ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಬೊಟ್‌ಗಳ ನಡುವೆ ಏರ್ಪಡಲಿದೆ ಸ್ಪರ್ಧೆ

ನ.18ರಿಂದ ಬೆಂಗಳೂರು ಅಂತರರಾಷ್ಟ್ರೀಯ ತಂತ್ರಜ್ಞಾನ ಶೃಂಗ *ಐಟಿ ವಲಯದ ಆವಿಷ್ಕಾರಗಳ ಅನಾವರಣ
Last Updated 12 ನವೆಂಬರ್ 2019, 21:33 IST
ಅಕ್ಷರ ಗಾತ್ರ

ಬೆಂಗಳೂರು: ಡ್ರೋನ್ ಸ್ಪರ್ಧೆಗಳ ಮೂಲಕ ಕಳೆದ ಬಾರಿ ದೇಶದ ಗಮನ ಸೆಳೆದಿದ್ದ ಬೆಂಗಳೂರು ಅಂತರರಾಷ್ಟ್ರೀಯ ತಂತ್ರಜ್ಞಾನ ಶೃಂಗ (ಟೆಕ್‌ ಸಮಿಟ್), ಈ ಬಾರಿ ರೋಬೊಟ್‌ಗಳ ನಡುವೆ ಸ್ಪರ್ಧೆಗೆ ವೇದಿಕೆ ಕಲ್ಪಿಸಲಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಐಟಿ ಬಿಟಿ) ನ. 18ರಿಂದ 20ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಬೆಂಗಳೂರು ಟೆಕ್‌ ಸಮಿಟ್ ಹಮ್ಮಿಕೊಂಡಿದೆ. ಮೂರು ದಿನಗಳ ಶೃಂಗದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಫ್ರಾನ್ಸ್‌,ಬೆಲ್ಜಿಯಂ,ಡೆನ್ಮಾರ್ಕ್‌ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳು ಅನಾವರಣವಾಗಲಿವೆ. ವಿದ್ಯಾರ್ಥಿಗಳಿಗೆ ರೋಬೊಟಿಕ್ ಪ್ರೀಮಿಯರ್ ಲೀಗ್‌ ಹಮ್ಮಿಕೊಂಡಿದ್ದು, 200ಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ,‘ಐಟಿ ಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು4ನೇ ಅತಿ ದೊಡ್ಡ ತಂತ್ರಜ್ಞಾನದ ಸಮೂಹವಾಗಿ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಸೈಬರ್ ಭದ್ರತೆ, ವಿದ್ಯುತ್ ವಾಹನಗಳು, ಡ್ರೋನ್‌, ಕೃಷಿಯಲ್ಲಿ ತಂತ್ರಜ್ಞಾನ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತಂತ್ರಜ್ಞಾನಗಳ ಮೂಲಕ ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಲಿವೆ’ ಎಂದು ತಿಳಿಸಿದರು.

‘ನೂತನ ಮಾಹಿತಿ ತಂತ್ರಜ್ಞಾನ ನೀತಿಗೆ ಕೆಲದಿನಗಳಲ್ಲಿಯೇ ಅಂತಿಮ ರೂಪ ನೀಡಲಾಗುತ್ತದೆ. ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳನ್ನೂ ಕೇಂದ್ರೀಕರಿಸಿ, ಐಟಿ ಉದ್ಯಮದ ವ್ಯಾಪ್ತಿ ವಿಸ್ತರಿಸಲಾಗುವುದು. ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ನೀಡುವುದರ ಜತೆಗೆ ಉದ್ಯೋಗ ಮಾರುಕಟ್ಟೆಯಲ್ಲಿ ಎದುರಾಗುವ ಸವಾಲುಗಳಿಗೆ ಸನ್ನದ್ಧಗೊಳಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕೂಡಾ ಬಲಗೊಳಿಸಬೇಕಾಗಿದೆ.ಒಟ್ಟು ದೇಶಿಯ ಉತ್ಪಾದನೆಗೆ (ಜಿಡಿಪಿ) ಐಟಿ ಕ್ಷೇತ್ರವು ಶೇ 25ರಷ್ಟು ಕೊಡುಗೆ ನೀಡುತ್ತಿದೆ. ಹಾಗಾಗಿ, ಈ ಕ್ಷೇತ್ರಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಾಗುವುದು’ ಎಂದರು.

ಐಟಿ– ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಅತಿ ದೊಡ್ಡ ಕಾರ್ಯಕ್ರಮ. ಈ ಬಾರಿ ಆವಿಷ್ಕಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸಲು ಐಟಿ ಕ್ವಿಜ್ ಆಯೋಜಿಸಲಾಗಿದೆ.ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಈ ಶೃಂಗ ಸಹಾಯಕವಾಗಿದೆ. 20ಕ್ಕೂ ಹೆಚ್ಚಿನ ಜೈವಿಕ ತಂತ್ರಜ್ಞಾನ ನವೋದ್ಯಮಗಳು ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ’ ಎಂದರು.

*
ಯೋಚನೆಗಳ ವಿನಿಮಯಕ್ಕೆ ಇದು ಉತ್ತಮವಾದ ವೇದಿಕೆಯಾಗಿದೆ. ದೇಶದಲ್ಲಿ ಪ್ರತಿನಿತ್ಯ ಎರಡರಿಂದ ಮೂರು ನವೋದ್ಯಮ ಆರಂಭವಾಗುತ್ತಿದೆ. ಅದರಲ್ಲಿ ಒಂದು ಕರ್ನಾಟಕದ್ದೇ ಆಗಿರುತ್ತದೆ
–ಕಿರಣ್‌ ಮಜುಂದಾರ್‌ ಶಾ, ಬಯೋಕಾನ್ ಅಧ್ಯಕ್ಷೆ

ಶೃಂಗದ ವಿಶೇಷಗಳು

*ಗೋಷ್ಠಿಗಳಲ್ಲಿ ವಿವಿಧ ದೇಶದ ಐಟಿ ಕ್ಷೇತ್ರದ ತಜ್ಞರು ಭಾಗಿ

*ದೇಶ–ವಿದೇಶಗಳ ವಿವಿಧ ಮಾದರಿಗಳ ಪ್ರದರ್ಶನ

*ಐಟಿ ವಲಯದ ಮುಖ್ಯಸ್ಥರ ಜತೆಗೆ ಚರ್ಚೆ

*ರೋಬೊಟ್‌ಗಳ ನಡುವೆ ಸ್ಪರ್ಧೆ

*ಬಯೋ ಕ್ವಿಜ್

*ಬಯೋ ಪೋಸ್ಟರ್ ನಿರ್ಮಾಣ

*ಬೆಂಗಳೂರು ಗ್ರಾಮೀಣ ಕ್ವಿಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT