ಶೌಚಾಲಯದಲ್ಲಿ ಕುರಿ, ಕೋಳಿ ಸಾಕಣೆ

7
ಸ್ವಚ್ಛ ಭಾರತ ಆಂದೋಲನಕ್ಕೆ ಮೈಸೂರಿನಲ್ಲಿ ಹಿನ್ನಡೆ

ಶೌಚಾಲಯದಲ್ಲಿ ಕುರಿ, ಕೋಳಿ ಸಾಕಣೆ

Published:
Updated:
Deccan Herald

ಮೈಸೂರು: ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಶೇ 100ರಷ್ಟು ಶೌಚಾಲಯ ನಿರ್ಮಿಸಿರುವುದಾಗಿ ಘೋಷಣೆ ಮಾಡಲಾಗಿದೆ. ಆದರೆ, ಕೆಲ ಹಳ್ಳಿಗಳ ಜನರು ಕುರಿ, ಕೋಳಿ ಸಾಕಾಣಿಕೆ, ಕೃಷಿ ಸಾಮಗ್ರಿ ಇಡಲು ಆ ಕಟ್ಟಡಗಳನ್ನು ಬಳಕೆ ಮಾಡುತ್ತಿದ್ದಾರೆ.

ಮನೆಯಲ್ಲಿ ಶೌಚಾಲಯ ಕಟ್ಟಿದ್ದರೂ, ಮಲ ವಿಸರ್ಜನೆಗೆ ಬಯಲು ಪ್ರದೇಶ, ಗದ್ದೆ, ತೋಟ, ನದಿ ದಡವೇ ಕೆಲವರ ಪಾಲಿನ ನೆಚ್ಚಿನ ತಾಣವಾಗಿವೆ. ಹೀಗಾಗಿ, ಯಥಾ ಪ್ರಕಾರ ಬಯಲು ಶೌಚ ಮುಂದುವರಿದಿದೆ.

ಕಟ್ಟಿಸಿರುವ ಶೌಚಾಲಯಗಳ ಸಮರ್ಪಕ ಬಳಕೆ ಮಾಡಿಕೊಳ್ಳುವ ಕುರಿತು ಜಿಲ್ಲಾ ಪಂಚಾಯಿತಿಯಿಂದ ‘ಬಳಕೆ ಅಭಿಯಾನ’ ಆರಂಭಿಸಲು ಸಿದ್ಧತೆ ನಡೆದಿದೆ. ಪ್ರತಿ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

2012ರಲ್ಲಿ ನಡೆಸಿದ ‘ಬೇಸ್‌ಲೈನ್‌’ ಸಮೀಕ್ಷೆಯಂತೆ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ 4.07 ಲಕ್ಷ ಕುಟುಂಬಗಳಿವೆ. ಅದರಲ್ಲಿ 1.65 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿದ್ದವು. ಜಿಲ್ಲಾ ಪಂಚಾಯ್ತಿ ಅಂಕಿ ಅಂಶಗಳ ಪ್ರಕಾರ 2013ರಿಂದ ಈ ವರ್ಷದ ಫೆಬ್ರುವರಿ ಅಂತ್ಯದವರೆಗೆ 2.42 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ.

ಒಂದು ಶೌಚಾಲಯ ನಿರ್ಮಿಸಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡದವರಿಗೆ ₹ 15 ಸಾವಿರ, ಸಾಮಾನ್ಯ ವರ್ಗದವರಿಗೆ ₹ 12 ಸಾವಿರ ಅನುದಾನ
ನೀಡಲಾಗಿದೆ.

‘ಹಳ್ಳಿ ಜನರು ಶೌಚಾಲಯ ವ್ಯವಸ್ಥೆಗೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ನೈರ್ಮಲ್ಯದ ಬಗ್ಗೆ ಅಂತಹವರ ಮನವೊಲಿಸಬೇಕಾಗುತ್ತದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಈಗಾಗಲೇ ಪ್ರತಿ ಮನೆ ಬಾಗಿಲಿಗೆ ತೆರಳಿ ಮನವಿ ಮಾಡುತ್ತಿದ್ದಾರೆ’ ಎಂದು ಜಿ.ಪಂ ಉಪಕಾರ್ಯದರ್ಶಿ (ಅಭಿವೃದ್ಧಿ)
ಶಿವಕುಮಾರಸ್ವಾಮಿ‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಹಿಂದೆ ಶೌಚಾಲಯ ನಿರ್ಮಾಣಕ್ಕೆ ಗುರಿ ನಿಗದಿ ಮಾಡಿದ್ದರಿಂದ ಜಿಲ್ಲಾ, ತಾಲ್ಲೂಕು, ಗ್ರಾಮಮಟ್ಟದ ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ಜನರಿಗೆ ಕೈ ಮುಗಿದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮನವೊಲಿಸಿದ್ದರು.

‘ಹಳ್ಳಿಗಳಿಗೆ ತೆರಳಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಕಾಡಿ ಬೇಡಿದ್ದೆವು. ಅದರಲ್ಲಿ ಯಶಸ್ವಿಯಾದೆವು. ಈಗ ಶೌಚಾಲಯ ಬಳಸುವಂತೆ ಮನವಿ ಮಾಡಬೇಕಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಹೇಳುತ್ತಾರೆ.

***

ಶೌಚಾಲಯ ಬಳಸಲು ಹಳ್ಳಿ ಜನರಿಗೆ ಮುಜುಗರ. ಬೀಡಿ ಸೇದುತ್ತಾ ಬಯಲಿನಲ್ಲಿ ವಿಸರ್ಜಿಸುವುದು ಅಭ್ಯಾಸ. ಬಳಕೆಗೆ ಜಾಗೃತಿ ಮೂಡಿಸುತ್ತೇವೆ

ಶಿವಕುಮಾರಸ್ವಾಮಿ‌, ಉಪ ಕಾರ್ಯದರ್ಶಿ (ಅಭಿವೃದ್ಧಿ), ಮೈಸೂರು ಜಿ.ಪಂ

ನಗರ ಪ್ರದೇಶದಲ್ಲೂ ಶೌಚಾಲಯ ಬಳಕೆ ಮಾಡುತ್ತಿಲ್ಲ. ನಂಜನಗೂಡು ನಗರದಲ್ಲಿನ ನದಿ ಸೇತುವೆ ಬಳಿಅನೈರ್ಮಲ್ಯವೇ ಅದಕ್ಕೆ ಸಾಕ್ಷಿ

-ಕೆ.ಬಿ.ಪ್ರಭುಸ್ವಾಮಿ, ಮುಖ್ಯ ಯೋಜನಾಧಿಕಾರಿ, ಮೈಸೂರು ಜಿ.ಪಂ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !