ಮಂಗಳವಾರ, ಮಾರ್ಚ್ 2, 2021
31 °C

ಬಲೂನು ಸ್ಫೋಟ: ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಪಾಯದಿಂದ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುವ ವೇಳೆ ನೈಟ್ರೊಜನ್ ತುಂಬಿದ ಬಲೂನುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸ್ಫೋಟಗೊಂಡಿದ್ದರಿಂದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ 5 ಮಂದಿಗೆ ಗಾಯಗಳಾಗಿವೆ.

ಸ್ವಾಮೀಜಿ ಎಡ ಕಣ್ಣಿನ ಬಳಿ ಅಲ್ಪಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿವೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಮಳ್ಳಿ ಶಿವಕುಮಾರ್ ಮುಖ ಮತ್ತು ಕೆನ್ನೆಯ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಪೈಲ್ವಾನ್ ರಂಗಪ್ಪ, ಹೊಸಕೋಟೆ ದೇವಣ್ಣ ಅವರಿಗೆ ಸುತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಘಟನೆ ವಿವರ: ಕುಸ್ತಿ ಪಂದ್ಯಾವಳಿಗೆ ಮಧ್ಯಾಹ್ನ ಚಾಲನೆ ನೀಡುವುದಕ್ಕಾಗಿ ನೈಟ್ರೊಜನ್ ತುಂಬಿದ 5 ಗೊಂಚಲು ಬಲೂನುಗಳನ್ನು ಸಿದ್ಧಗೊಳಿಸಲಾಗಿತ್ತು. ಗಾಳಿ ಜೋರಾಗಿ ಬೀಸಿದ್ದರಿಂದ ಕ್ರೀಡಾಜ್ಯೋತಿಗೆ ಬಲೂನೊಂದು ತಾಗಿದೆ. ಇದರಿಂದ ಎಲ್ಲ ಬಲೂನುಗಳೂ ಸ್ಫೋಟಗೊಂಡವು. ತಕ್ಷಣ ಅಖಾಡದಲ್ಲಿದ್ದ ಎಲ್ಲರೂ ರಕ್ಷಣೆಗಾಗಿ ಚದುರಿದರು.

ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ನನಗೆ ಏನೂ ಆಗಿಲ್ಲ. ಭಕ್ತರು ಆತಂಕಪಡಬಾರದು. ಇದೊಂದು ಸಣ್ಣ ಘಟನೆ. ಬಲೂನಿನಲ್ಲಿದ್ದ ಹಳದಿ ಬಣ್ಣ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿದ್ದರಿಂದ ಭಾರಿ ಸ್ಫೋಟ ಸಂಭವಿಸಿದೆ ಎಂಬ ಭಾವನೆ ಬರುತ್ತಿದೆ. ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ನಿರಾಂತಕವಾಗಿ ನಡೆಯುತ್ತಿವೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು