ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ‘ತಮಾಲಾ’ ಬೆಳಕು

Last Updated 22 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಕೆಲ ದಿನಗಳಲ್ಲಿಯೇ ದೀಪಾವಳಿ ಬರಲಿದೆ. ಬೆಳಕಿನ ಹಬ್ಬವಾದ ದೀಪಾವಳಿಯಲ್ಲಿ ಮನೆ, ಮನಗಳಲ್ಲಿ ಬೆಳಕು ಹರಿಸಲು ಜೆ.ಪಿ. ನಗರದ ತಮಾಲಾ ಗ್ಯಾಲರಿ ಸಜ್ಜಾಗಿದೆ.

ಮಣ್ಣು, ಲೋಹ, ಗಾಜು, ಕಲ್ಲು, ಮರ ಸೇರಿದಂತೆ ಇತರ ವಸ್ತುಗಳನ್ನು ಮಾಧ್ಯಮವಾಗಿ ಬಳಸಿ ದೇಶದ ವಿವಿಧಡೆ ಬಳಸುವ ಹಲವು ಬಗೆಯ ದೀಪಗಳನ್ನು ಹಾಗೂ ಇತರ ಕರಕುಶಲ ವಸ್ತುಗಳನ್ನು ಸಿದ್ಧಪಡಿಸಿರುವ ಇಲ್ಲಿನ ಕಲಾವಿದರು ಅವುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದಾರೆ.

ಸೆಣಬು, ಹತ್ತಿ, ಕಾಗದಗಳ ಮೂಲಕವೂ ಕರಕುಶಲ ಕರ್ಮಿಗಳು ಮತ್ತು ಕಲಾವಿದರು ತಮ್ಮ ಕೈಚಳಕ ತೋರಿದ್ದಾರೆ. ಒಟ್ಟು 75 ಕಲಾವಿದರು ಮತ್ತು ಗ್ರಾಮೀಣ ಕುಶಲಕರ್ಮಿಗಳು ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದಾರೆ. ಪ್ರದರ್ಶನ ನ. 8ರವರೆಗೆ ಇರುತ್ತದೆ.

ಚನ್ನಪಟ್ಟಣ, ಉತ್ತರ ಪ್ರದೇಶದ ಮೊರದಾಬಾದ್, ಫಿರೋಜಾಬಾದ್‌, ಗುಜರಾತ್‌ನ ಕಛ್‌ ಪ್ರಾಂತ್ಯ, ತಮಿಳುನಾಡಿನ ಮಧುರೈ, ಆಂಧ್ರಪ್ರದೇಶದ ಕೊಂಡಂಪಲ್ಲಿ, ರಾಜಸ್ಥಾನದ ಸಾಂಪ್ರದಾಯಿಕ ಕರ ಕುಶಲ ವಸ್ತುಗಳು ತಮಾಲಾ ಚಿತ್ರಕಲಾ ಗ್ಯಾಲರಿಯಲ್ಲಿವೆ.

ಮರದ ದೀಪ ಮತ್ತು ಗಂಟೆಗಳು:ಚನ್ನಪಟ್ಚಣ ಕುಶಲಕರ್ಮಿಗಳು ಸಾಂಪ್ರದಾಯಿಕ ‘ಲ್ಯಾಕ್- ಟರ್ನಿಂಗ್’ ವಿಧಾನದಲ್ಲಿ ಸಿದ್ಧಪಡಿಸಿರುವ ಸಮಕಾಲೀನ ಮೇಣದ ಬತ್ತಿ (ಕ್ಯಾಂಡಲ್‌) ಆಕರ್ಷಕವಾಗಿವೆ. ಗ್ರಾಮೀಣ ಕುಶಲಕರ್ಮಿಗಳು ಸಿದ್ಧಪಡಿಸಿರುವ ಮರದ ಗಂಟೆಗಳು ಮತ್ತು ಮಣಿಗಳ ವಿಶಿಷ್ಟ ಮಿಶ್ರಣದಿಂದ ತಯಾರಿಸಿರುವ ತೋರಣಗಳು ಗಮನ ಸೆಳೆಯುತ್ತವೆ.

ಕಲಾವಿದರಾದ ಸುವರ್ಣ ಅವರ ಟೀಲೈಟ್‌ ಹೋಲ್ಡರ್‌, ಉತ್ತರ ಪ್ರದೇಶದ ಅಕ್ರಮ್‌ ಖಾನ್‌ ಅವರು ಸಮಕಾಲೀನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳಲ್ಲಿ ಸಿದ್ಧಪಡಿಸಿರುವ ವಿವಿಧ ಆಟಿಕೆಗಳು ಇಲ್ಲಿವೆ.

