ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಗೆಲುವಿಗೆ ಪಕ್ಷಭೇದ ಮರೆತು ಶ್ರಮಿಸಿ

ಜನತಾ ದಳ (ಜಾತ್ಯತೀತ), ಬಹುಜನ ಸಮಾಜ ಪಕ್ಷದ ಸಭೆಯಲ್ಲಿ ಮುಖಂಡರ ಮನವಿ
Last Updated 10 ಮಾರ್ಚ್ 2018, 5:50 IST
ಅಕ್ಷರ ಗಾತ್ರ

ಬೀದರ್: ಕಾಂಗ್ರೆಸ್ ಜಾತಿಯನ್ನು ಒಡೆದು ರಾಜಕೀಯ ಮಾಡಿದರೆ, ಬಿಜೆಪಿ ಧರ್ಮ ಒಡೆದು ರಾಜಕೀಯ ಮಾಡುತ್ತಿದೆ. ಜಾತ್ಯತೀತ ಮೌಲ್ಯಗಳಿಗೆ ಒತ್ತುಕೊಡಲು ಮತದಾರರು ಈ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಆದ್ದರಿಂದ ಮೈತ್ರಿಯ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಪಕ್ಷಭೇದ ಮರೆತು ಶ್ರಮಿಸಬೇಕು ಎಂದು ಜೆಡಿಎಸ್‌ ಹಾಗೂ ಬಿಎಸ್‌ಪಿ ಮುಖಂಡರು ಒಕ್ಕೊರಲ ಮನವಿ ಮಾಡಿದರು.

ನಗರದ ಎಸ್‌ಆರ್‌ಎಸ್‌ ಫಂಕ್ಷನ್‌ ಹಾಲ್‌ನಲ್ಲಿ ಶುಕ್ರವಾರ, ವಿಧಾನಸಭಾ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿರುವ ಜನತಾ ದಳ (ಜಾತ್ಯತೀತ ) ಹಾಗೂ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಈ ಮನವಿ ಮಾಡಿದರು.

ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒತ್ತು ಕೊಡಬೇಕು. ಕೋಮುವಾದಿ ಹಾಗೂ ಜಾತಿವಾದಿ ಪಕ್ಷಗಳಿಂದ ದೇಶದ ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದೆ. ಜೆಡಿಎಸ್‌ ಹಾಗೂ ಬಿಎಸ್‌ಪಿಗೆ ತನ್ನದೇ ಆದ ಮತಬ್ಯಾಂಕ್‌ ಇದೆ. ಒಗ್ಗಟ್ಟಿನ ಪ್ರದರ್ಶನದ ಮೂಲಕ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪ್ರತಿಯೊಬ್ಬರು ಪರಿಶ್ರಮ ಪಡಬೇಕಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ‘ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಬಿ.ಎಸ್.ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ನಿರಾಕರಿಸಿದ್ದರು. ಕಾಂಗ್ರೆಸ್‌ ಜಾಹೀರಾತುಗಳನ್ನು ನೋಡಿದರೆ 22 ಲಕ್ಷ ರೈತರ ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಶೇಕಡ 20ರಷ್ಟೂ ಸಾಲ ಮನ್ನಾ ಮಾಡಿಲ್ಲ’ ಅಸಮಾಧಾನ ವ್ಯಕ್ತಪಡಿಸಿದರು.
‘ಚುನಾವಣೆಯಲ್ಲಿ ಜೆಡಿಎಸ್‌, ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದ 20 ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಲಾಗಿದೆ. ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪರಿಶ್ರಮ ಪಡಬೇಕು’ ಎಂದು ಮನವಿ ಮಾಡಿದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಮಾತನಾಡಿ, ‘ಕಾಂಗ್ರೆಸ್ ದಲಿತರು ಹಾಗೂ ಮುಸ್ಲಿಂರನ್ನು ಮತಬ್ಯಾಂಕ್‌ ಆಗಿ ಬಳಸಿಕೊಂಡಿದೆ. ಕಾಂಗ್ರೆಸ್‌ 60 ವರ್ಷ ಅಧಿಕಾರದಲ್ಲಿದ್ದರೂ ಶೇಕಡ 90ರಷ್ಟು ದಲಿತರ ಸ್ಥಿತಿ ಸುಧಾರಿಸಿಲ್ಲ. ಶೇಕಡ 95ರಷ್ಟು ಅಲ್ಪಸಂಖ್ಯಾತರು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ದೇಶದಲ್ಲಿ ಹಿಂದುಳಿದವರ ಜನಸಂಖ್ಯೆ ಶೇಕಡ 50 ರಷ್ಟು ಇದ್ದರೂ ಅವರ ಪ್ರಗತಿ ಸಾಧ್ಯವಾಗಿಲ್ಲ’ ಎಂದು ಆರೋಪಿಸಿದರು.

‘ಕಂಬಾಲಪಲ್ಲಿಯಲ್ಲಿ ಏಳು ಜನ ದಲಿತರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿ ದಹಿಸಲಾಯಿತು. ಆದರೆ ಆರೋಪಿಗಳಿಗೆ ಶಿಕ್ಷೆ ಆಗಲಿಲ್ಲ. ಇವತ್ತಿಗೂ ದಲಿತರು ಹಾಗೂ ಮುಸ್ಲಿಂರಿಗೆ ರಕ್ಷಣೆ ಇಲ್ಲ’ ಎಂದು ತಿಳಿಸಿದರು.

‘ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಮುಸ್ಲಿಂರ ಮೇಲೆ ಹಲ್ಲೆ ಮುಂದುವರಿದಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅಶಾಂತಿ ಉಂಟು ಮಾಡಲಾಗುತ್ತಿದೆ. ದೇಶದಲ್ಲಿ ಶಾಂತಿ ನೆಲಸಬೇಕಾದರೆ ಮತದಾರರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.
‘ಬೀದರ್‌ ಕ್ಷೇತ್ರವನ್ನು ಮಾತ್ರ ಬಿಎಸ್‌ಪಿಗೆ ಬಿಟ್ಟುಕೊಡಲಾಗಿದೆ. ಜಿಲ್ಲೆಯ ಉಳಿದ ಐದು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ’ ಎಂದು ತಿಳಿಸಿದರು.

ಮಾಜಿ ಸಚಿವೆ ಶಿವಕಾಂತಾ ಚತುರೆ, ನಸಿಮೋದ್ದಿನ್ ಪಟೇಲ್, ಐಲಿನ್‌ಜಾನ್ ಮಠಪತಿ, ವಿಠ್ಠಲ ನಾಯಕ್‌ ಮಾತನಾಡಿದರು.
ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ರಾಜ್ಯ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ, ಅಶೋಕಕುಮಾರ ಕರಂಜಿಿ, ರಾಜಶೇಖರ ಜವಳೆ, ಶಿವರಾಜ ಹುಲಿ, ಅಶೋಕ ಪಾಟೀಲ ಸಂಗೋಳಗಿ, ಕೇಶಪ್ಪ ಬಿರಾದಾರ, ಭಾಸ್ಕರ ಬಾಬು ಪಾತರಪಳ್ಳಿ, ಪಿ.ಜೆ.ಜೋಶಪ್ಪ, ಅಶೋಕ ಕೋಡಗೆ, ತನುಜಾ ಧುಮಾಳೆ, ಲಕ್ಷ್ಮಣರಾವ್ ಬೂದೆ, ಅಸುದೋದ್ದಿನ್, ಅಶೋಕ ಕೋಡಗೆ ಇದ್ದರು.

**

ಬಿ.ಎಸ್‌.ಯಡಿಯೂರಪ್ಪ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ್ದು ಪ್ರಚಾರಕ್ಕಾಗಿಯೇ ಹೊರತು ಅವರ ಬಗೆಗಿನ ಕಳಕಳಿಯಿಂದಲ್ಲ.

ಮಾರಸಂದ್ರ ಮುನಿಯಪ್ಪ, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT