ವರ್ಗಾವಣೆಗಾಗಿ ಶಿಕ್ಷಕರ ಧರಣಿ ನಾಳೆ

7

ವರ್ಗಾವಣೆಗಾಗಿ ಶಿಕ್ಷಕರ ಧರಣಿ ನಾಳೆ

Published:
Updated:

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಮತ್ತು ವರ್ಗಾವಣೆ ಕಾಯ್ದೆಯಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನ.9ರಂದು ಧರಣಿ ನಡೆಸಲು ನಿರ್ಧರಿಸಿದೆ.

‘ವರ್ಗಾವಣೆಯ ಕೌನ್ಸೆಲಿಂಗ್‌ ಈ ವರ್ಷವೇ ಮುಗಿಸಬೇಕು. ವರ್ಗಾವಣೆಗೊಂಡ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆಯಾ ಶಾಲೆಗಳಿಗೆ ನಿಯೋಜಿಸಬೇಕು. ಜತೆಗೆ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿನ ಅವೈಜ್ಞಾನಿಕ ನಿಯಮಗಳನ್ನು ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಾಡಬೇಕು’ ಎಂದೂ ಹೋರಾಟ ಸಮಿತಿ ಒತ್ತಾಯಿಸಿದೆ.

ಸದ್ಯ ಶೇ.20ರಷ್ಟು ಶಿಕ್ಷಕರ ಕೊರತೆ ಇರುವ ತಾಲ್ಲೂಕುಗಳನ್ನು ವರ್ಗಾವಣೆ ಪ್ರಕ್ರಿಯೆಯಿಂದ ಹೊರಗಿಡಬೇಕು ಹಾಗೂ ಹೈದರಾಬಾದ್‌ ಕರ್ನಾಟಕದಲ್ಲಿ ಕಡ್ಡಾಯವಾಗಿ 10 ವರ್ಷ ಸೇವೆ ಸಲ್ಲಿಸಬೇಕೆಂಬ ನಿಯಮಗಳಿವೆ. ಇವುಗಳನ್ನು ತಿದ್ದುಪಡಿ ಮಾಡಿ, ಎಲ್ಲ ತಾಲ್ಲೂಕುಗಳಲ್ಲಿನ ಶಿಕ್ಷಕರು ಮತ್ತು ಹೈದರಬಾದ್‌ ಕರ್ನಾಟಕದಲ್ಲಿ 2015ಕ್ಕಿಂತ ಮುಂಚೆ ನೇಮಕಾತಿ ಹೊಂದಿರುವ ಶಿಕ್ಷಕರನ್ನೂ ವರ್ಗಾವಣೆಗೆ ಪರಿಗಣಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುವುದಾಗಿ ಸಮಿತಿಯ ಅಧ್ಯಕ್ಷ ಮಾಲತೇಶ ಬಬ್ಬಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆಗಳು: ಸೇವಾ ಜೇಷ್ಠತೆ ಆಧರಿಸಿ ವರ್ಗಾವಣೆ ಮಾಡಬೇಕು. ಗ್ರಾಮಾಂತರದ ‘ಸಿ’ ವಲಯದಿಂದ ಎಲ್ಲ ವಲಯಗಳಿಗೂ ವರ್ಗಾವಣೆ ಪಡೆಯಲು ಅವಕಾಶ ಮಾಡಿಕೊಡಬೇಕು. ಅಂತರ್‌ ಘಟಕ ವರ್ಗಾವಣೆ ಪ್ರಮಾಣವನ್ನು ಶೇ6ಕ್ಕೆ ಹೆಚ್ಚಿಸಬೇಕು. ಅಂತರ್‌ ಘಟಕದಲ್ಲಿ ಕನಿಷ್ಠ ಸೇವಾವಧಿ ಪೂರೈಸಿದ ಶಿಕ್ಷಕರಿಗೆ ಅವರ ಮೂಲ ಜಿಲ್ಲೆಗೆ ವರ್ಗವಾಗಲು ಅವಕಾಶ ಮಾಡಿಕೊಡಬೇಕು.ಈಗಾಗಲೇ ಹೆಚ್ಚುವರಿಯಾದ ಹಿಂದಿ, ದೈಹಿಕ ಶಿಕ್ಷಣ, ಇಂಗ್ಲಿಷ್‌ ವಿಷಯದ ಶಿಕ್ಷಕರಿಗೆ ನಿಯೋಜನಾ ಸ್ಥಳ ಸಿಗದಿರುವ ಕಾರಣ ಈಗಿರುವ ಶಾಲೆಯಲ್ಲಿ ಮುಂದುವರಿಸಲಾಗುತ್ತಿದೆ. ಅದರಂತೆ ಸಾಮಾನ್ಯ ಕನ್ನಡ ಶಿಕ್ಷಕರನ್ನು ಮುಂದುವರಿಸಬೇಕು. ವೈದ್ಯಕೀಯ ಪ್ರಕರಣಗಳನ್ನು ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕು. ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ಕಲ್ಪಿಸಬೇಕು. ಕಡ್ಡಾಯ ವರ್ಗಾವಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.

ನ.13ಕ್ಕೆ ಶೈಕ್ಷಣಿಕ ಸ‌ಮ್ಮೇಳನ: ಶಿಕ್ಷಕರಿಗೆ ರಜೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.13ರಂದು ಆಯೋಜಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನ್ಯ ಕಾರ್ಯನಿಮಿತ್ತ ರಜೆಯನ್ನು ಶಿಕ್ಷಣ ಇಲಾಖೆ ಮಂಜೂರು ಮಾಡಿದೆ.

ಭಾಗವಹಿಸುವ ಶಿಕ್ಷಕರಿಗೆ ಪ್ರಯಾಣಭತ್ಯೆ ಮತ್ತು ದಿನಭತ್ಯೆ ನೀಡುವುದಿಲ್ಲ. ಭಾಗವಹಿಸುವವರು ಹಾಜರಾತಿ ಪ್ರಮಾಣಪತ್ರ ಸಲ್ಲಿಸಬೇಕು. ಶಾಲಾ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಶಾಲೆಯ ಎಲ್ಲ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಿದರೆ, ಆ ದಿನದ ಬೋಧನಾ ಕಾರ್ಯವನ್ನು ಬೇರೊಂದು ದಿನ ನಿರ್ವಹಿಸಬೇಕು ಎಂದು ಷರತ್ತುಗಳನ್ನು ವಿಧಿಸಿ ರಜೆ ನೀಡಿದೆ.

*
ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ, ಪ್ರತಿಭಟನೆಯನ್ನು ಕೈಬಿಡುತ್ತೇವೆ. ಇಲ್ಲದಿದ್ದರೆ, ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ.
-ಮಾಲತೇಶ ಬಬ್ಬಜ್ಜಿ, ಅಧ್ಯಕ್ಷ, ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !