ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ನ್ಯಾಯಾಧೀಶ, ತಹಶೀಲ್ದಾರ್‌ ಮಕ್ಕಳು

Last Updated 22 ಜೂನ್ 2019, 20:00 IST
ಅಕ್ಷರ ಗಾತ್ರ

ಜಗಳೂರು: ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಇಂಗ್ಲಿಷ್‌ ಮಾಧ್ಯಮದಲ್ಲೇ ಓದಿಸಬೇಕು ಎಂಬ ಸಮೂಹಸನ್ನಿಗೆ ಬಹುತೇಕ ಪೋಷಕರು ಒಳಗಾಗುತ್ತಿದ್ದಾರೆ. ಇದಕ್ಕೆ ಅಪವಾದ ಎಂಬಂತೆ ಸಿವಿಲ್‌ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಜಿ. ತಿಮ್ಮಯ್ಯ ಹಾಗೂ ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿ ಮಾದರಿ ಎನಿಸಿಕೊಂಡಿದ್ದಾರೆ.

ನ್ಯಾಯಾಧೀಶರಾದ ಜಿ. ತಿಮ್ಮಯ್ಯ ಅವರು ಮಗ ಇಶಾನ್‌ನನ್ನು ಪಟ್ಟಣದ ಸಂತೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1ನೇ ತರಗತಿಗೆ ಸೇರಿಸಿದ್ದಾರೆ. ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಅವರು ಮೊದಲ ಪುತ್ರ ಯಶೋವರ್ಧನ್‌ನನ್ನು ಏಳನೇ ತರಗತಿಗೆ ಇದೇ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.

ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಹಲವು ವೇದಿಕೆಗಳಲ್ಲಿ ಮಾತನಾಡಿರುವ ನ್ಯಾಯಾಧೀಶ ಜಿ. ತಿಮ್ಮಯ್ಯ ಹಾಗೂ ಹುಲ್ಲುಮನಿ ತಿಮ್ಮಣ್ಣ ಅವರು ಕೇವಲ ಭಾಷಣಗಳಿಗಷ್ಟೇ ಸೀಮಿತವಾಗಿರದೆ ನುಡಿದಂತೆ ನಡೆದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂಬ ಆಸೆ ಇತ್ತು. ಮಾತೃಭಾಷೆ ಕನ್ನಡದಲ್ಲಿ ಕಲಿಯುವುದರಿಂದ ವಿಷಯಗಳನ್ನು ಆಳವಾಗಿ ಮತ್ತು ಸ್ಪಷ್ಟವಾಗಿ ಅರಿಯಲು ಸಾಧ್ಯ. ಭಾವನೆಗಳ ಅಭಿವ್ಯಕ್ತಿಗೂ ತೊಡಕಾಗುವುದಿಲ್ಲ. ಕನ್ನಡವನ್ನು ಐಚ್ಛಿಕ ಭಾಷೆಯಾಗಿ ಅಧ್ಯಯನ ಮಾಡಿ, ಕೆಎಎಸ್‌ ಪರೀಕ್ಷೆಯಲ್ಲಿ ನಾಲ್ಕು ಬಾರಿಯೂ ಅತಿ ಹೆಚ್ಚು ಅಂಕಗಳನ್ನು ಪಡೆದು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ’ ಎನ್ನುತ್ತಾರೆ ಹುಲ್ಲುಮನಿ ತಿಮ್ಮಣ್ಣ.

ಹುಲ್ಲುಮನಿ ಅವರ ಎರಡನೇ ಮಗ ರವಿವರ್ಧನ ಮನೆಯ ಪಕ್ಕದ ದಿವ್ಯಭಾರತಿ ಖಾಸಗಿ ಕನ್ನಡ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿದ್ದಾನೆ.

**

ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕವೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದಕ್ಕೆ ನಾನೇ ಉದಾಹರಣೆ.
-ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್‌, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT