ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಚೇತರಿಸಿಕೊಳ್ಳುತ್ತಿದ್ದೇನೆ: ಸಲಾ

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಕೈರೋ: ‘ನಾನು ಚೇತರಿಸಿಕೊಳ್ಳುತ್ತಿದ್ದೇನೆ. ವಿಶ್ವಕಪ್‌ ಆರಂಭವಾಗುವ ಮುನ್ನ ಸಂಪೂರ್ಣ ಫಿಟ್‌ ಆಗಲಿದ್ದೇನೆ’ ಎಂದು ಈಜಿಪ್ಟ್‌ ತಂಡದ ಸ್ಟ್ರೈಕರ್‌ ಮೊಹಮ್ಮದ್‌ ಸಲಾ ತಮ್ಮ ರಾಷ್ಟ್ರದ ಅಧ್ಯಕ್ಷ ಅಬ್ದೆಲ್‌ ಫತಾ ಅಲ್‌ ಸಿಸಿ ಅವರಿಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್ ಲೀಗ್‌ ಫೈನಲ್‌ ಪಂದ್ಯದ ವೇಳೆ ಸಲಾ ಅವರ ಎಡ ಭುಜಕ್ಕೆ ಗಾಯವಾಗಿತ್ತು. ಅದಾದ ನಂತರ ಅವರು ಅಂಗಳದಿಂದ ದೂರ ಉಳಿದಿದ್ದರು. ಸಲಾ ಲೀವರ್‌ಪೂಲ್‌ ಫುಟ್‌ಬಾಲ್‌ ಕ್ಲಬ್‌ನ ಆಟಗಾರ.

‘ಸಲಾ ಅವರ ಭುಜದ ಗಾಯದ ಬಗ್ಗೆ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದರು. ಈಗ ಸಲಾ ಅವರು ತಮ್ಮ ಚೇತರಿಕೆ ಬಗ್ಗೆ ದೃಢಪಡಿಸಿದ್ದು ಸಂತಸದ ಸಂಗತಿ. ನಮ್ಮ ರಾಷ್ಟ್ರದ ಪ್ರಮುಖ ಆಟಗಾರರಾಗಿರುವ ಸಲಾ ಅವರ ಮೇಲೆ ಈ ಬಾರಿ ಸಾಕಷ್ಟು ನಿರೀಕ್ಷೆ ಇದೆ’ ಎಂದು ಅಬ್ದೆಲ್‌ ಫತಾ ಅಲ್‌ ಸಿಸಿ ಅವರ ಅಧಿಕೃತ ವಕ್ತಾರ ಬಸ್ಸಾಮ್‌ ರದಿ ತಿಳಿಸಿದ್ದಾರೆ.

ಸಲಾ ಅವರು ಕಳೆದ ಋತುವಿನಲ್ಲಿ ಲೀವರ್‌ಪೂಲ್‌ ತಂಡದ ಪರವಾಗಿ ಒಟ್ಟು 44 ಗೋಲುಗಳನ್ನು ಗಳಿಸಿದ್ದರು. ಅಮೋಘ ಆಟ ಆಡಿದ್ದ ಅವರು ಅನೇಕ ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಸೋಮವಾರ ಪ್ರಕಟವಾದ ಈಜಿ‍ಪ್ಟ್ ತಂಡದಲ್ಲಿ ಸಲಾ ಸ್ಥಾನ ಗಳಿಸಿದ್ದಾರೆ. 1990ರ ನಂತರ ಮೊದಲ ಬಾರಿಗೆ ಈಜಿಪ್ಟ್‌ ತಂಡವು ವಿಶ್ವಕಪ್‌ ಆಡಲು ಅರ್ಹತೆ ಗಳಿಸಿದೆ. ಆದ್ದರಿಂದ ಸಹಜವಾಗಿ ಆ ರಾಷ್ಟ್ರದ ಫುಟ್‌ಬಾಲ್ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಎ ಗುಂಪಿನಲ್ಲಿರುವ ಈಜಿಪ್ಟ್‌ ತಂಡವು ಆತಿಥೇಯ ರಷ್ಯಾವನ್ನು ಜೂನ್‌ 19ರಂದು ಎದುರಿಸಲಿದೆ. ಈ ಗುಂಪಿನಲ್ಲಿ ಸೌದಿ ಅರೇಬಿಯಾ ಹಾಗೂ ಉರುಗ್ವೆ ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT