ಭಾನುವಾರ, ಆಗಸ್ಟ್ 25, 2019
20 °C
ನೆರೆ ಹಾವಳಿ– ಮುಖ್ಯಮಂತ್ರಿ ಅಲಭ್ಯ: ಶಿಕ್ಷಕರ ವರ್ಗಾವಣೆ ಅನಿರ್ದಿಷ್ಟ ಮುಂದಕ್ಕೆ

ಶಿಕ್ಷಕರ ಕಡ್ಡಾಯ ವರ್ಗಾವಣೆ ಮಿತಿ ಸಡಿಲಿಕೆ ಸನ್ನಿಹಿತ?

Published:
Updated:

ಬೆಂಗಳೂರು: ಶಿಕ್ಷಕರ ವರ್ಗಾವಣೆ ಗೊಂದಲ ಬಗೆಹರಿಸಲು ಮುಂದಾಗಿರುವ ಇಲಾಖೆ, ನಿಯಮಗಳನ್ನು ಬದಲಾವಣೆ ಮಾಡುವ ಮೂಲಕ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಹಾಲಿ ನಿಯಮದ ಪ್ರಕಾರ ಶೇ 20ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳಿದ್ದರೆ ಅಂತಹ ತಾಲ್ಲೂಕಿಗೆ ಮಾತ್ರ ಕಡ್ಡಾಯ ವರ್ಗಾವಣೆಗೆ ಗುರಿಯಾಗುವ ಶಿಕ್ಷಕರನ್ನು ವರ್ಗಾವಣೆ ಮಾಡಬಹುದಿತ್ತು. ಈ ಷರತ್ತಿನಿಂದಾಗಿ, ಆಯ್ಕೆಗೆ ಅವಕಾಶಗಳಿಲ್ಲದ ಕಾರಣಕ್ಕೆ ಅನೇಕ ಶಿಕ್ಷಕರು ಕಡ್ಡಾಯ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಶಿಕ್ಷಕರು, ಕಡ್ಡಾಯ ವರ್ಗಾವಣೆ ಸ್ಥಗಿತಗೊಳಿಸುವಂತೆ ಸರ್ಕಾರ ಮೇಲೆ ಒತ್ತಡ ಹೇರಿದ್ದರು. ಇದರಿಂದಾಗಿ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿತ್ತು.

ವರ್ಗಾವಣೆ ಪ್ರಕ್ರಿಯೆ ನಿಲ್ಲಿಸುವುದೋ ಅಥವಾ ಸ್ಥಗಿತಗೊಳಿಸುವುದೋ ಎಂಬ ಬಗ್ಗೆ  ಕಾನೂನು ಇಲಾಖೆಯ ಸಲಹೆ ಪಡೆದಿದ್ದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲು ನಿರ್ಧರಿಸಿದ್ದರು. ಮುಖ್ಯಮಂತ್ರಿ ನಿರ್ದೇಶನದ ಅನುಸಾರ ಮುಂದಿನ ಹೆಜ್ಜೆ ಇಡುವುದು ಇಲಾಖೆಯ ಆಲೋಚನೆಯಾಗಿತ್ತು. ಆದರೆ ಮುಖ್ಯಮಂತ್ರಿ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸದಲ್ಲಿರುವುದರಿಂದ ಈ ಚರ್ಚೆ ನಡೆಯಲಿಲ್ಲ.

‘ಮುಖ್ಯಮಂತ್ರಿ ಅವರೂ ನಗರದಲ್ಲಿಲ್ಲ, ನನಗೂ ಬೇರೆ ಕೆಲಸಗಳ ಒತ್ತಡ ಇತ್ತು, ಹೀಗಾಗಿ ಮಂಗಳವಾರ ಚರ್ಚೆ ನಡೆಸುವುದು ಸಾಧ್ಯವಾಗಿಲ್ಲ, ಬುಧವಾರ ಚರ್ಚೆ ನಡೆಸಲಿದ್ದೇವೆ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ತಿಳಿಸಿದರು. 

‘ಕಾನೂನು ಇಲಾಖೆಯ ಸಲಹೆ ಪಡೆಯಲಿರುವ ಮುಖ್ಯಮಂತ್ರಿ ಅವರು ಸಮ್ಮತಿ ಸೂಚಿಸುವವರೆಗೆ ವರ್ಗಾವಣೆ ಪ್ರಕ್ರಿಯೆ ನಡೆಯುವುದಿಲ್ಲ’ ಎಂದು ಆಯುಕ್ತ ಡಾ.ಕೆ.ಜಿ.ಜಗದೀಶ್‌ ಹೇಳಿದರು.

ಸುಗ್ರೀವಾಜ್ಞೆಯೂ ಸಾಧ್ಯ: ‘ಶೇ 4ರ ವರ್ಗಾವಣೆ ಮಿತಿ ಸಹಿತ ಕಾಯ್ದೆಯಲ್ಲಿನ ಹಲವು ನಿಯಮಗಳ ಬದಲಾವಣೆ ಮಾಡಬೇಕಾದರೆ ಸುಗ್ರೀವಾಜ್ಞೆಯ ಅಗತ್ಯ ಇದೆ. ಮುಖ್ಯಮಂತ್ರಿ ಅವರು ಮನಸ್ಸು ಮಾಡಿದರೆ ಈ ಬಾರಿಯೇ ಅದು ಸಾಧ್ಯ. ಆದರೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಹಿತ ಹಲವು ಪ್ರಕ್ರಿಯೆಗಳು ಇರುವುದರಿಂದ ವಿಳಂಬವಾಗುವ ಸಾಧ್ಯತೆಯೂ ಇದೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಹೇಳಿದರು.

* ಶೇ 20ಕ್ಕಿಂತ ಅಧಿಕ ಖಾಲಿ ಇರುವ ತಾಲ್ಲೂಕುಗಳಿಗಷ್ಟೇ ವರ್ಗಾವಣೆ ಎಂಬ ನಿಯಮ ಸಡಿಲಿಸಿದರೆ ಶೇ 80ರಷ್ಟು ಸಮಸ್ಯೆಗಳು ನಿವಾರಣೆಯಾಗುವುದು ನಿಶ್ಚಿತ

- ವಿ.ಎಂ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

* ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಕಾನೂನು ಇಲಾಖೆಯ ಸಲಹೆ ಪಡೆದು ಮುಂದಿನ ಹೆಜ್ಜೆ ಇರಿಸುತ್ತೇವೆ

- ಡಾ.ಕೆ.ಜಿ.ಜಗದೀಶ್‌, ಪ್ರಾಥಮಿಕ ಶಿಕ್ಷಣ ಇಲಾಖೆಯ ಆಯುಕ್ತ

Post Comments (+)