ಲೋಹದ ದೀಪಗಳು: ಉತ್ತರ ಪ್ರದೇಶದ ಮೊರಾದಾಬಾದ್ ಕಲಾವಿದ ರಫಿಕ್ ಖಾನ್ ಮತ್ತು ಅವರ ಕುಟುಂಬದವರು ವಿವಿಧ ಆಕಾರಗಳಲ್ಲಿ ಸುಂದರವಾದ ಲೋಹದ ಲಾಟೀನುಗಳನ್ನು ಸಿದ್ಧಪಡಿಸಿದ್ದಾರೆ. ಇದರ ಜತೆಗೆ ಮೇಣದ ಬತ್ತಿ ಹೋಲ್ಡರ್, ಸಮಕಾಲೀನ ಸ್ಪರ್ಶದೊಂದಿಗೆ ಪುರಾತನ ಶೈಲಿಯ ಸೀಮೆಎಣ್ಣಿ ದೀಪಗಳೂ ಇಲ್ಲಿ ಸಿಗುತ್ತವೆ. ಫಿರೋಜಾಬಾದ್‌ ಕಲಾವಿದರು ಸಿದ್ಧಪಡಿಸಿರುವ ಗಾಜಿನ ಬಣ್ಣದ ಕನ್ನಡಕ, ಮೇಣದ ಬತ್ತಿ, ಟೀ ಲೈಟ್‌ಗಳು ಇಲ್ಲಿ ದೊರೆಯುತ್ತವೆ.

ಮಣ್ಣಿನ ದೀಪಗಳು

ಗುಜರಾತಿನ ಕಛ್‌ ಪ್ರಾಂತ್ಯದಲ್ಲಿ ಮಹಿಳಾ ಕಲಾವಿದರು

ಜೇಡಿಮಣ್ಣಿನಿಂದ ಸಿದ್ಧಪಡಿಸಿರುವ ಆಕರ್ಷಕ ಟೆರಾಕೋಟಾ ಲಾಟೀನುಗಳು, ಕರ್ನಾಟಕದ ಕಲಾವಿದರಾದ ಅನಿತಾ ಸಿಂಗ್‌ ಚಿತ್ರಸಿದ ಕುಂಬಾರ ಲಕ್ಷ್ಮಿನಾರಾಯಣ ಅವರು ಸಿದ್ಧಪಡಿಸಿರುವ ಕೆಂಪು ಮಣ್ಣಿನ ಟೆರಾಕೋಟಾದ ಕಂದೀಲು ಆಕರ್ಷಕವಾಗಿದೆ. ಅದರ ಜತೆಗೆ ವಿಭಿನ್ನ ಆಕಾರಗಳ ಮತ್ತು ಗಾತ್ರಗಳ ತೋರಣಗಳು, ವರ್ಣಮಯ ಮಣ್ಣಿನ ಮುಖವಾಡಗಳು ಗಮನ ಸೆಳೆಯುತ್ತವೆ.

ಬೆಂಗಳೂರಿನ ಕಲಾವಿದರು ಮತ್ತು ಸ್ವಸಹಾಯ ಮಹಿಳಾ ಗುಂಪುಗಳಿಂದ ಚಿತ್ರಿಸಿದ ಪಾಂಡಿಚೇರಿಯ ತೈಲ ದೀಪಗಳು ಸಹ ಇಲ್ಲಿ ಲಭ್ಯವಿವೆ. ಕಲಾವಿದೆ ಪೂರ್ಣಿಮಾ ಅವರು ಸಿದ್ಧಪಡಿಸಿರುವ ವಿವಿಧ ಟೆರಾಕೋಟಾ ಆಭರಣಗಳು, ಮಧುರೆಯ ಮಣ್ಣಿನ ದಸರಾ ಗೊಂಬೆಗಳು, ಕೋಂಡಂಪಲ್ಲಿಯ ಮರದ ಗೊಂಬೆಗಳು, ರಾಜಸ್ಥಾನದ ಮಾರ್ಬಲ್ ಗೊಂಬೆಗಳು ಸಹ ಇಲ್ಲಿ ಪ್ರದರ್ಶನಕ್ಕಿವೆ.

ಕಾಗದದ ಕಲಾಕೃತಿಗಳು: ಗ್ರಾಮೀಣ ಕುಶಲಕರ್ಮಿಗಳು ಕಾಗದದಲ್ಲಿ ಸಿದ್ಧಪಡಿಸಿರುವ ರಾಜಸ್ಥಾನದ ವಿವಿಧ ಸಾಂಪ್ರದಾಯಿಕ ವಸ್ತುಗಳು, ಚೀಲಗಳು ಹಾಗೂ ಸೆಣಬಿನಲ್ಲಿ ಸಿದ್ಧಪಡಿಸಿರುವ ಪೆನ್ಸಿಲ್‌ ಪೌಚ್‌ಗಳು, ಪರ್ಸ್‌ಗಳು, ಊಟದ ಮತ್ತು ಶಾಪಿಂಗ್‌ ಬ್ಯಾಗ್‌ಗಳು ದೊರೆಯುತ್ತವೆ.

ಕಲಾವಿದ ಚಂದ್ರಮೌಳಿ ಅವರು ಸೆರಾಮಿಕ್ಸ್‌ ಮತ್ತು ಗಾಜು ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸಿ ಸಿದ್ಧಪಡಿಸಿರುವ ವಿವಿಧ ಕಲಾ ಪ್ರಕಾರಗಳು ಇಲ್ಲಿ ಲಭ್ಯ. ವಿವಿಧ ಅವತಾರಗಳಲ್ಲಿ ಚಿತ್ರಿಸಲಾಗಿರುವ ಹಿಂದೂ ದೇವತೆಗಳು, ಕಲ್ಲಿನ ಭಿತ್ತಿಚಿತ್ರಗಳ ಕಲಾಕೃತಿಗಳು ಪ್ರದರ್ಶನದಲ್ಲಿವೆ.

ವರ್ಣಚಿತ್ರಗಳು‌: ಕಲಾವಿದ ಅಮಿತ್ ಹಿರೇಮಠ್ ಜಲವರ್ಣ ಚಿತ್ರಗಳು, ಸುವರ್ಣ ಕಾಮಾಕ್ಷಿ ಅವರ ತೈಲ ವರ್ಣ ಚಿತ್ರಗಳು ಹಾಗೂ ಸುಗಂಧ ದ್ರವ್ಯಗಳು ಲಭ್ಯವಿವೆ ಎನ್ನುತ್ತಾರೆ ತಮಾಲಾದ ಸಹ ಸ್ಥಾಪಕ ವಿನಯ್‌ ಪ್ರಶಾಂತ್‌.

***

3000 ಕಲಾಕೃತಿಗಳ ಪ್ರದರ್ಶನ

ಕಾರ್ಪೊರೇಟ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವಿನಯ್‌ ಪ್ರಶಾಂತ್‌, ಮೂರು ವರ್ಷದ ಹಿಂದೆ ಜೆ.ಪಿ.ನಗರದಲ್ಲಿ ತಮಾಲಾ ಚಿತ್ರಕಲಾ ಗ್ಯಾಲರಿ ತೆರೆದರು. ಗ್ರಾಮೀಣ ಕರಕುಶಲ ಕರ್ಮಿಗಳು ಸಿದ್ಧಪಡಿಸುವ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸುವುದು ಈ ಗ್ಯಾಲರಿಯ ಉದ್ದೇಶ. ಗ್ಯಾಲರಿಯಲ್ಲಿ 15 ರಾಜ್ಯಗಳ ಕಲಾವಿದರು, ಕರಕುಶಲ ಕರ್ಮಿಗಳು ಸಿದ್ಧಪಡಿಸಿದ 3,000ಕ್ಕೂ ಹೆಚ್ಚು ಕಲಾಕೃತಿಗಳು ಇಲ್ಲಿ ಲಭ್ಯವಿವೆ.

‘ಎಲ್ಲ ಭಾರತೀಯ ಹಬ್ಬಗಳ ಸಂದರ್ಭದಲ್ಲಿ ವಿಷಯಾಧಾರಿತ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಕಲಾವಿದರು ಮತ್ತು ಗ್ರಾಹಕರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಇಲ್ಲಿನ ವಹಿವಾಟಿನಲ್ಲಿ ಶೇ 75ರಷ್ಟು ಕರಕುಶಲ ಕರ್ಮಿಗಳಿಗೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇಲ್ಲಿ ₹ 30ರಿಂದ ₹ 2000ದವರಿಗಿನ ಬೆಲೆಯ ಪದಾರ್ಥಗಳು ಲಭ್ಯ’ ಎಂದು ವಿನಯ್‌ ತಿಳಿಸುತ್ತಾರೆ.

––––

ಸ್ಥಳ: ತಮಾಲಾ ಚಿತ್ರಕಲಾ ಗ್ಯಾಲರಿ, ನಂ .35, 1 ನೇ ಮಹಡಿ, 24 ನೇ ಮುಖ್ಯ ರಸ್ತೆ, 7 ನೇ ಹಂತ, ಜೆ.ಪಿ.ನಗರ, ಬೆಂಗಳೂರು- 560078

ಪ್ರದರ್ಶನದ ಕೊನೆಯ ದಿನ : ನವೆಂಬರ್‌ 8

ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆ

ಸಂಪರ್ಕ: 8884816333

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT