ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಪ್ರಾಣಿಗಳ ಅನ್ನದಾತರಿವರು!

ಕೊರೋನಾ ಹೊಡೆತಕ್ಕೆ ಬಳಲಿದ ಬೀಡಾಡಿ ದನ, ನಾಯಿಗಳಿಗೆ ನೆರವು
Last Updated 2 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಇವರು ಅನಾಥ ಪ್ರಾಣಿಗಳ ಅನ್ನದಾತರು. ಕೊರೋನಾ –ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಎಲ್ಲಿಯೂ ಆಹಾರ, ನೀರು ದೊರಕದೆ ಬಳಲುತ್ತಿರುವ ಬಿಡಾಡಿ ದನ, ನಾಯಿಗಳ ಹೊಟ್ಟೆ ತುಂಬಿಸುತ್ತಿರುವವರು.

ಲಾಕ್‌ಡೌನ್‌ ಪರಿಣಾಮವಾಗಿ ಅತಂತ್ರರಾದ ಕಾರ್ಮಿಕರ ಸಮುದಾಯಕ್ಕೆ ಮೂರು ಹೊತ್ತು ಊಟ ದೊರಕುತ್ತಿದೆ. ಮನೆಯಲ್ಲೇ ಉಳಿದವರಿಗೆ ದಿನಸಿ ನೀಡುವ ಕೆಲಸವೂ ನಡೆದಿದೆ. ಆದರೆ ಕೇಳುವವರಿಲ್ಲದೆ ಸೊರಗಿದ್ದ ಮೂಕ ಪ್ರಾಣಿಗಳಿಗೆ ಕೇರ್‌ ಸಂಸ್ಥೆಯ ಸ್ವಯಂಸೇವಕರು ಅನ್ನದಾತರಾಗಿದ್ದಾರೆ.

ಅವರು ದಾನಿಗಳ ನೆರವಿನಿಂದ ಮಾರ್ಚ್‌ 27ರಿಂದ ದಿನವೂ ಪ್ರಾಣಿಗಳಿಗೆ ದಿನವೂ ಸಂಜೆ ಬನ್‌, ಬಿಸ್ಕೆಟ್‌, ಹಾಲು–ಅನ್ನ, ಹಣ್ಣುಗಳನ್ನು ನೀಡುತ್ತಿದ್ದಾರೆ. ಲಾಕ್‌ಡೌನ್‌ ಕಾಲದ ಸಮಯವನ್ನು ಅನ್ನದಾಸೋಹಕ್ಕೆ ಮೀಸಲಿಟ್ಟು ಸಂತೃಪ್ತಿ ಕಾಣುತ್ತಿದ್ದಾರೆ.

ಒಂದೂವರೆ ಕ್ವಿಂಟಲ್‌ ಅಕ್ಕಿ: ಸಾವಿರಾರು ದನ, ನಾಯಿಗಳಿಗಾಗಿ ಸ್ವಯಂಸೇವಕರು ದಿನವೂ ಸುಮಾರು ಒಂದೂವರೆ ಕ್ವಿಂಟಲ್‌ ಅಕ್ಕಿ ಬಳಸಿ ಅನ್ನ ತಯಾರಿಸುತ್ತಿದ್ದಾರೆ.

ನಗರದ ಗಾಂಧೀನಗರದ ಎರಡನೇ ಕ್ರಾಸ್‌ನಲ್ಲಿರುವ ಕೇರ್‌ ಕಚೇರಿ ಆವರಣವೇ ಪಾಕಶಾಲೆಯಾಗಿದೆ. ಮೂವತ್ತಕ್ಕೂ ಹೆಚ್ಚು ಸ್ವಯಂಸೇವಕರು ತಾವು ವಾಸವಿರುವ ಪ್ರದೇಶದ ಪ್ರಾಣಿಗಳಿಗೆ ಅನ್ನ ಕೊಡುತ್ತಿದ್ದಾರೆ.

‘ಪ್ರತಿ ದಿನ ಒಂದೂವರೆ ಕ್ವಿಂಟಲ್‌ ಅಕ್ಕಿ, 15 ಕೆಜಿ ರಸ್ಕ್‌, ತಲಾ 12 ಬನ್‌ಗಳಿರುವ 20 ಪೊಟ್ಟಣ, 15 ಲೀಟರ್‌ ಹಾಲನ್ನು ಪ್ರಾಣಿಗಳಿಗೆ ಕೊಡುತ್ತಿದ್ದೇವೆ. ಅನ್ನವನ್ನು ನಾವೇ ತಯಾರಿಸುತ್ತಿದ್ದೇವೆ’ ಎಂದು ಕೇರ್‌ ಸಂಸ್ಥೆಯ ನಿಖಿತಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ದಿನ (ಮಾರ್ಚ್‌ 27) ನಾನು, ವರ್ಷಾ ಮತ್ತು ಆಕಾಶ್‌ ಈ ಕೆಲಸವನ್ನು ಶುರು ಮಾಡಿ ಸುಮಾರು 101 ಪ್ರಾಣಿಗಳಿಗೆ ಆಹಾರ ಕೊಟ್ಟೆವು. ನಂತರ ಸಂಸ್ಥೆಯ ಇತರರೂ ಕೈಜೋಡಿಸಿದರು. 40ಕ್ಕೂ ಹೆಚ್ಚು ದಾನಿಗಳೂ ಮುಂದೆ ಬಂದಿದ್ದರಿಂದ ದಿನವೂ ಒಂದು ಸಾವಿರಕ್ಕೂ ಹೆಚ್ಚು ಪ್ರಾಣಿಗಳಿಗೆ ನೆರವು ನೀಡಲು ಸಾಧ್ಯವಾಗುತ್ತಿದೆ’ ಎಂದರು.

‘ಹಾಲು, ಬನ್‌, ರಸ್ಕ್‌ಗಳನ್ನು ದಾನಿಗಳು ಕೊಟ್ಟಿದ್ದಾರೆ. ವಿ ಫಾರ್‌ ಯು ಸಂಸ್ಥೆಯು ನೀಡಿದ ಹಣದಿಂದ 12 ಕ್ವಿಂಟಲ್‌ ಅಕ್ಕಿ ಖರೀದಿಸಿದ್ದೇವೆ. ಜಿಲ್ಲಾಧಿಕಾರಿಯೂ ಈ ನಮ್ಮ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ’ ಎಂದರು.

ಅವರೊಂದಿಗೆ ಇದ್ದ ಸಂಸ್ಥೆಯ ಸ್ವಯಂಸೇವಕರಾದ ವರ್ಷಾ, ಅಂಜಿಬಾಬು, ಪ್ರಿಯಾಂಕ, ಸೋಮನಾಥ್‌ ಅನ್ನ ತಯಾರಿಸಿ, ಹರಡುತ್ತಿದ್ದರು. ದಿನವೂ ಸಂಜೆ 5ರಿಂದ ರಾತ್ರಿ 11ರವರೆಗೂ ಸ್ವಯಂಸೇವಕರು ಅನ್ನದಾಸೋಹ ನಡೆಸುತ್ತಿದ್ದಾರೆ

ಹಣ್ಣುಗಳು: ಕೇರ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಯುವಕರಾದ ಪ್ರಫುಲ್ಲಕುಮಾರ್‌ ಮತ್ತು ರಘುನಂದನ್‌ ತಮ್ಮ ಬಿಡುವಿನ ವೇಳೆಯಲ್ಲಿ ಬೀಡಾಡಿ ಹಸುಗಳಿಗೆ ಹಣ್ಣು, ಟೊಮೆಟೋ, ಕರ್ಬೂಜಾ ಹಣ್ಣುಗಳನ್ನು ಕೊಡುತ್ತಿದ್ದಾರೆ. ಕಷ್ಟದಲ್ಲಿರುವ, ರೋಗಪೀಡಿತ ರಾಸುಗಳನ್ನೂ ಅವರು ರಕ್ಷಿಸುತ್ತಿದ್ದಾರೆ.

ನಿಖಿತಾ ಅವರ ಸಂಪರ್ಕ ಸಂಖ್ಯೆ: 9663311681

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT