 ಲಕ್ಷ ಲಂಚ ಪಡೆದ ಆರೋಪಕ್ಕೆ ನಾಗೇಶ್‌ ಒಳಗಾಗಿದ್ದಾರೆ. ನಾಗೇಶ್‌ ಅವರ ಮನೆಯಲ್ಲಿ ₹ 1.35 ಕೋಟಿ ನಗದು, ಬ್ಯಾಂಕ್‌ ಲಾಕರ್‌ಗಳಲ್ಲಿ ₹ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು. ಸಿಂಗ್‌ ಅವರ ಮನೆಯಲ್ಲಿ ಏನೂ ಸಿಕ್ಕಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !