ಶಿಕ್ಷಕರ ನೇಮಕಾತಿ: ಮುಂದುವರಿದ ಗೊಂದಲ

7

ಶಿಕ್ಷಕರ ನೇಮಕಾತಿ: ಮುಂದುವರಿದ ಗೊಂದಲ

Published:
Updated:

ಬೆಂಗಳೂರು: ಹಿರಿಯ ಪ್ರಾಥಮಿಕ ಶಾಲೆಗಳಿಗೆ 10 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಇತ್ತೀಚೆಗಷ್ಟೆ ಪ್ರಕಟಿಸಿದ್ದ ಆಯ್ಕೆ ಪಟ್ಟಿಯ ಗೊಂದಲಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

ದತ್ತಾಂಶ ಸಿದ್ಧಪಡಿಸುವಾಗ ಆಗಿರುವ ತಪ್ಪಿನಿಂದ ಕೆಲವು ಅನರ್ಹರ ಹೆಸರು ಪಟ್ಟಿಯಲ್ಲಿ ಸೇರಿವೆ ಎಂದು ಇಲಾಖೆಯೇ ಒಪ್ಪಿಕೊಂಡಿದೆ. ತಪ್ಪು ತಿದ್ದಲು ಮುಂದಾಗಿರುವ ಇಲಾಖೆ, ಹೊಸ ತಂಡದ ಮೂಲಕ ಆಯ್ಕೆ ಪಟ್ಟಿಯನ್ನು ಮರು ಪರಿಶೀಲಿಸಲು ಮುಂದಾಗಿದೆ. ಇದು ಅಭ್ಯರ್ಥಿಗಳಲ್ಲಿ ಮತ್ತಷ್ಟು ಗೊಂದಲಗಳನ್ನು ಹುಟ್ಟು ಹಾಕುವ ಸಾಧ್ಯತೆ ಹೆಚ್ಚಿದೆ.

‘ಸದ್ಯ ಎನ್‌ಐಸಿಯ (ನ್ಯಾಷನಲ್ ಇನ್‌ಫರ್ಮೇಶನ್ ಸೆಂಟರ್) ಒಂದು ತಂಡ ದತ್ತಾಂಶ ನಿರ್ವಹಣೆ ಕೆಲಸ ಮಾಡುತ್ತಿದೆ. ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿ, ಹೊಸ ಪಟ್ಟಿ ಸಿದ್ಧಪಡಿಸಿದ್ದೇವೆ. ಮತ್ತೆ ಇದರಲ್ಲಿ ದೋಷಗಳು ಇರಬಾರದು ಎಂಬ ಕಾರಣಕ್ಕೆ ಪಟ್ಟಿಯನ್ನು ಸಂಪೂರ್ಣ ಮರು ಪರಿಶೀಲಿಸಲು ಹೊಸ ತಂಡವನ್ನು ನೀಡಿ ಎಂದು ಎನ್‌ಐಸಿಯನ್ನು ಕೋರಿದ್ದೇವೆ. ಇನ್ನೊಂದು ದಿನದಲ್ಲಿ ಹೊಸ ಪಟ್ಟಿ ಪ್ರಕಟಿಸುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಎಂ.ಟಿ. ರೇಜು ತಿಳಿಸಿದರು.

ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿ: ಈ ಬಾರಿ ಸಿಇಟಿಯಲ್ಲಿ 100 ಅಂಕಗಳ ಲಿಖಿತ ಪರೀಕ್ಷೆ ಹಾಗೂ 50 ಅಂಕಗಳಿಗೆ ಬಹು ಆಯ್ಕೆ ಪ್ರಶ್ನೆಗಳಿದ್ದವು. ಸದ್ಯ ಬಹು ಆಯ್ಕೆ ಪ್ರಶ್ನೆಗಳ ಕೀ ಉತ್ತರಗಳನ್ನು ಮಾತ್ರ ಇಲಾಖೆ ಪ್ರಕಟಿಸಿದೆ. ಇದೇ ಮೊದಲ ಬಾರಿ ಲಿಖಿತ ಪರೀಕ್ಷೆ ನಡೆಸಿದ್ದರಿಂದ, ಯಾವ ರೀತಿ ಮೌಲ್ಯಮಾಪನ ಮಾಡಲಾಗಿದೆ ಎಂಬುದಕ್ಕೆ ಕೀ ಉತ್ತರಗಳನ್ನು ಪ್ರಕಟಿಸಬೇಕು ಎಂದು ಕೆಲವು ನೊಂದ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

‘ಬಹು ಆಯ್ಕೆಯ ಪರೀಕ್ಷೆಯಲ್ಲಿ 48 ಅಂಕಗಳಿಗೆ 40 ಅಂಕಗಳು ಲಭಿಸಿದೆ ಎನ್ನುವುದು ಕೀ ಉತ್ತರಗಳಿಂದ ತಿಳಿದಿದೆ. ಆದರೆ, ಲಿಖಿತ ಪರೀಕ್ಷೆಯಲ್ಲಿ 100ಕ್ಕೆ 60 ಅಂಕಗಳನ್ನು ಹೇಗೆ ನೀಡಿದ್ದಾರೆ ಎನ್ನುವುದು ತಿಳಿಯಬೇಕಾಗಿದೆ. ಪರೀಕ್ಷೆ ಚೆನ್ನಾಗಿ ಬರೆದಿರುವ ಭರವಸೆ ನನಗಿದೆ. ನನ್ನ ಪ್ರಕಾರ 80 ಅಂಕಗಳು ಸಿಗಬೇಕಿತ್ತು. ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಒದಗಿಸಿ, ಮರುಮೌಲ್ಯಮಾಪನಕ್ಕೆ ಅವಕಾಶ ನೀಡಲು ಇಲಾಖೆ ಮುಂದಾಗಬೇಕು’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕ್ರಿಯೆ ಮುಗಿಯುವವರೆಗೂ ಅಸಾಧ್ಯ: ‘ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಮಾದರಿಯಲ್ಲಿ ನಾವು ಪರೀಕ್ಷೆಯನ್ನು ಆಯೋಜಿಸಿದ್ದೇವೆ. ಪರೀಕ್ಷೆ ಪ್ರಕ್ರಿಯೆ ಮುಗಿಯುವವರೆಗೂ ಉತ್ತರ ಪತ್ರಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹಿಂದೆಯೇ   ಹೇಳಲಾಗಿದೆ ’ ಎಂದು ಆಯುಕ್ತ ರೇಜು ಸ್ಪಷ್ಟಪಡಿಸಿದರು.

‘ಲಿಖಿತ ಪರೀಕ್ಷೆಗೆ ಕೀ ಉತ್ತರಗಳು ಎನ್ನುವುದು ಇರುವುದಿಲ್ಲ. ಮೌಲ್ಯಮಾಪಕರು ಹಾಗೂ ಪರೀಕ್ಷೆ ಆಯೋಜಿಸಿದ ಸಂಸ್ಥೆಯು ಕೆಲವೊಂದು ಮಾರ್ಗಸೂಚಿ ಆಧರಿಸಿ, ಇಂತಿಷ್ಟು ಅಂಕಗಳನ್ನು ನೀಡಬೇಕು ಎಂದು ನಿಗದಿಗೊಳಿಸುತ್ತದೆ. ಇಬ್ಬರು ಮೌಲ್ಯಮಾಪನ ಮಾಡುತ್ತಾರೆ. ಅದರಲ್ಲಿ ಶೇ 15ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಯ ಕಂಡುಬಂದರೆ 3ನೇ ಮೌಲ್ಯಮಾಪನ ನಡೆಯುತ್ತದೆ. ಹೀಗಾಗಿ ಎಲ್ಲವೂ ಕ್ರಮಬದ್ಧವಾಗಿ ನಡೆದಿದೆ’ ಎಂದು ಅವರು ಪ್ರತಿಪಾದಿಸಿದರು.

‘ನಾವು ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ. ನಮ್ಮ ಬಳಿಯಿದ್ದ ಎಲ್ಲಾ 60 ಸಾವಿರ ಅಭ್ಯರ್ಥಿಗಳ ದತ್ತಾಂಶಗಳನ್ನು ಪ್ರಕಟಿಸಿದ್ದೇವೆ. ಈಗ ಮತ್ತೊಮ್ಮೆ ಆ ದತ್ತಾಂಶಗಳನ್ನು ಪ್ರಕಟಿಸಲಿದ್ದೇವೆ’ ಎಂದರು. 

ಮರುಪರೀಕ್ಷೆಗೆ ಆಗ್ರಹ

ಮೌಲ್ಯಮಾಪನದ ವೇಳೆ ಇಲಾಖೆ ಸಾಕಷ್ಟು ಎಡವಟ್ಟುಗಳನ್ನು ಮಾಡಿದೆ ಎಂಬುದು ಈಗಾಗಲೇ ಖಾತ್ರಿಯಾಗಿದೆ. ಇದರಿಂದ ಅರ್ಹತೆಯಿದ್ದರೂ ಅನೇಕರು ಆಯ್ಕೆಯಾಗದೆ ವಂಚಿತರಾಗಿದ್ದಾರೆ. ಅಲ್ಲದೆ, ಹುದ್ದೆಗಳ ಸಂಖ್ಯೆಗಿಂತ ಆಯ್ಕೆಯಾಗಿರುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಇಲಾಖೆ ಮತ್ತೊಮ್ಮೆ ಪರೀಕ್ಷೆ ನಡೆಸಲೇಬೇಕು ಎಂದು ನೊಂದ ಅಭ್ಯರ್ಥಿಗಳು ಆಗ್ರಹಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !