ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಟಿಡಿಆರ್‌ಸಿ ವಿತರಣೆ: ತನಿಖೆಗೆ ಒಪ್ಪಿಗೆಯೇ ಸಿಕ್ಕಿಲ್ಲ!

ಹೊರಮಾವು– ಟಿ.ಸಿ. ರಸ್ತೆ ವಿಸ್ತರಣೆ:
Last Updated 22 ಮೇ 2020, 2:06 IST
ಅಕ್ಷರ ಗಾತ್ರ

ಬೆಂಗಳೂರು: ಹೊರಮಾವು– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಗಳಿಗೆ ಪರ್ಯಾಯವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರಗಳನ್ನು (ಟಿಡಿಆರ್‌ಸಿ) ಅಕ್ರಮವಾಗಿ ವಿತರಿಸಿದ ಪ್ರಕರಣದಲ್ಲಿ ಬಿಬಿಎಂಪಿಯ ಕೆಲವು ಅಧಿಕಾರಿಗಳು ಭಾಗಿಯಾಗಿರುವುದನ್ನು ಎಸಿಬಿ ತನಿಖೆ ಬಯಲಿಗೆಳೆದಿದೆ.

ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕೌದೇನಹಳ್ಳಿಯ ಸರ್ವೆ ನಂಬರ್‌ 132ರ ಜಮೀನಿಗೆ ಬದಲಾಗಿ ಅದರ ಮೂಲ ಮಾಲೀಕರಿಗೆ ವಿತರಿಸಲಾದ ಟಿಡಿಆರ್‌ಸಿಯನ್ನು ಮಧ್ಯವರ್ತಿಗಳು, ರಿಯಲ್‌ ಎಸ್ಟೇಟ್‌ ಕಂಪನಿಯ ಮಾಲೀಕರು ₹ 27.60 ಕೋಟಿಗೆ 12 ಕಂಪನಿಗಳಿಗೆ ಮಾರಿರುವ ಸಂಗತಿಯನ್ನೂ ಎಸಿಬಿ ಪತ್ತೆ ಹಚ್ಚಿದೆ.

ಈ ಜಮೀನನ್ನು ಮೂಲ ಮಾಲೀಕರಾದ ಮುನಿರಾಜಪ್ಪ ಮತ್ತು ಕುಟುಂಬದವರು 1989ರಲ್ಲೇ ಅಭಿವೃದ್ಧಿ ಮಾಡಿ, ನಿವೇಶನಗಳಾಗಿ ಪರಿವರ್ತಿಸಿ ಮಾರಿದ್ದಾರೆ. ಈ ಸಂಗತಿಯನ್ನು ಮರೆಮಾಚಿ, ಕೆಲ ಮಧ್ಯವರ್ತಿಗಳು, ರಿಯಲ್‌ ಎಸ್ಟೇಟ್‌ ಕಂಪನಿಯವರು ಮುನಿರಾಜಪ್ಪ ಅವರಿಂದ ಟಿಡಿಆರ್‌ಸಿಗೆ ಅರ್ಜಿ ಹಾಕಿಸಿದ್ದರು. ಬಿಬಿಎಂಪಿಯ ಕೆಲವು ಅಧಿಕಾರಿಗಳು ಶಾಮೀಲಾಗಿ ಅಕ್ರಮ ಟಿಡಿಆರ್‌ಸಿ ವಿತರಿಸಿರುವುದು ಎಸಿಬಿಯ ತನಿಖೆಯಿಂದ ಸಾಬೀತಾಗಿದೆ.

ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ (ನಿವೃತ್ತ), ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತ ಕೆ.ಎನ್‌.ದೇವರಾಜ್ (ನಿವೃತ್ತ)‌, ಸಹಾಯಕ ಆಯುಕ್ತರಾದ ಎಚ್‌.ಆರ್‌.ಗೀತಾ, ಟಿಡಿಆರ್‌ಸಿ ತಹಶೀಲ್ದಾರ್ ಎಸ್‌.ಎನ್.ರಾಜೇಶ್ವರಿ, ವಿಶೇಷ ಭೂಸ್ವಾಧೀನ ಅಧಿಕಾರಿ ಎಸ್‌.ಎಂ.ಮಂಗಳಾ ಹಾಗೂ ಉಪ ಆಯುಕ್ತರಾದ ಕೆ. ಲೀಲಾವತಿ ವಿರುದ್ಧ ತನಿಖೆ ನಡೆಸಲು ಒಪ್ಪಿಗೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎಸಿಬಿ ಜನವರಿ 21ರಂದು ಪತ್ರ ಬರೆದಿದೆ. ಆದರೆ, ಇದುವರೆಗೂ ಒಪ್ಪಿಗೆ ಸಿಕ್ಕಿಲ್ಲ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಸ್ತೆ ವಿಸ್ತರಣೆ ಯೋಜನೆಗೆ ಒಳಪಡದ ಕೆಲವು ಕಟ್ಟಡಗಳಿಗೂ ಅಕ್ರಮವಾಗಿ ಟಿಡಿಆರ್‌ಸಿ ನೀಡಲಾಗಿದೆ. ನೆಲ + ಒಂದು ಮಹಡಿ ಕಟ್ಟಡಗಳನ್ನು ನೆಲ+ ಮೂರು ಮಹಡಿಯ ಕಟ್ಟಡಗಳೆಂದು ತೋರಿಸಿ, ಕೋಟ್ಯಂತರ ರೂಪಾಯಿ ಮೌಲ್ಯ ನಿಗದಿಪಡಿಸಿ ಪ‍್ರತಿಯಾಗಿ ಟಿಡಿಆರ್‌ಸಿ (002924 ಮತ್ತು 002958) ವಿತರಿಸಿರುವುದು ದೃಢಪಟ್ಟಿದೆ. ಕೆಳಗಿನ ಅಧಿಕಾರಿಗಳು ಸಲ್ಲಿಸಿದ ಕಡತಗಳನ್ನು ಪರಿಶೀಲಿಸದೆ ಹಿರಿಯ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ದೇವರಾಜು, ಸರ್ಕಾರಿ ಸುತ್ತೋಲೆಗಳಲ್ಲಿನ ಷರತ್ತುಗಳು ಪಾಲನೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳದೆ, ಕಾನೂನು ಬಾಹಿರವಾಗಿ ಟಿಡಿಆರ್‌ಸಿ ವಿತರಣೆ ಮಾಡಲು ಕಡತ ಮಂಡಿಸಿದ್ದಾರೆ. ಟಿಡಿಆರ್‌ಸಿಯನ್ನು ಕ್ರಯದಾರರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಗೀತಾ, ರಾಜೇಶ್ವರಿ, ಮಂಗಳಾ ಹಾಗೂ ಲೀಲಾವತಿ ಅವರೂ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದ್ದಾರೆ ಎಂದು ಎಸಿಬಿ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಅಕ್ರಮ ಟಿಡಿಆರ್‌ಸಿ ವಿತರಣೆ ಪ್ರಕರಣದಲ್ಲಿ ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣ ಲಾಲ್‌ ಅವರನ್ನು ಹಿಂದೆಯೇ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT