ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ: ‘ವಿಷಯ ತಾರತಮ್ಯ’

ಜೀವವಿಜ್ಞಾನ, ಎಲೆಕ್ಟ್ರಾನಿಕ್ಸ್‌ ಮಾಡಿದವರಿಗೆ ಅವಕಾಶವಿಲ್ಲ: ಅಭ್ಯರ್ಥಿಗಳ ಆಕ್ರೋಶ
Last Updated 10 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪ್ರಾಥಮಿಕ ಶಿಕ್ಷಕ (6ರಿಂದ8 ನೇ ತರಗತಿ) ಹುದ್ದೆಗಳ ನೇಮಕಾತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಕೇವಲ ಪಿಸಿಎಂ (ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ) ಅಧ್ಯಯನ ಮಾಡಿದವರಿಂದ ಮಾತ್ರ ಅರ್ಜಿ ಆಹ್ವಾನಿಸಿರುವುದು ಸಾವಿರಾರು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

10 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಮಾರ್ಚ್‌ 5 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಜೀವ ಶಾಸ್ತ್ರ, ಪ್ರಾಣಿ ಶಾಸ್ತ್ರ, ಕಂಪ್ಯೂಟರ್‌ ಶಾಸ್ತ್ರ, ಎಲೆಕ್ಟ್ರಾನಿಕ್ಸ್‌ ವಿಷಯ ಓದಿದವರಿಗೆ ಅವಕಾಶ ನೀಡಿಲ್ಲ. ಈ ವಿಷಯಗಳ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.

‘ಜೀವ ಶಾಸ್ತ್ರ, ಪ್ರಾಣಿ ಶಾಸ್ತ್ರ, ಕಂಪ್ಯೂಟರ್‌ ಶಾಸ್ತ್ರ, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಬಿಇಡಿ ಮಾಡಿರುವ ನಾವು ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇವೆ. ಅಧಿಸೂಚನೆ ಪ್ರತಿ ನೋಡಿ ಆಘಾತವಾಗಿದೆ. ಟಿಇಟಿ ಪರೀಕ್ಷೆ ಬರೆಯುವಾಗ ಈ ಕುರಿತು ಸುಳಿವು ನೀಡಿರಲಿಲ್ಲ. ಈಗ ಪರೀಕ್ಷೆ ಬರೆಯಿರಿ, ಮುಂದೆ ನೋಡೋಣ ಎಂದರು. ಈಗ ಆತಂಕ ಕಾಡಿದೆ’ ಎಂದುಬಳ್ಳಾರಿಯ ವಿನಾಯಕ ಎಂಬ ಅಭ್ಯರ್ಥಿ ‘ಪ್ರಜಾವಾಣಿ’ ಜತೆ ಆತಂಕ ತೋಡಿಕೊಂಡರು.

‘ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಇದ್ದರೆ, ಕೇಂದ್ರೀಯ ದಾಖಲಾತಿ ವಿಭಾಗ (ಸೆಂಟ್ರಲ್‌ ಅಡ್ಮಿಷನ್‌ ಸೆಲ್‌)ದ ಹೆಲ್ಪ್‌ಲೈನ್‌ಗೆ ಫೋನ್‌ ಮಾಡಲು ವೆಬ್‌ಸೈಟ್‌ನಲ್ಲಿ ಸೂಚಿಸಲಾಗಿದೆ. ಆದರೆ, ಅಲ್ಲಿಗೆ ದೂರವಾಣಿ ಕರೆ ಮಾಡಿದರೆ ಯಾರೊಬ್ಬರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

‘ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಲ್ಲದೆ, ವಿಜ್ಞಾನದ ಬೇರೆ ಶಾಖೆಗಳಲ್ಲಿ ಓದಿದವರಿಗೆ ಅವಕಾಶ ವಂಚಿತ ಮಾಡಿರುವುದು ಸರಿಯಲ್ಲ. ಜೀವ ವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ, ಎಲೆಕ್ಟ್ರಾನಿಕ್ಸ್‌ ವಿಷಯಗಳ ಪದವೀಧರರನ್ನು ಹೊರಗಿಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಮೈಸೂರಿನ ರಾಘವೇಂದ್ರ ಪ್ರಶ್ನಿಸಿದ್ದಾರೆ.

ಅಧಿಸೂಚನೆಯಲ್ಲೇನಿದೆ?
* ಪದವೀಧರ ಪ್ರಾಥಮಿಕ ಶಿಕ್ಷಕ (ಗಣಿತ ಮತ್ತು ವಿಜ್ಞಾನ) ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿಯಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಮೂರು ವರ್ಷ ಅಧ್ಯಯನ ಮಾಡಿರಬೇಕು.

* ಶಿಕ್ಷಣದಲ್ಲಿ ಡಿಪ್ಲೊಮಾ ಅಥವಾ ಪದವಿ ಹಂತದಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಬೋಧನಾ ವಿಷಯವಾಗಿ (ಮೆಥಡಾಲಜಿ) ಅಭ್ಯಾಸ ಮಾಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT