ತ್ರಿವಿಧ ದಾಸೋಹಿಗೆ ಆಶ್ರಯ ಕೊಟ್ಟಿದ್ದ ‘ಛತ್ರ’

7

ತ್ರಿವಿಧ ದಾಸೋಹಿಗೆ ಆಶ್ರಯ ಕೊಟ್ಟಿದ್ದ ‘ಛತ್ರ’

Published:
Updated:
Prajavani

ಬೆಂಗಳೂರು: ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹಕ್ಕೆ ತುಮಕೂರಿನ ಸಿದ್ಧಗಂಗಾ ಮಠ ಜಗದ್ವಿಖ್ಯಾತಿ ಪಡೆದಿದೆ. ಅಂಥ ದಾಸೋಹ ನಡೆಸುತ್ತಿದ್ದ ಶಿವಕುಮಾರ ಸ್ವಾಮೀಜಿಯವರಿಗೆ ಪದವಿ ವ್ಯಾಸಂಗದ ಸಂದರ್ಭದಲ್ಲಿ ಅನ್ನ ಹಾಗೂ ಆಶ್ರಯ ನೀಡಿದ್ದು ಬೆಂಗಳೂರಿನ ‘ರಾವ್‌ ಬಹದ್ದೂರ್ ಧರ್ಮಪ್ರವರ್ತಕ ಗುಬ್ಬಿ ತೋಟದಪ್ಪನವರ ಧರ್ಮ ಛತ್ರ'.

ಪದವಿ ವ್ಯಾಸಂಗಕ್ಕಾಗಿ 1927ರಲ್ಲಿ ‘ಶಿವಣ್ಣ’ನಾಗಿ ಬೆಂಗಳೂರಿಗೆ ಬಂದಿದ್ದ ಸ್ವಾಮೀಜಿ, ಮೆಜೆಸ್ಟಿಕ್‌ ಬಳಿ ಇರುವ ಛತ್ರದಲ್ಲಿ ಮೂರು ವರ್ಷ ಉಳಿದಿದ್ದರು. ಸಿದ್ಧಗಂಗಾ ಮಠದ ಪೀಠಾಧಿಪತಿಗಳಾದ ಬಳಿಕ ಹಲವು ಬಾರಿ ಛತ್ರಕ್ಕೆ ಭೇಟಿ ನೀಡಿದ್ದ ಅವರು ತಮ್ಮ ಹಳೇ ನೆನಪುಗಳನ್ನು ವಿದ್ಯಾರ್ಥಿಗಳ ಬಳಿ ಹಂಚಿಕೊಳ್ಳುತ್ತಿದ್ದರು. ‘ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ತ್ರಿವಿಧ ದಾಸೋಹಕ್ಕೆ ಈ ಛತ್ರದ ದಾಸೋಹವೂ ಪ್ರೇರಣೆ’ ಎಂದು ಹೇಳಿಕೊಳ್ಳುತ್ತಿದ್ದರು. 

ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ಸ್ವಾಮೀಜಿ, ಮೆಟ್ರಿಕ್ಯುಲೇಷನ್ ಮುಗಿಯುತ್ತಿದ್ದಂತೆ ಪ್ರವೇಶ ಪರೀಕ್ಷೆ ಬರೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಸೀಟು ಗಿಟ್ಟಿಸಿಕೊಂಡಿದ್ದರು. ಪ್ರತಿಭಾವಂತರಾಗಿದ್ದ ಅವರಿಗೆ ಛತ್ರದಲ್ಲಿ ಉಳಿದುಕೊಳ್ಳಲು ಆಡಳಿತ ಮಂಡಳಿ ಅವಕಾಶ ನೀಡಿತ್ತು. ಛತ್ರದ ನೋಂದಣಿ ಪುಸ್ತಕದಲ್ಲಿ 1927ರ ಬ್ಯಾಚ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ವಾಮೀಜಿ ಹೆಸರು ಇದ್ದು, ಅದನ್ನು ಆಡಳಿತ ಮಂಡಳಿಯವರು ಜೋಪಾನವಾಗಿಟ್ಟಿದ್ದಾರೆ.

ಸ್ವಾಮೀಜಿ ವಾಸ್ತವ್ಯದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಛತ್ರದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್.ಬೂದಿಹಾಳ, ‘ನಡೆದಾಡುವ ದೇವರು ವಾಸವಿದ್ದ ಛತ್ರದಲ್ಲಿ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ. ಅವರನ್ನು ವಿದ್ಯಾರ್ಥಿಯಾಗಿ ನೋಡಿದ್ದವರ‍್ಯಾರೂ ಇಂದು ನಮ್ಮೊಂದಿಗೆ ಇಲ್ಲ. ಆದರೆ, ಸ್ವಾಮೀಜಿಯವರು ಛತ್ರಕ್ಕೆ ಬಂದಾಗಲೆಲ್ಲ ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಹೇಳುತ್ತಿದ್ದರು’ ಎಂದರು.

‘1910ರಲ್ಲಿ ಛತ್ರ ಸ್ಥಾಪನೆಯಾಗಿದೆ. 1927ರಿಂದ ಮೂರು ವರ್ಷ ಸ್ವಾಮೀಜಿ ಛತ್ರದಲ್ಲಿ ವಾಸವಿದ್ದರು. ಹಂಚಿನ ಮನೆಯಂತಿದ್ದ ಛತ್ರವನ್ನು 1995ರಲ್ಲಿ ನವೀಕರಣ ಮಾಡಲಾಗಿದೆ. ಸ್ವಾಮೀಜಿಯವರು ಉಳಿದುಕೊಂಡಿದ್ದ ಕೊಠಡಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲವೆಂಬ ನೋವು ನಮಗಿದೆ. ಆದರೆ, ಅವರು ಛತ್ರದ ತುಂಬೆಲ್ಲ ಓಡಾಡಿದ್ದಾರೆ. ಛತ್ರದ ವಿದ್ಯಾರ್ಥಿಗಳು ಇಂದಿಗೂ ಸ್ವಾಮೀಜಿಯವರ ಭಾವಚಿತ್ರಕ್ಕೆ ನಮಸ್ಕರಿಸಿಯೇ ಪ್ರಸಾದ ಸ್ವೀಕರಿಸುತ್ತಾರೆ. ಸ್ವಾಮೀಜಿ ಛತ್ರದ ಹಳೇ ವಿದ್ಯಾರ್ಥಿ ಎಂಬ ಹೆಮ್ಮೆ ನಮ್ಮದು. ಛತ್ರಕ್ಕೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ವಾಮೀಜಿ ಬಗ್ಗೆ ತಿಳಿಸುತ್ತೇವೆ. ಅವರ ಮಾರ್ಗದಲ್ಲೇ ನಡೆಯುವಂತೆ ಹೇಳುತ್ತೇವೆ’ ಎಂದು ಬೂದಿಹಾಳ ತಿಳಿಸಿದರು.

ನಿತ್ಯ 4 ಕಿ.ಮೀ ನಡಿಗೆ: ‘ಈಗಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಜಾಗ, 1927ರಲ್ಲಿ ಕೆಂಪಾಂಬುಧಿ ಕೆರೆ ಆಗಿತ್ತು. ಅದರ ದಡದ ಮೇಲೆ ಸ್ನೇಹಿತರೊಡನೆ 2 ಕಿ.ಮೀ ನಡೆದುಕೊಂಡು ಸ್ವಾಮೀಜಿ ಕಾಲೇಜಿಗೆ ಹೋಗುತ್ತಿದ್ದರು. ವಾಪಸ್‌ ನಡೆದುಕೊಂಡು ಛತ್ರಕ್ಕೆ ಬರುತ್ತಿದ್ದರು. ಈ ವಿಷಯವನ್ನು ಸ್ವಾಮೀಜಿಯವರು ಛತ್ರದ ಕಾರ್ಯಕ್ರಮದಲ್ಲಿ ಹೇಳಿದ್ದರು’ ಎಂದು ಬೂದಿಹಾಳ ತಿಳಿಸಿದರು.

‘ಅಂದು ಅನ್ನ, ಮುದ್ದೆ ಹಾಗೂ ಸಾರು ನೀಡಲಾಗುತ್ತಿತ್ತು. ಊಟಕ್ಕೂ ಮುನ್ನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವುದು  ರೂಢಿಯಲ್ಲಿತ್ತು. ಸ್ವಾಮೀಜಿಯವರು ನಿತ್ಯವೂ ಪ್ರಾರ್ಥನೆ ತಪ್ಪಿಸುತ್ತಿರಲಿಲ್ಲ. ಹಸಿದವರನ್ನು ಕಂಡರೆ ಮರುಕಪಡುತ್ತಿದ್ದ ಸ್ವಾಮೀಜಿ, ತಮ್ಮ ಸ್ನೇಹಿತರು ಹಾಗೂ ಪರ ಊರಿನಿಂದ ನಗರಕ್ಕೆ ಬರುತ್ತಿದ್ದವರನ್ನು ಛತ್ರಕ್ಕೆ ಕರೆತಂದು ಊಟ ಮಾಡಿಸಿ ಕಳುಹಿಸುತ್ತಿದ್ದರು. ಅವರ ಕಾಳಜಿ, ಶಿಸ್ತು ಛತ್ರದ ಆಡಳಿತ ಮಂಡಳಿಯವರಿಗೂ ಇಷ್ಟವಾಗುತ್ತಿತ್ತು’ ಎಂದು ನೆನಪು ಮಾಡಿಕೊಂಡರು.

‘ತೋಟದಪ್ಪ ಛತ್ರ’ವೆಂದರೆ ಪ್ರೀತಿ: ‘ಗುಬ್ಬಿ ತೋಟದಪ್ಪ ಛತ್ರವೆಂದರೆ ಸ್ವಾಮೀಜಿ ಅವರಿಗೆ ತುಂಬಾ ಪ್ರೀತಿ. ನೆನಪಾದಾಗಲೆಲ್ಲ ಛತ್ರಕ್ಕೆ ಬರುತ್ತಿದ್ದ ಅವರು ಇಲ್ಲಿಯ ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿ ಹೋಗುತ್ತಿದ್ದರು. ಮಕ್ಕಳಿಗೆ ಪ್ರಸಾದ ನೀಡಿ, ಯಾವುದಕ್ಕೂ ಕಡಿಮೆ ಮಾಡಬೇಡಿ ಎನ್ನುತ್ತಿದ್ದರು’ ಎಂದು ಬೂದಿಹಾಳ ನೆನೆದರು.

‘ಛತ್ರದ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯಾಗಲಿ ತುಮಕೂರು ಮಠಕ್ಕೆ ಹೋದರೆ ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಛತ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಎಲ್ಲ ಸೇರಿ ಸ್ವಾಮೀಜಿಯವರ ಭಾವಚಿತ್ರಕ್ಕೆ ನಮನ ಸಲ್ಲಿಸಿದೆವು’ ಎಂದರು. 

ವಾರಕ್ಕೊಮ್ಮೆ ತುಮಕೂರು ಮಠಕ್ಕೆ ಭೇಟಿ

‘ಪದವಿ ವ್ಯಾಸಂಗದ ವೇಳೆಯಲ್ಲೂ ಸ್ವಾಮೀಜಿ, ವಾರಕ್ಕೊಮ್ಮೆಯಾದರೂ ತುಮಕೂರು ಮಠಕ್ಕೆ ಹೋಗಿ ಬರುತ್ತಿದ್ದರು. ತಮ್ಮ ಜೊತೆಗೆ ಬರುತ್ತಿದ್ದ ಸ್ನೇಹಿತರನ್ನೂ ಕರೆದೊಯ್ದು ಮಠದ ಪರಿಚಯ ಮಾಡಿಸುತ್ತಿದ್ದರು’ ಎಂದು ಬೂದಿಹಾಳ ಹೇಳುತ್ತಾರೆ.

’ಮೆಟ್ರಿಕ್ಯುಲೇಷನ್ ಉತ್ತೀರ್ಣವಾಗಿದ್ದ ಶಿವಕುಮಾರ ಸ್ವಾಮೀಜಿ, ಅಂದಿನ ಸಿದ್ದಗಂಗಾ ಮಠಾಧಿಪತಿಗಳಾದ ಉದ್ದಾನ ಶಿವಯೋಗಿಯವರ ಜೊತೆ ಒಡನಾಟ ಬೆಳೆಸಿಕೊಂಡಿದ್ದರು. ಪದವಿ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದ ಬಳಿಕವೂ ಒಡನಾಟ ಮುಂದುವರಿದಿತ್ತು’ ಎನ್ನುತ್ತಾರೆ. 

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !