ಭಾನುವಾರ, ಆಗಸ್ಟ್ 18, 2019
26 °C
ವರ್ಗಾವಣೆ ಪ್ರಕ್ರಿಯೆ ಸ್ಥಗಿತ: ಆತಂಕದಲ್ಲಿ ಗ್ರಾಮೀಣ ಶಿಕ್ಷಕರು

ನಗರದಲ್ಲೇ ಉಳಿಯಲು ಶಿಕ್ಷಕರಿಂದ ರಾಜಕೀಯ

Published:
Updated:
Prajavani

ಬೀದರ್: ಜಿಲ್ಲೆಯಲ್ಲಿ 12 ದಿನಗಳಿಂದ ನಡೆಯುತ್ತಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಹಠಾತ್ ಬ್ರೇಕ್‌ ಬಿದ್ದಿದೆ. ಇದರಿಂದ ನಗರ ಪ್ರದೇಶದಲ್ಲಿನ ಶಿಕ್ಷಕರು ಒಳಗೊಳಗೆ ಸಂತಸಗೊಂಡರೆ, ಗ್ರಾಮೀಣ ಪ್ರದೇಶದ ಶಿಕ್ಷಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಗರ ಪ್ರದೇಶದ ಶಾಲೆಗಳಲ್ಲೇ ಕೆಲಸ ಮಾಡಬೇಕು ಎನ್ನುವ ಶಿಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೆಚ್ಚಾಗಿದೆ.

ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಕಡ್ಡಾಯ ಮತ್ತು ಪರಸ್ಪರ ವರ್ಗಾವಣೆಯ ಕೌನ್ಸೆಲಿಂಗ್ ಪ್ರಕ್ರಿಯೆ ಆಗಸ್ಟ್‌ 13 ಮತ್ತು 14ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್.ಎಸ್.ಎ ಸಭಾಂಗಣದಲ್ಲಿ ನಡೆಯಬೇಕಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮುಂದಿನ ಆದೇಶ ನೀಡುವವರೆಗೂ ಶಿಕ್ಷಣ ಇಲಾಖೆಯ ಆಯುಕ್ತ ಕೆ.ಜಿ.ಜಗದೀಶ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ.

ಜಿಲ್ಲೆಯ ಶಿಕ್ಷಕರನ್ನು ಮೂರು ವಲಯಗಳಲ್ಲಿ ಗುರುತಿಸಲಾಗಿದೆ. ‘ಎ’ ವಿಭಾಗದಲ್ಲಿ ನಗರ ವ್ಯಾಪ್ತಿಯಲ್ಲಿ ಇರುವವರು , ‘ಬಿ’ ವಿಭಾಗದಲ್ಲಿ ನಗರದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಇರುವವರು ಹಾಗೂ ‘ಸಿ’ ವಿಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಇದ್ದಾರೆ. ಮೊದಲ ಕೌನ್ಸೆಲಿಂಗ್‌ನಲ್ಲಿ ‘ಎ’ ವಿಭಾಗದಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ‘ಬಿ’ ಹಾಗೂ ‘ಸಿ’ ವಿಭಾಗದ ಶಿಕ್ಷಕರ ವರ್ಗಾವಣೆ ಮಾಡಲಾಗಿದೆ.

‘ಎ’ ವಿಭಾಗದಲ್ಲಿ ಇರುವ 10 ವರ್ಷ ಮೇಲ್ಪಟ್ಟು ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ 83 ಶಿಕ್ಷಕರ ಹೆಸರನ್ನು ಕಡ್ಡಾಯ ವರ್ಗಾವಣೆ ಪಟ್ಟಿಯಲ್ಲಿ ಸೇರಿಸಲಾಗಿದೆ. ನಗರದ ಶಿಕ್ಷಕರನ್ನು ಗ್ರಾಮೀಣ ಪ್ರದೇಶಕ್ಕೆ ಕಳಿಸಲು ತಯಾರಿ ಸಹಿತ ನಡೆದಿತ್ತು. ಇವರಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಬೆಂಬಲಿಗರು ಹಾಗೂ ಶಿಕ್ಷಕರ ಸಂಘದ ಪ್ರಭಾವಿಗಳೂ ಇದ್ದಾರೆ. ಅನೇಕ ಶಿಕ್ಷಕರು ಇಂದಿಗೂ ರಾಜಕೀಯ ಮುಖಂಡರ ಕೃಪಾ ಕಟಾಕ್ಷದಿಂದ ನಗರದಲ್ಲಿ ಉಳಿದುಕೊಂಡಿದ್ದಾರೆ.

‘ಸಿ’ ವಿಭಾಗದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾಡಿ ಪಟ್ಟಿ ತಯಾರಿಸಲಾಗಿದೆ. ಆದರೆ, ಅವರಿಗೆ ವರ್ಗಾವಣೆ ಆದೇಶ ಪತ್ರ ಕೊಟ್ಟಿಲ್ಲ. ಒಂದು ವೇಳೆ ‘ಎ’ ವಿಭಾಗದ ಶಿಕ್ಷಕರ ವರ್ಗಾವಣೆಯಾಗದಿದ್ದರೆ ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡ ‘ಬಿ’ ಹಾಗೂ ‘ಸಿ’ ವಿಭಾಗದ ಶಿಕ್ಷಕರಿಗೆ ಅನ್ಯಾಯವಾಗಲಿದೆ.

ವರ್ಗಾವಣೆ ತೂಗು ಕತ್ತಿಯಿಂದ ತಪ್ಪಿಸಿಕೊಳ್ಳಲು ನಗರ ಪ್ರದೇಶದಲ್ಲಿರುವ ಶಿಕ್ಷಕರು ಮೂಲ ಸ್ಥಳದಲ್ಲೇ ಉಳಿಯಲು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಈಗಾಗಲೇ ಒಂಬತ್ತು ವರ್ಷ ನಗರದಲ್ಲಿ ಕಳೆದಿರುವ ಕೆಲವು ಶಿಕ್ಷಕರು ನಗರ ಪ್ರದೇಶದಲ್ಲಿನ ತಾವು ಈಗಾಗಲೇ ಕೆಲಸ ಮಾಡುತ್ತಿರುವ ಶಾಲೆ ಬಿಟ್ಟು ಬೇರೆ ಶಾಲೆಯನ್ನು ಆಯ್ಕೆ ಮಾಡಿಕೊಂಡು ನಗರದಲ್ಲೇ ಸುರಕ್ಷಿತವಾಗಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮುಂದಿನ ವರ್ಷ ವರ್ಗಾವಣೆ ಮಾಡಿಕೊಳ್ಳುವ ಮೊದಲೇ ಪರಸ್ಪರ ವರ್ಗಾವಣೆ ಮಾಡಿಕೊಂಡರೆ ದಾಖಲೆಯಲ್ಲಿ ಒಂದು ವರ್ಷ ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಗರ ಪ್ರದೇಶದಲ್ಲಿ ಶಿಕ್ಷಕರು ಸಲ್ಲಿಸಿದ ಒಟ್ಟಾರೆ ಸೇವಾ ಅವಧಿಯನ್ನು ಸಮಗ್ರವಾಗಿ ಪರಿಗಣಿಸಬೇಕು ಎಂದು ಗ್ರಾಮೀಣ ಪ್ರದೇಶದ ಶಿಕ್ಷಕರು ಮನವಿ ಮಾಡುತ್ತಾರೆ.

Post Comments (+)