ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ಕೊನೆಗೂ ಶುರು

Last Updated 16 ಅಕ್ಟೋಬರ್ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಇಲಾಖೆಯ ತಂತ್ರಾಂಶದಲ್ಲಿನ ದೋಷ, ಶಿಕ್ಷಕರ ಆರೋಪ ಮತ್ತು ಅಧಿಕಾರಿಗಳ ಸಮಜಾಯಿಷಿ ನಡುವೆ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್‌ ಮಂಗಳವಾರ ಕೊನೆಗೂ ಆರಂಭವಾಯಿತು.

ಕೌನ್ಸೆಲಿಂಗ್‌ಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಮತ್ತು ಉಪನಿರ್ದೇಶಕರ(ಡಿಡಿಪಿಐ) ಕಚೇರಿಗಳಿಗೆ ಬೆಳಿಗ್ಗೆ 10 ಗಂಟೆಗೆ ಬಂದ ಶಿಕ್ಷಕರು ಕಾದು ಕುಳಿತಿದ್ದರು. ಮಧ್ಯಾಹ್ನ 2 ಗಂಟೆಯಾದರೂ ತಂತ್ರಾಂಶ ದೋಷ ನಿವಾರಣೆ ಆಗದ ಕಾರಣ, ಪ್ರಕ್ರಿಯೆ ಆರಂಭವಾಗಲಿಲ್ಲ. ನಂತರ ಒಂದೊಂದೇ ಜಿಲ್ಲೆಗಲ್ಲಿನ ಸಮಸ್ಯೆಯನ್ನು ತಂತ್ರಜ್ಞರು ಸರಿಪಡಿಸಿದರು.

ಸುಮಾರು 3 ಗಂಟೆಯ ಹೊತ್ತಿಗೆ ವಿಜಾಪುರ, ಬೆಳಗಾವಿ, ಬಳ್ಳಾರಿ, ರಾಯಚೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕೌನ್ಸೆಲಿಂಗ್‌ ಆರಂಭವಾಯಿತು. ಕೆಲವು ಕಡೆ ರಾತ್ರಿ 7 ಗಂಟೆಯವರೆಗೂ ನಡೆಯಿತು.

‘ಮೈಸೂರು ಜಿಲ್ಲೆಯಲ್ಲಿ ತಾಂತ್ರಿಕ ಸಮಸ್ಯೆಗೆ ಇನ್ನೂ ಪರಿಹಾರ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೌನ್ಸೆಲಿಂಗ್‌ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ’ ಎಂದು ಶಿಕ್ಷಕ ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದರು.‌

‘ಇಲಾಖೆಯ ಸಿಬ್ಬಂದಿ ಎಲ್ಲ ತಾಂತ್ರಿಕ ತಯಾರಿ ಮಾಡಿಕೊಂಡೇ ಕೌನ್ಸೆಲಿಂಗ್‌ ನಡೆಸಬೇಕು’ ಎಂಬುದು ಬಹುತೇಕರ ಒತ್ತಾಯವಾಗಿತ್ತು.

ಹಲವು ಕೌನ್ಸೆಲಿಂಗ್‌ ಕೇಂದ್ರಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡದಿರುವುದಕ್ಕೆ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

‘ದಸರಾ ರಜೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಬಾರದಿತ್ತು. ರಜಾ ದಿನಗಳನ್ನು ಕುಟುಂಬ ಸದಸ್ಯರೊಂದಿಗೆ ಕಳೆಯಲು ಆಗಲಿಲ್ಲ’ ಎಂದು
ದೇವನಹಳ್ಳಿಯ ಶಿಕ್ಷಕಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಯು ಸುಮಾರು 6 ಸಾವಿರ ಶಿಕ್ಷಕರನ್ನು ಹೆಚ್ಚುವರಿ ಎಂದು ಪಟ್ಟಿಮಾಡಿದೆ. ಬಿಇಒ ಕಚೇರಿಗಳಲ್ಲಿ ಸೋಮವಾರದಿಂದಲೇ ಆರಂಭವಾಗಬೇಕಿದ್ದ ಕೌನ್ಸೆಲಿಂಗ್‌ ತಾಂತ್ರಿಕ ಕಾರಣಗಳಿಂದ ನಡೆದಿರಲಿಲ್ಲ.
*
ಶಿಕ್ಷಕರ ದತ್ತಾಂಶ ಸಾಫ್ಟವೇರ್‌ನಲ್ಲಿ ಸರಿಯಾದ ಮಾಹಿತಿ ಭರ್ತಿಯಾಗದೆ ಅಡಚಣೆ ಉಂಟಾಯಿತು. ಸರಿಪಡಿಸಿದ್ದೇವೆ. ಮುಂದಿನ ಕಡ್ಡಾಯ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳು ಸಾಂಗವಾಗಿ ನಡೆಯಲಿವೆ.

-ಬಿ.ಕೆ.ಬಸವರಾಜು, ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ

*

ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಅ.30ಕ್ಕೆ

ಪ್ರೌಢಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್‌ ಅಕ್ಟೊಬರ್‌ 30 ರಿಂದ ನವೆಂಬರ್‌ 5ರ ವರೆಗೆ ನಡೆಯಲಿದೆ. ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಆಕ್ಷೇಪಣೆಗಳಿದ್ದರೆ ಅ.22ರಿಂದ 26ರ ವರೆಗೆ ಸಲ್ಲಿಸಬಹುದಾಗಿದೆ.

ಕಡ್ಡಾಯ ವರ್ಗಾವಣೆಗೆಯ ಶಿಕ್ಷಕರ ಪಟ್ಟಿಯನ್ನು ನವೆಂಬರ್‌ 5ರಂದು ಪ್ರಕಟಿಸಲಾಗುವುದು. ಇದಕ್ಕೆ ನ.6ರಂದು ಆಕ್ಷೇಪಣೆ ಸಲ್ಲಿಸಬಹುದು. ನ.7ರಂದು ಅಂತಿಮ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತದೆ.

ಕೋರಿಕೆ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿ ನ.11ರಂದು ಹಾಗೂ ಪರಸ್ಪರ ವರ್ಗಾವಣೆ ಶಿಕ್ಷಕರ ಅಂತಿಮ ಪಟ್ಟಿ ನ.10ರಂದು ಬಿಡುಗಡೆ ಆಗಲಿದೆ. ನ.29ರಂದು ಕೌನ್ಸೆಲಿಂಗ್‌ ನಡೆಯಲಿದೆ ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT