ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾವೇರಿ ದರ್ಶನ ಪಡೆಯಲು ಭಕ್ತರ ಪರದಾಟ

ಬಸ್‌ಗಳ ಕೊರತೆ, ಬಾಡಿಗೆ ವಾಹನಗಳೇ ಗತಿ, ಮನವಿಗೂ ಸಿಗದ ಸ್ಪಂದನೆ
Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಸೂಕ್ತ ಸಮಯದಲ್ಲಿ ಬಸ್ ವ್ಯವಸ್ಥೆಯಿಲ್ಲದೇ ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಪರದಾಡುತ್ತಿದ್ದಾರೆ. ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಪುಣ್ಯಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಭಕ್ತರ ಅನುಕೂಲಕ್ಕಾಗಿ ಯಾವುದೇ ಬಸ್ ವ್ಯವಸ್ಥೆಗಳಿಲ್ಲ. ಬೆಳಿಗ್ಗೆ 7.30ರಿಂದ 8.30ರ ಅವಧಿಯಲ್ಲಿ ಒಂದು ಖಾಸಗಿ ಮತ್ತು ಒಂದು ಕೆಎಸ್‌ಆರ್‌ಟಿಸಿ ಬಸ್ ಮಾತ್ರ ತಲಕಾವೇರಿಗೆ ತೆರಳುತ್ತದೆ. ಆ ನಂತರ ಯಾವುದೇ ಬಸ್‍ಗಳ ಸಂಚಾರ ಇರುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಭಾಗಮಂಡಲದಿಂದ ತಲಕಾವೇರಿಗೆ ಅಥವಾ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿ ಬಸ್ ವ್ಯವಸ್ಥೆ ಇಲ್ಲದೇ ನಿತ್ಯ ಪರದಾಡುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ, ಇಲ್ಲಿಯವರೆಗೆ ಆರಂಭಗೊಂಡಿಲ್ಲ. ಖಾಸಗಿ ಬಸ್ ಮಾಲೀಕರು ನಷ್ಟದ ಕಾರಣ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

ಆದರೆ, ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೇ ಬಸ್‌ಗಳ ಕೊರತೆಯನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಸೇರಿ ಪ್ರಭಾವಿ ಜನಪ್ರತಿನಿಧಿಗಳಿಗೆ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಎಲ್ಲ ಭಕ್ತರು ಸ್ವಂತ ವಾಹನಗಳಲ್ಲಿ ಬರಲು ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದವರು ಭಾಗಮಂಡಲದವರೆಗೆ ಬಸ್‌ನಲ್ಲಿ ಬಂದು ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ತೆರಳಬೇಕೆಂದರೆ ಜೀಪು ಹಾಗೂ ಆಟೋರಿಕ್ಷಾ ಅಥವಾ ಇನ್ನಿತರ ಬಾಡಿಗೆ ವಾಹನಗಳನ್ನೇ ಅವಲಂಭಿಸಬೇಕಾಗಿದೆ ಎಂದು ನಿವಾಸಿ ಅರವಿಂದ್‌ ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT